ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧಪೂಜೆ ವೇಳೆ ಕೇಸರಿ ದಿರಿಸಿನಲ್ಲಿ ಪೊಲೀಸರು! ಖಾಕಿ ಪಡೆ ವರ್ತನೆಗೆ ತೀವ್ರ ವಿರೋಧ

Last Updated 17 ಅಕ್ಟೋಬರ್ 2021, 19:56 IST
ಅಕ್ಷರ ಗಾತ್ರ

ವಿಜಯಪುರ/ಉಡುಪಿ/ಬೆಂಗಳೂರು: ವಿಜಯಪುರ ಗ್ರಾಮೀಣ ಹಾಗೂ ಉಡುಪಿ ಜಿಲ್ಲೆಯ ಕಾಪು ಪೊಲೀಸ್‌ ಠಾಣೆಗಳಲ್ಲಿ ಪೊಲೀಸರು ಕೇಸರಿ ದಿರಿಸು ಧರಿಸಿ ಆಯುಧ ಪೂಜೆ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿದಾಡುತ್ತಿದ್ದು, ಖಾಕಿ ಪಡೆಯ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ವಿಜಯಪುರ ಗ್ರಾಮೀಣ ಠಾಣೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌ ಸೇರಿದಂತೆ ಎಲ್ಲರೂ ಕೇಸರಿ ಶಾಲು, ಬಿಳಿ ಟೊಪ್ಪಿ, ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು. ಕೇಸರಿ ಶಾಲು ಧರಿಸಿರುವುದನ್ನು ಎಸ್‌ಪಿ ಸಮರ್ಥಿಸಿಕೊಂಡಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿನ ಆಯುಧ ಪೂಜೆ ವೇಳೆ ಅಲ್ಲಿನ ಪುರುಷ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಸರಿ ಅಂಗಿ ಹಾಗೂ ಬಿಳಿ ಪಂಚೆ ಧರಿಸಿದ್ದರು. ಮಹಿಳಾ ಸಿಬ್ಬಂದಿಯಲ್ಲಿ ಹಲವರು ಕೇಸರಿ ಸೀರೆ ಧರಿಸಿದ್ದರು. ಇದು ತಮ್ಮ ಗಮನಕ್ಕೆ ಬಂದಿಲ್ಲ ಎಂದಿರುವ ಉಡುಪಿ ಎಸ್‌ಪಿ ಎನ್‌.ವಿಷ್ಣುವರ್ಧನ್‌, ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ.

ಭಾರಿ ವಿರೋಧ: ಎರಡೂ ಪೊಲೀಸ್‌ ಠಾಣೆಗಳಲ್ಲಿ ನಡೆದ ಆಯುಧ ಪೂಜೆಯ ಫೋಟೊಗಳು ಭಾನುವಾರ ಬೆಳಿಗ್ಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.

ಪೊಲೀಸರು ಹಿಂದುತ್ವ ಪರ ಸಂಘಟನೆಗಳಂತೆ ವರ್ತಿಸಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಪೊಲೀಸರು ಕೇಸರಿ ವಸ್ತ್ರ ಧರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

‘ಗೊಂದಲಕ್ಕೆ ಒಳಗಾಗಬೇಡಿ...! ಇದು ಹಿಂದೂ ಸಂಘಟನೆ ಬೈಟಕ್ ಅಲ್ಲ. ಇದು ನಮ್ಮ ಪೊಲೀಸರ ತಂಡ. ಜೈ ಶ್ರೀರಾಮ್...’ ಎಂಬ ಸಾಲುಗಳೊಂದಿಗೆ ಈ ಫೋಟೊಗಳನ್ನು ಹರಿಯಬಿಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರಗಳು ದಿನವಿಡೀ ಜೋರಾಗಿ ಸದ್ದು ಮಾಡಿದವು.

‘ಆಯುಧ ಪೂಜೆ ಅಂಗವಾಗಿ ಪೊಲೀಸ್ ಠಾಣೆಗಳಲ್ಲಿ ಮೊದಲಿನಿಂದಲೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಆ ಪ್ರಕಾರ ಅಂದು ವಿಜಯಪುರ ಗ್ರಾಮೀಣ ಠಾಣೆಯಲ್ಲೂ ಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಇದರಲ್ಲಿ ತಪ್ಪೇನಿಲ್ಲ. ಮುಸ್ಲಿಮರು ಕರೆದರೂ ಹೋಗುವೆ, ನಮಾಜ್ ಮಾಡುವೆ. ನಾನು ಯಾವುದೇ ಆಚರಣೆಯ ವಿರೋಧಿಯಲ್ಲ’ ಎಂದು ವಿಜಯಪುರ ಎಸ್‌ಪಿ ಆನಂದಕುಮಾರ್‌ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ಪ್ರಶ್ನೆಗಳ ಸುರಿಮಳೆ: ಪೊಲೀಸರು ಕೇಸರಿ ದಿರಿಸಿನಲ್ಲಿರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಹಲವರು, ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣದಿಂದ ಪೊಲೀಸರು ಪ್ರಭಾವಿತರಾಗಿ ಈ ರೀತಿ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.

‘ಪೊಲೀಸರ ಸಮವಸ್ತ್ರ ಬದಲಾಗಿದೆಯೆ?’, ‘ಪೊಲೀಸ್‌ ಇಲಾಖೆಯೇ ಕೇಸರಿ ಧರಿಸಿರುವುದು ಪೂರ್ವನಿಯೋಜಿತವೆ?’ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಉಡುಪಿ ಶಾಸಕ ಕೆ. ರಘುಪತಿ ಭಟ್‌, ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ಸೇರಿದಂತೆ ಹಲವರು ಪೊಲೀಸರ ಬೆಂಬಲಕ್ಕೆ ನಿಂತಿದ್ದಾರೆ. ಕೇಸರಿ ವಸ್ತ್ರ ಧರಿಸಿದ್ದನ್ನು ಟೀಕಿಸಿರುವವರ ವಿರುದ್ಧ ಅವರು ಹರಿಹಾಯ್ದಿದ್ದಾರೆ.

‘ಕಾಮಾಲೆ ಕಣ್ಣಿನಿಂದ ನೋಡಬೇಡಿ’:

ಸಿದ್ದರಾಮಯ್ಯ ಅವರೇ, ಶ್ವೇತವರ್ಣದ ದಿರಿಸು, ಅದಕ್ಕೊಂದು ಕೇಸರಿ ಬಣ್ಣದ ಶಲ್ಯ, ತಲೆಗೊಂದು ಗಾಂಧಿ ಟೋಪಿ ಇವು ನಿಮಗೆ ಜಂಗಲ್ ರಾಜ್, ಕೋಮುವಾದ ಅನಿಸಿದರೆ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಅದು ಮನೋರೋಗ ಆಗಿರಬಹುದು. ನಿಮ್ಮ ರಾಜಕೀಯ ಚಪಲಕ್ಕೆ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡಿ ಪೊಲೀಸರನ್ನು ಅವಮಾನಿಸಬೇಡಿ.

- ಬಿಜೆಪಿ ರಾಜ್ಯ ಘಟಕ

***

‘ತ್ರಿಶೂಲ, ಹಿಂಸೆಯ ದೀಕ್ಷೆ ಕೊಟ್ಟುಬಿಡಿ’:

ಪೊಲೀಸರು ಕೇಸರಿ ದಿರಿಸು ಧರಿಸಿ ಆಯುಧ ಪೂಜೆ ನೆರವೇರಿಸಿರುವ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪೊಲೀಸರ ದಿರಿಸು ಮಾತ್ರ ಏಕೆ ಬದಲಿಸಿದ್ದೀರಿ ಮುಖ್ಯಮಂತ್ರಿಗಳೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು, ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗೂಂಡಾಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿದ ಮುಖ್ಯಮಂತ್ರಿ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ, ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ.’ ಎಂದು ಹೇಳಿದ್ದಾರೆ.

‘ಇದು ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದ ಜಂಗಲ್ ರಾಜ್ ಅಲ್ಲ. ಬಸವರಾಜ ಬೊಮ್ಮಾಯಿ ಅವರೇ, ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಹಿಂದೂ ಹಬ್ಬದ ಸಮಯದಲ್ಲಿ ಹಿಂದೂ ಸಾಂಪ್ರದಾಯಿಕ ಉಡುಗೆ, ಅದೂ ಕೇಸರಿ ಬಣ್ಣದ್ದು ತೊಟ್ಟಿದ್ದಕ್ಕೇ ಈ ಮಟ್ಟದ ಅಸಹನೆ ನಿಮಗೆ ಉಂಟಾಗುತ್ತದೆ ಎಂದಾದರೆ, ನೀವೊಬ್ಬ ಮತೀಯವಾದಿ.’ ಎಂದು ಕೆಲವರು ಸಿದ್ದರಾಮಯ್ಯ ಅವರಿಗೆ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಫೋಟೊಗಳು ಬಹಿರಂಗ:

ವಿಜಯಪುರ ಗ್ರಾಮೀಣ ಮತ್ತು ಕಾಪು ಠಾಣೆಗಳ ಪೊಲೀಸರು ಕೇಸರಿ ವಸ್ತ್ರ ಧರಿಸಿದ್ದ ಫೋಟೊಗಳು ಬಹಿರಂಗಗೊಂಡು, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಪೊಲೀಸರು ಬಿಳಿ, ಹಸಿರು, ತಿಳಿಗೆಂಪು ಸೇರಿ ನಾನಾ ಬಣ್ಣಗಳ ದಿರಿಸಿ ಧರಿಸಿ ಆಯುಧ ಪೂಜೆ ಮಾಡಿರುವ ಫೋಟೊಗಳೂ ಬಹಿರಂಗವಾಗಿವೆ.

‘ಹಳೇ ಸಂಪ್ರದಾಯ; ಹೊಸದೇನಲ್ಲ’
ಬೆಂಗಳೂರು: ‘ಆಯುಧ ಪೂಜೆಯಂದು ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಹಾಗೂ ಇತರೆ ಪೂಜೆಗಳು ನಡೆಯುತ್ತವೆ. ಸಿಬ್ಬಂದಿ, ತಮ್ಮಿಷ್ಟದ ಬಟ್ಟೆಗಳನ್ನು ಧರಿಸಿಕೊಂಡು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ಹಳೇ ಸಂಪ್ರದಾಯ, ಹೊಸದೇನಲ್ಲ’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘ಕರ್ತವ್ಯದ ವೇಳೆ ಪೊಲೀಸ್ ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ, ಆಯುಧ ಪೂಜೆ ದಿನದಂದು ಸಿಬ್ಬಂದಿಯೇ ತಮ್ಮಿಷ್ಟದ ಬಟ್ಟೆಗಳನ್ನು ಹಾಕಿಕೊಂಡು ಬರುತ್ತಾರೆ. ಕೇಸರಿ, ಹಸಿರು, ಹಳದಿ, ಬಿಳಿ ಸೇರಿ ಎಲ್ಲ ಬಣ್ಣದ ಬಟ್ಟೆಗಳನ್ನೂ ಹಾಕಿಕೊಂಡು ಫೋಟೊಗಳನ್ನು ತೆಗೆಸಿಕೊಳ್ಳುತ್ತಾರೆ. ಇದೀಗ ಅಂಥ ಫೋಟೊಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ’ ಎಂದರು. ‘ಪೊಲೀಸರೂ ಮನುಷ್ಯರೇ. 24 ಗಂಟೆ ಜನರಿಗಾಗಿ ಕೆಲಸ ಮಾಡುವ ಅವರು, ಆಯುಧ ಪೂಜೆ ದಿನವೂ ಶ್ರದ್ಧೆಯಿಂದ ಸಾಂಪ್ರದಾಯಿಕ ಉಡುಗೆಯಲ್ಲಿ ತಮ್ಮ ಠಾಣೆಗಳಲ್ಲಿ ಪೂಜೆ ಮಾಡುತ್ತಾರೆ. ಅವರ ಬಟ್ಟೆಗಳ ಬಣ್ಣಗಳ ಆಧಾರದಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ಈ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT