ಸೊರಬ: ತಾಲ್ಲೂಕಿನ ತಾಳಗುಪ್ಪ ಗ್ರಾಮದ 6 ಜನ ರೈತರು ಬಗರ್‌ಹುಕುಂ ಭೂಮಿಯಲ್ಲಿ ಬೆಳೆಸಿದ್ದ ಅಡಿಕೆ ತೋಟ
ವನ್ನು ಶಾಸಕ ಕುಮಾರ್ ಬಂಗಾರಪ್ಪ ಕುಮ್ಮಕ್ಕಿನಿಂದ ತೆರವುಗೊಳಿಸಲಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬಗರ್‌ಹುಕುಂ ಜಮೀನನ್ನು ಅರಣ್ಯ ಇಲಾಖೆ ತೆರವುಗೊಳಿಸಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮರೆವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
6 ಜನ ರೈತರು 27 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ತೋಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶಾಸಕರ ಕುಮ್ಮಕ್ಕಿನಿಂದಾಗಿ ನಾಶಪಡಿಸಿದ್ದಾರೆ. ಬಡ ರೈತರು ಬೀದಿಗೆ ಬರಲು ಶಾಸಕರೇ ನೇರ ಕಾರಣ. ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುವ ಮೂಲಕ ರೈತರು ಸೇಡು ತೀರಿಸಿಕೊಳ್ಳಬೇಕು ಎಂದರು.
11 ವರ್ಷಗಳ ಹಿಂದೆಯೂ ತಾಳಗುಪ್ಪದಲ್ಲಿ ರೈತರ ಬಗರ್‌ಹುಕುಂ ಜಮೀನು ತೆರವಿಗೆ ಸರ್ಕಾರ ಮುಂದಾಗಿತ್ತು. ಅಂದು ರೈತರಿಗೆ ಬೆಂಬಲವಾಗಿ ನಿಂತು ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲಾಗಿದೆ ಎಂದು ಅವರು ಆರೋಪಿಸಿದರು.
‘ಇತ್ತೀಚೆಗಷ್ಟೇ ಪತಿಯನ್ನು ಕಳೆದು ಕೊಂಡಿರುವ ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಈಗ ಭೂಮಿಯನ್ನೂ ಕಳೆದು
ಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡುವ ಅಗತ್ಯವಿದೆ’ ಎಂದು ಮಧು ಬಂಗಾರಪ್ಪ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಮನವಿ ಮಾಡಿದರು. ಸ್ಥಳದಲ್ಲಿಯೇ ₹ 1.50 ಲಕ್ಷ ಸಂಗ್ರಹವಾಯಿತು. ಅದಕ್ಕೆ ಮಧು ಬಂಗಾರಪ್ಪ ಅವರೂ ವೈಯಕ್ತಿಕ ವಾಗಿ ₹ 1 ಲಕ್ಷ ಸೇರಿಸಿ ಒಟ್ಟು ₹ 2.50 ಲಕ್ಷ ಧನಸಹಾಯ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.