ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘10 ತಿಂಗಳಲ್ಲಿ ಕಾಮಗಾರಿ ಮುಗಿಸಿ’

ಅವೆನ್ಯೂ ರಸ್ತೆ ಕಾಮಗಾರಿ ಪರಿಶೀಲಿಸಿದ ಬಿಬಿಎಂಪಿ ‌ಆಯುಕ್ತ
Last Updated 5 ಮಾರ್ಚ್ 2021, 21:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅವೆನ್ಯೂ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಟೆಂಡರ್ ಶ್ಯೂರ್ ಕಾಮಗಾರಿಯನ್ನು 10 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಈ ರಸ್ತೆಯನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು‌.

ಮೂರು ಹಂತಗಳಲ್ಲಿ ಕಾಮಗಾರಿ: 'ಅವೆನ್ಯೂ ರಸ್ತೆ 1 ಕಿ.ಮೀ 80 ಮೀಟರ್ ಉದ್ದವಿದ್ದು, ಎಲ್ಲ ಕಡೆ ರಸ್ತೆ ಅಗೆದರೆ ವ್ಯಾಪಾರ ವಹಿವಾಟು ಹಾಗೂ ಹೆಚ್ಚು ಸಂಚಾರದಟ್ಟಣೆಯಾಗಲಿದೆ ಎಂಬ ಕಾರಣಕ್ಕೆ ಸಂಚಾರ ಪೊಲೀಸ್ ವಿಭಾಗವು 300 ಮೀಟರ್‌ಗಳಂತೆ ಮೂರು ಹಂತಗಳಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಮತಿ ನೀಡಿದೆ' ಎಂದರು.

‘ಮೊದಲ ಹಂತದ 300 ಮೀಟರ್ ರಸ್ತೆಯಲ್ಲಿ ಎರಡೂ ಕಡೆ ಒಳಚರಂಡಿ ಮಾರ್ಗದ ಕಾಮಗಾರಿ ಮುಕ್ತಾಯವಾಗಿದೆ. ಇನ್ನು ಒಂದು ಭಾಗದಲ್ಲಿ 26 ಬೆಸ್ಕಾಂ ಕೇಬಲ್‌ಗಳು ಬರಲಿದ್ದು, 900 ಎಂ.ಎಂನ ರಾಜಕಾಲುವೆ ಮಾರ್ಗವೂ ಬರಲಿದೆ. 6 ಬೆಸ್ಕಾಂ ಕೇಬಲ್ ಹಾಗೂ 5 ಒ.ಎಫ್.ಸಿ ಕೇಬಲ್‌ಗಳು ಸೇರಿ 11 ಡಕ್ಟ್ ಬರಲಿವೆ' ಎಂದು ಮಾಹಿತಿ ನೀಡಿದರು.

ರಸ್ತೆ ಎತ್ತರಿಸಬೇಡಿ: 'ಅಂಗಡಿಗಳ ಸಮಾನಕ್ಕೆ ರಸ್ತೆ ಎತ್ತರಿಸಿದರೆ ಮಳೆಗಾಲದ ವೇಳೆ ಅಂಗಡಿಗಳಿಗೆ ನೀರು ನುಗ್ಗಲಿದೆ. ಆದ್ದರಿಂದ ಅಂಗಡಿಗಳಿಗಿಂತ ಕೆಳ ಭಾಗಕ್ಕೆ ರಸ್ತೆ ಕಾಮಗಾರಿ ಮಾಡುವಂತೆ ವರ್ತಕರು ಮನವಿ ಮಾಡಿದ್ದಾರೆ. ಈ ಸಂಬಂಧ ರಸ್ತೆ ಎತ್ತರಿಸದೆ ಅಂಗಡಿ ವರ್ತಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ' ಎಂದು ಆಯುಕ್ತರು ತಿಳಿಸಿದರು.

ದೂಳು ನಿಯಂತ್ರಿಸಿ: 'ಕಾಮಗಾರಿಗಾಗಿ ಪಾದಚಾರಿ ಮಾರ್ಗಗಳನ್ನು ಅಗೆದಿರುವ ಪರಿಣಾಮ ದೂಳು ಅಂಗಡಿಗಳಿಗೆ ಬರುತ್ತಿದೆ' ಎಂದು ವರ್ತಕರು ದೂರಿದರು.

'ಈ ಸಂಬಂಧ ದಿನಕ್ಕೆ ಎರಡು ಬಾರಿ ನೀರಿನ ಟ್ಯಾಂಕರ್ ಮೂಲಕ ರಸ್ತೆ ಮೇಲೆ ನೀರು ಸಿಂಪಡಿಸಿ ಅಂಗಡಿಗಳಿಗೆ ದೂಳು ಹೋಗದಂತೆ ಕ್ರಮವಹಿಸಬೇಕು' ಎಂದು ಆಯುಕ್ತರು ಸೂಚನೆ
ನೀಡಿದರು.

ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್ ರಂಗನಾಥ್ ನಾಯ್ಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT