ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ: ಕೆ–ಸೆಟ್‌ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ತಯಾರು

ಪರಿಣಿತರ ಚಟುವಟಿಕೆಗಳ ಮೇಲೆ ಕಣ್ಗಾವಲು ಕೊರತೆ
Last Updated 28 ಏಪ್ರಿಲ್ 2022, 18:01 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮಾರ್ಚ್‌ನಲ್ಲಿ ನಡೆಸಿದ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯ ಕೆಲ ಪ್ರಶ್ನೆ ಪತ್ರಿಕೆಗಳನ್ನು ಮೈಸೂರು ವಿಶ್ವವಿದ್ಯಾಲಯದ ಮೌಲ್ಯ ಭವನದಲ್ಲಿರುವ ಕೆ–ಸೆಟ್‌ ಕೇಂದ್ರದಲ್ಲೂ ರೂಪಿಸಿರುವುದು ಗೊತ್ತಾಗಿದೆ.

ಅಕ್ಟೋಬರ್‌–ನವೆಂಬರ್‌ ತಿಂಗಳಿನಲ್ಲಿ 26 ಐಚ್ಛಿಕ ವಿಷಯಗಳ ತಲಾ ಮೂರು ಸೆಟ್‌ ಪ್ರಶ್ನೆ ಪತ್ರಿಕೆಗಳನ್ನು ವಿಷಯ ಪರಿಣತರು ಹತ್ತು ದಿನಗಳ ಅವಧಿಯಲ್ಲಿ ರೂಪಿಸಿದ್ದರು. ಆದರೆ, ಈ ಕೇಂದ್ರದ ಹಲವು ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ. ಪರಿಣಿತರ ಚಟುವಟಿಕೆಗಳ ಮೇಲೆ ಸರಿಯಾಗಿ ನಿಗಾ ಕೂಡ ಇಟ್ಟಿರಲಿಲ್ಲ ಎನ್ನಲಾಗಿದೆ.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಒಮ್ಮೆ ಬಂದು ಕೇಂದ್ರ ಪರಿಶೀಲಿಸಿ ಹೋಗಿದ್ದರು. ಬಳಿಕ ಪ್ರಾಧಿಕಾರದ ಉಸ್ತುವಾರಿಯಲ್ಲಿ ಪ್ರಶ್ನೆ ಪತ್ರಿಕೆ ರೂಪಿಸಿದ್ದರು. ಆದರೆ, ಯಾವ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲಾಗುತ್ತಿದೆ ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ’ ಎಂದು ಕೆ–ಸೆಟ್‌ ಸಂಯೋಜಕ ಪ್ರೊ.ಎಚ್‌.ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಶ್ನೆ ಪತ್ರಿಕೆ ತಯಾರಿಸಲೆಂದು ಕೆ–ಸೆಟ್‌ ಕೇಂದ್ರದಲ್ಲಿ ಇರುವ ನಾಲ್ಕು ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ. ದಾಖಲೆಗಳನ್ನು ಸಂಗ್ರಹಿಸಿಡುವ ನಾಲ್ಕು ಸ್ಟ್ರಾಂಗ್‌ ರೂಮ್‌ಗಳ ಪೈಕಿ ಎರಡರಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಕಾನ್ಫರೆನ್ಸ್‌ ಹಾಲ್‌ ಕೂಡ ಇದೆ. ಆದರೆ, ಪ್ರಶ್ನೆ ಪತ್ರಿಕೆ ರಚಿಸಿ ಆರು ತಿಂಗಳಾಗಿರುವುದರಿಂದ ಆ ದೃಶ್ಯಗಳು ಸಿಗುತ್ತವೆಯೋ ಇಲ್ಲವೋ ಗೊತ್ತಿಲ್ಲ’ ಎಂದರು.

‘ಪ್ರಶ್ನೆ ಪತ್ರಿಕೆ ರಚಿಸುವ ಸಂದರ್ಭದಲ್ಲಿ ಭದ್ರತೆ ಇತ್ತು. ನಮ್ಮ ಕೇಂದ್ರದಿಂದ ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಆಗಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT