ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ ‘ವಿಶ್ವವಿದ್ಯಾಲಯ’ ಬಲಿಪರು

Last Updated 17 ಫೆಬ್ರುವರಿ 2023, 5:31 IST
ಅಕ್ಷರ ಗಾತ್ರ

ಕಿರಿಯ ಬಲಿಪ ನಾರಾಯಣ ಭಾಗವತರು ಸುಮಾರು ಎಪ್ಪತ್ತು ವರ್ಷ ಗಳಿಂದ ಯಕ್ಷಗಾನದ ‘ಬಲಿಪ ಪರಂಪರೆ’ಯನ್ನುಳಿಸುವ ವ್ರತದ ದೀಕ್ಷೆ ತೊಟ್ಟಿದ್ದರು. ತಮ್ಮ ಬಾಲ್ಯದಲ್ಲೇ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ಯಕ್ಷಗಾನದ ಸರ್ವಾಂಗ ಸೌಂದರ್ಯವನ್ನು ಬಲ್ಲವ ರಾಗಿದ್ದ ಕಿರಿಯ ಬಲಿಪರು ಅದರಲ್ಲಿ ಬದಲಾವಣೆಯನ್ನು ಒಪ್ಪಿ ಕೊಳ್ಳದ ನಿಷ್ಠರು. ಪುರಾಣದ ನೂರಾರು ಪ್ರಸಂಗಗಳನ್ನು ಕಂಠಪಾಠ ಹೊಂದಿದ್ದ ಭಾಗವತರು ರಂಗಸ್ಥಳದಲ್ಲಿ ಎಂದೂ ಅಪಸವ್ಯಕ್ಕೆ ಅವಕಾಶ ಕೊಟ್ಟ ವರಲ್ಲ. ಈ ಬದ್ಧತೆಗಾಗಿ, ಕಲೆಯೊಂದರ ಆತ್ಮ ಸೌಂದರ್ಯವನ್ನು ಪ್ರೀತಿಸುವವರಾಗಿ ಅವರು ನಿತ್ಯಸ್ಮರಣೀಯರು.

ಬಲಿಪರು ಮುಗ್ಧ ಮಗುವಿನಂತಹ ಮನಸಿನವರು. ಅವರನ್ನು ಕಂಡೊ ಡನೆ ಕೈಮುಗಿದು, ಕಾಲಿಗೆರಗಿ ಗೌರವಿಸುವಷ್ಟು ಶುಭ್ರವಾಗಿ ಬದುಕಿದವರು. 30ಕ್ಕೂ ಹೆಚ್ಚು ವರ್ಷ ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಕಲಾವಿದರನ್ನು ತಿದ್ದಿ ಪರಂಪರೆಯ ನಡೆ ಕಲಿಸಿದವರು. ಕಲಾವಿದರ ಮೇಲೆ ಅವರ ಪ್ರಭಾವ ಎಷ್ಟಿದೆಯೆಂದರೆ ಪುರಾಣ ಪ್ರಸಂಗಗಳನ್ನು ಪರಂಪರೆಯೊಂದಿಗೆ ನಡೆಸುವುದೆಂದರೆ ಬಲಿಪರ ಮಾರ್ಗದರ್ಶವಿಲ್ಲದೆ ಪೂರ್ಣವಾಗದು. ಅವರಿಗೆ ಯಕ್ಷಗಾನವೆಂದರೆ ಆಟ. ಆ ಆಟದ ನಡೆಗಳೆಂದರೆ ದೇವರ ಪೂಜೆ. ದಿನಗಟ್ಟಲೆ ಮಾತನಾಡಬಲ್ಲ ಜ್ಞಾನ ಸಂಪತ್ತಿನ ಬಗ್ಗೆ ಅವರಿಗೆ ಅಹಂಕಾರವಿರಲಿಲ್ಲ, ತಿಳಿಸಿ ಹೇಳುವುದೆಂದರೆ ಹೆಮ್ಮೆಯಿತ್ತು. ಆಹ್ಲಾದವಿತ್ತು. ಯಕ್ಷಗಾನದ ಕಮ್ಮಟವಿರಲಿ, ಸಮ್ಮೇಳನವಿರಲಿ ಬಲಿಪರಿಲ್ಲದೆ ಅಪೂರ್ಣವೆಂಬಂತಿತ್ತು. ಹಾಗಾಗಿ ಯಕ್ಷಗಾನದ ಬಗ್ಗೆ ಹೇಳುವಲ್ಲಿ ಅವರೊಂದು ವಿಶ್ವವಿದ್ಯಾಲಯದಂತಿದ್ದರು.

ಬಲಿಪರೆಂದರೆ ತಿಟ್ಟುಗಳ ಭೇದ ವನ್ನು ಮೀರಿ ಪ್ರೀತಿಸಲ್ಪಟ್ಟ ಭಾಗವತರು. ತುಂಬು ಬದುಕಿನಲ್ಲಿ ಅವರೆಂದೂ ಯಾ ರಲ್ಲೂ ಕೈಚಾಚಿದವರಲ್ಲ. ಕೈಹಿಡಿದ ಕಲೆ ಅವರನ್ನೆಂದೂ ಕೆಳಗಿಳಿಸಲಿಲ್ಲ. ತುಂಬು ಕುಟುಂಬದ ಹೊಣೆಗಾರಿಕೆಯನ್ನು ಮಡದಿ ಜಯಲಕ್ಷ್ಮಿ ಹೊತ್ತಿದ್ದರು. ಐದು ವರ್ಷಗಳ ಹಿಂದೆ ಅವರ ಅಗಲಿಕೆಯ ನಂತರ ತಮ್ಮೆಲ್ಲ ಪ್ರಸಂಗಗಳ ಹೊತ್ತಗೆಗೆ ‘ಜಯಲಕ್ಷ್ಮಿ’ ಎಂದೇ ಹೆಸರು ಸೂಚಿಸಿದ ಕುಟುಂಬ ಪ್ರೇಮಿ.

ಬಲಿಪರ ಭಾಗವತಿಕೆಯೆಂದರೆ ಧ್ವನಿ ವ್ಯವಸ್ಥೆಯಿಲ್ಲದ, ದೊಂದಿ ಬೆಳ ಕಿನ, ಗ್ಯಾಸ್ ಲೈಟ್ ಕಾಲದ ಆಟ. ಕಲಾ ರಸಿಕರಿಗೆ ಅದೊಂದು ಭ್ರಮಾ ಲೋಕದ, ಕನಸುಗಳನ್ನು ಬಿತ್ತುವ, ಕಲ್ಪನೆಯನ್ನು ಕಟ್ಟುವ ಶಕ್ತಿ ಕೊಟ್ಟ ಕಾಲ. ರಂಗದ ಹೊರಗಡೆ ಆಧುನಿಕತೆಗೆ ತಕ್ಕಂತೆ ಬದಲಾವಣೆಗಳು ಬಂದಾಗಲೂ ಅದನ್ನೊಪ್ಪಿಕೊಂಡರೂ ಪ್ರಸಂಗದ ನಡೆಯನ್ನು ಉಳಿಸಿಕೊಂಡು ಬಲಿಪ ಹೆಸರನ್ನು ಶಾಶ್ವತಗೊಳಿಸಿದರು. ಇಂದು ಅವರು ಅಗಲಿದರೂ ಬಲಿಪ ಎಂಬ ಹೆಸರು ಸದಾ ಹಸಿರಾಗಿರುತ್ತದೆ.

ಲೇಖಕಿ, ಅಧ್ಯಾಪಕಿ. ಬಲಿಪ ನಾರಾಯಣ ಭಾಗವತರ ಆತ್ಮಕಥನ ‘ಬಲಿಪ ಗಾನ ಯಾನ’ದ ಕರ್ತೃ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT