ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮ ರಥ ಯಾತ್ರೆ’ ಮೇಲೆ ಕಲ್ಲು ತೂರಾಟ; ಮೂವರಿಗೆ ಗಾಯ

Last Updated 29 ಜನವರಿ 2021, 18:51 IST
ಅಕ್ಷರ ಗಾತ್ರ

ಬೆಂಗಳೂರು: ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಹೊರಟಿದ್ದ ‘ರಾಮ ರಥ ಯಾತ್ರೆ’ ವಾಹನದ ಮೇಲೆ ಗುರಪ್ಪನಪಾಳ್ಯದ ಬಿಸ್ಲಿಲ್ಲಾ ನಗರದಲ್ಲಿ ಶುಕ್ರವಾರ ಕಲ್ಲು ತೂರಾಟ ನಡೆಸಲಾಗಿದ್ದು, ಮೆರವಣಿಗೆಯಲ್ಲಿ ಹೊರಟಿದ್ದ ಮೂವರಿಗೆ ತೀವ್ರ ಗಾಯವಾಗಿದೆ.

ಗಾಯಗೊಂಡವರನ್ನು ಯಶವಂತ್ ಕಾಮತ್, ಶೇಷಾಚಲ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಕೆಲ ಸ್ಥಳೀಯ ನಿವಾಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

‘ರಸ್ತೆಯಲ್ಲಿ ಹೊರಟಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಗಾಯಾಳುಗಳ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಸಂಗ್ರಹಿಸಲಾಗಿದೆ. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಹೇಗಾಯಿತು? ಅದಕ್ಕೆ ಕಾರಣ ಯಾರು? ಯಾರಾದರೂ ಪ್ರಚೋದನೆ ನೀಡಿದರಾ? ಎಂಬುದರ ಬಗ್ಗೆ ತಿಳಿಯಲು ತನಿಖೆ ಮುಂದುವರಿದಿದೆ’ ಎಂದು ಆಗ್ನೇಯ ವಿಭಾಗದ ಪೊಲೀಸ್ ಮೂಲಗಳು ಹೇಳಿವೆ.

'ಬಿಸ್ಮಿಲ್ಲಾನಗರ ಪ್ರವೇಶಿಸುವಾಗಲೇ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು, ‘ನಗರದೊಳಗೆ ಬಂದರೆ ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿ ಹೋಗಿದ್ದರು. ಅದಾಗಿ ಕೆಲ ನಿಮಿಷದಲ್ಲಿ ಈ ಘಟನೆ ನಡೆದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಾಹನ ಅಡ್ಡಗಟ್ಟಿದ್ದ ಕಿಡಿಗೇಡಿಗಳು: ‘ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಕೆಲ ಯುವಕರು, ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ’ರಾಮ ರಥ ಯಾತ್ರೆ’ ಹಮ್ಮಿಕೊಂಡಿದ್ದರು. ವಾಹನದಲ್ಲಿ ಶ್ರೀರಾಮ ದೇವರ ಫೋಟೊ ಇತ್ತು. ವಾಹನದ ಮುಂದೆ ಸಾಗುತ್ತಿದ್ದ ಯುವಕರು, ಭಜನೆ ಮಾಡುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಬಿಸ್ಮಿಲ್ಲಾನಗರದ ಮೂಲಕ ವಾಹನ ಹೊರಟಿತ್ತು. ಬೈಕ್‌ನಲ್ಲಿ ಬಂದಿದ್ದ ಕಿಡಿಗೇಡಿಗಳಿಬ್ಬರು, ‘ನಮ್ಮ ಪ್ರದೇಶಕ್ಕೆ ಏಕೆ ಬಂದಿದ್ದೀರಾ’ ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿದ್ದರು. ಮಾತಿಗೆ ಮಾತು ಬೆಳೆದಿತ್ತು. ಅದೇ ವೇಳೆಯೇ ಕೆಲವರು, ವಾಹನದ ಮೇಲೆ ಕಲ್ಲು ತೂರಾಟ ನಡೆಸಿದರು. ವಾಹನದ ಗಾಜು ಒಡೆಯಿತು. ವಾಹನಕ್ಕೆ ಕಟ್ಟಿದ್ದ ಬ್ಯಾನರ್‌ ಸಹ ಹರಿದರು. ಸ್ಥಳದಲ್ಲಿದ್ದ ಯುವಕರಿಗೂ ಗಾಯಗಳಾದವು. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾದರು’ ಎಂದೂ ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT