ಮಂಗಳವಾರ, ಡಿಸೆಂಬರ್ 7, 2021
20 °C

ಹಿಂದುಳಿದವರು ಮೀಸಲಾತಿ ಕೇಳಿದರೆ ತಪ್ಪಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ‘ಮೀಸಲಾತಿ ವಿರೋಧಿಸಿದವರೇ ಈಗ ಮೀಸಲಾತಿ ಪಡೆಯುತ್ತಿದ್ದಾರೆ. ಬ್ರಾಹ್ಮಣರು, ರಜಪೂತರು ಸೇರಿ ಉನ್ನತ ಜಾತಿಯವರು ಶೇ 10 ಮೀಸಲಾತಿ ಪಡೆದುಕೊಂಡಿದ್ದಾರೆ. ಹೀಗಿರುವಾಗ ಹಿಂದುಳಿದವರು ಮೀಸಲಾತಿ ಕೇಳುವುದು ತಪ್ಪಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಸಮೀಪದ ಕುಬಟೂರು ಗ್ರಾಮದ ಬಂಗಾರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಸಂಯುಕ್ತ ಜನತಾದಳ ಇಬ್ಭಾಗವಾದಾಗ ದೇವೇಗೌಡರ ಜೊತೆ ನಾನು ಮತ್ತು ಕೆಲ ನಾಯಕರು ಸೇರಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದೆವು. ಆದರೆ, ಜೆಡಿಎಸ್ ಕುಟುಂಬದ ಪಕ್ಷವಾಗಿದೆ. ಹಾಗಾಗಿ ‘ಜೆಡಿಎಸ್‌’ ಬದಲು
‘ಜೆಡಿಎಫ್‌’ ಎಂದು ನಾಮಕರಣ ಮಾಡಿಕೊಳ್ಳಲಿ. ‘ಎಫ್’ ಅಂದರೆ ಫ್ಯಾಮಿಲಿ ಪಾರ್ಟಿ’ ಎಂದು ಅವರು ವ್ಯಂಗ್ಯವಾಡಿದರು.

‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರವನ್ನು ಯಾರೇ ಪ್ರಶ್ನೆ ಮಾಡಿದರೂ ಅವರು ದೇಶದ್ರೋಹಿಗಳು, ನಕ್ಸಲ್, ಭಯೋತ್ಪಾದಕರು ಎಂದು ಬಿಂಬಿಸಲಾಗುತ್ತಿದೆ. ಪ್ರಶ್ನೆ ಮಾಡುವವರ ವಿರುದ್ಧ ಐಟಿ, ಇಡಿ ಮೂಲಕ ದಾಳಿ ನಡೆಸುತ್ತಾರೆ. ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗುತ್ತದೆ. ಸತ್ಯ ಹೇಳಲು ಮುಂದಾಗುವ ಮಾಧ್ಯಮಗಳಿಗೆ ನೋಟಿಸ್ ನೀಡಲಾಗುತ್ತಿದೆ’ ಎಂದು ದೂರಿದರು.

‘ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಸ್ಪರ್ಧೆ ಇದೆ. ಜೆಡಿಎಸ್ ಪ್ರತಿಸ್ಪರ್ಧಿಯಲ್ಲ. ಬಿಜೆಪಿ ಕೋಮವಾದಿ ಪಕ್ಷವಾದರೆ ಜೆಡಿಎಸ್ ಆಂತರಿಕ ಕೋಮವಾದಿ ಪಕ್ಷ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು