ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬಸವರಾಜ ಬೊಮ್ಮಾಯಿ ಕೈ ಬಲಪಡಿಸುತ್ತಾ ಬಿಜೆಪಿ ಕಾರ್ಯಕಾರಿಣಿ?

ದಾವಣಗೆರೆ ನಗರದ ಎಲ್ಲೆಡೆ ರಾರಾಜಿಸುತ್ತಿರುವ ಬಾವುಟ, ಫ್ಲೆಕ್ಸ್‌, ಕಟೌಟ್‌, ಬ್ಯಾನರ್‌ಗಳು
Last Updated 17 ಸೆಪ್ಟೆಂಬರ್ 2021, 5:27 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೆರಳಿನಿಂದ ಬೊಮ್ಮಾಯಿ ಅವರನ್ನು ಹೊರತಂದು ಜನಪ್ರಿಯ ನಾಯಕನನ್ನಾಗಿ ಮಾಡುವ ಪಕ್ಷದ ಪ್ರಯತ್ನಕ್ಕೆ ಬಲ ಬರಲಿದೆಯೇ ಎಂದು ಕುತೂಹಲ ಮೂಡಿಸಿದೆ.

‘ಮುಖ್ಯಮಂತ್ರಿ ಅವರಿಗೆ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಬೆಂಬಲವಾಗಿ ನಿಲ್ಲಲಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ತಕ್ಷಣ ಕೈಗೊಂಡಿರುವ ನಿರ್ಣಯ, ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ಏನು ಮಾಡಬೇಕು ಎಂಬುದು ಚರ್ಚೆಯಾಗಲಿದೆ. ‘ನಾನು ಮಾಸ್‌ ಲೀಡರ್‌ ಅಲ್ಲ’ ಎಂದು ಬೊಮ್ಮಾಯಿ ಅವರೇ ಹೇಳಿಕೊಂಡಿದ್ದಾರೆ. ಅವರನ್ನು ಮಾಸ್‌ ಲೀಡರ್‌ ಆಗಿ ಪಕ್ಷ ಮಾಡುತ್ತದೆ. ಅದಕ್ಕೆ ಸೆ.19ರಂದು ದಾವಣಗರೆಯಲ್ಲಿ ನಡೆಯುವ ಪಕ್ಷದ ರಾಜ್ಯ ಕಾರ್ಯಕಾರಿಣಿ ನೆರವಾಗಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಇರಲಿ, ಪಕ್ಷದ ಅಧ್ಯಕ್ಷರು ಇರಲಿ, ಎಲ್ಲರಿಗೂ ಬಲ ತುಂಬುವ ಕೆಲಸ ಕಾರ್ಯಕಾರಿಣಿ ಮೂಲಕ ಆಗುತ್ತದೆ. ರಾಜ್ಯದ ಅಭಿವೃದ್ಧಿಗೆ ಏನು ಯೋಜನೆಗಳನ್ನು ಹಾಕಿಕೊಳ್ಳಬೇಕು, ಮುಂದಿನ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಯಾರಿಗಳು ಹೇಗಿರಬೇಕು ಎಂಬುದು ಸೇರಿ ಪ್ರತಿಯೊಂದು ಅಂಶಗಳು ಕಾರ್ಯಕಾರಿಣಿಯಲ್ಲಿ ಚಿಂತನೆಗೆ ಒಳಗಾಗುತ್ತವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರತಿಕ್ರಿಯಿಸಿದ್ದಾರೆ.

‘ಸೆ.2ರಂದು ಅಮಿತ್‌ ಶಾ ದಾವಣಗೆರೆಗೆ ಬಂದ ಉದ್ದೇಶ ಕೂಡ ಅದೇ ಆಗಿತ್ತು. ಯಡಿಯೂರಪ್ಪ ಸಹಿತ ಮೊದಲ ಹಂತದ ನಾಯಕರ ಬದಲು ಎರಡನೇ ಹಂತದ ನಾಯಕರನ್ನು ಮುಂದಕ್ಕೆ ತರಬೇಕು ಎನ್ನುವ ಕಾರಣಕ್ಕಾಗಿಯೇ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು’ ಎಂದು ಬಿಜೆಪಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

‘ನಾಯಕತ್ವ ಪಲ್ಲಟದ ಪರಿಣಾಮ ಉಂಟಾಗದ ಹಾಗೇ ಈಗಾಗಲೇ ಪಕ್ಷ ಎಚ್ಚರ ವಹಿಸಿದೆ. ಹಿಂದಿನವರನ್ನು ಹೊಗಳುತ್ತಲೇ ಮುಂದಿನವರಿಗೆ ಜವಾಬ್ದಾರಿ ದಾಟಿಸಿದೆ. ಆ ಕೆಲಸಕ್ಕೆ ಕಾರ್ಯಕಾರಿಣಿ ಇನ್ನಷ್ಟು ಬಲ ತುಂಬಲಿದೆ’ ಎಂಬುದು ಅವರ ವಿವರಣೆಯಾಗಿದೆ.

ಬಿಜೆಪಿ ನಾಯಕರ ದಂಡಿನ ಸ್ವಾಗತಕ್ಕೆ ಸಿದ್ಧವಾದ ನಗರ

ಸೆ.18ರಂದು ಅಪೂರ್ವ ರೆಸಾರ್ಟ್‌ನಲ್ಲಿ ನಡೆಯಲಿರುವ ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಸೆ. 19ರಂದು ತ್ರಿಶೂಲ್‌ ಕಲಾಭವನದಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿಗೆ ಸಂಬಂಧಿಸಿದಂತೆ ದಾವಣಗೆರೆ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ರಸ್ತೆಗಳಲ್ಲಿ ಬಿಜೆಪಿಯ ಬಾವುಟಗಳು, ಆಳೆತ್ತರದ ಸ್ವಾಗತ ಕಟೌಟ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಸಹ ಪ್ರಭಾರಿ ಡಿ.ಕೆ. ಅರುಣ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರದ ಸಚಿವರಾದ ಪ್ರಹ್ಲಾದ್‌ ಜೋಶಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ಭಗವಂತ ಖೂಬಾ, ರಾಜ್ಯದ ಸಚಿವರು, ಶಾಸಕರು, ಸಂಸದರು, ವಿಶೇಷ ಆಹ್ವಾನಿತರು ಸೇರಿ 574 ಮಂದಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT