ಶನಿವಾರ, ಸೆಪ್ಟೆಂಬರ್ 18, 2021
21 °C

ಸಂಪುಟದಿಂದ ‘ಕಳಂಕಿತ’ರ ದೂರ ಇಡಿ: ಆರ್‌ಎಸ್‌ಎಸ್‌ ಸಲಹೆ- ತಡೆಯಾಜ್ಞೆಯೇ ತೊಡಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಬೆಂಗಳೂರು: ಬಿಜೆಪಿಯಲ್ಲಿ ವಿವಾದಕ್ಕೆ ಒಳಗಾಗಿರುವ ಶಾಸಕರು, ಅದರಲ್ಲೂ ಮಾಧ್ಯಮಗಳು ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಸೂಕ್ತವಲ್ಲ ಎಂದು ಆರ್‌ಎಸ್‌ಎಸ್‌ ಮುಖಂಡರು ಬಿಜೆಪಿ ವರಿಷ್ಠರಿಗೆ ಸಲಹೆ ನೀಡಿದ್ದಾರೆ.

‘ಬೊಮ್ಮಾಯಿ ಸಂಪುಟದಲ್ಲಿ ಶುದ್ಧ ಚಾರಿತ್ರ್ಯ ಹೊಂದಿರುವವರಿಗೆ ಆದ್ಯತೆ ನೀಡಬೇಕು. ವಿವಾದಕ್ಕೆ ಒಳಗಾಗಿರುವ ಶಾಸಕರು ಬಿಜೆಪಿ ಮೂಲದವರು ಅಥವಾ ಹೊರಗಿನಿಂದ ಬಂದವರಾಗಿರಬಹುದು, ಅವರನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಈಗಾಗಲೇ ಇಂತಹವರಿಂದ  ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಅವರು ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮಾನಹಾನಿಕರವಾದ ಆಪಾದನೆ ಅಥವಾ ಸಂಶಯಕ್ಕೆ ಗುರಿಯಾಗಿರುವವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡ ಬಳಿಕ ರಮೇಶ ಜಾರಕಿಹೊಳಿ ಎದುರಿಸಿದ ಪ್ರಕರಣ ಮರುಕಳಿಸಿದರೆ ಸರ್ಕಾರ ಮತ್ತೆ ಮುಜುಗರ ಎದುರಿಸಬೇಕಾಗುತ್ತದೆ. ಸೇರಿಸಿಕೊಳ್ಳುವವರ ಚಾರಿತ್ರ್ಯವನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು. ಕಳಂಕಿತರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರಿಂದ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ಎರಡು ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಸಂಘದ ಪ್ರಮುಖರು ಸಲಹೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

‘ರಮೇಶ ಜಾರಕಿಹೊಳಿಯವರ ಸಿ.ಡಿ ಬಹಿರಂಗಗೊಂಡ ಬೆನ್ನಲ್ಲೇ ಬಿಜೆಪಿಗೆ ವಲಸೆ ಬಂದು ಸಚಿವರಾಗಿದ್ದ 6 ಮಂದಿ ಮಾಜಿ ಸಚಿವರು ತಮ್ಮ ವಿರುದ್ಧ ಮಾನಹಾನಿಕಾರಕ ಸುದ್ದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದಕ್ಕೂ ಮೊದಲೇ ಬಿಜೆಪಿಯ ಇನ್ನೂ ಕೆಲವು ಶಾಸಕರು ತಡೆಯಾಜ್ಞೆ ತಂದಿದ್ದಾರೆ. ಇಂತಹವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಪಕ್ಷ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಇವರಲ್ಲಿ ಕೆಲವರನ್ನು ಕೈಬಿಟ್ಟರೆ ಸರ್ಕಾರದ ಮೇಲೆ ಪರಿಣಾಮ ಏನಾಗಬಹುದು ಎಂಬ ಚಿಂತನೆ ನಡೆದಿದೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ಸಂಪುಟ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೇಂದ್ರ ನಾಯಕರ ಜತೆ ಚರ್ಚೆ ನಡೆಸಿ ಮುಂದಿನವಾರದ ಕೊನೆಯ ಒಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.

ಆಕಾಂಕ್ಷಿಗಳ ದಂಡು ದೆಹಲಿಗೆ: ಬೊಮ್ಮಾಯಿ ಸಂಪುಟ ಸೇರಿಕೊಳ್ಳುವ ಬಯಕೆಯೊಂದಿಗೆ ಗುರುವಾರ ದೆಹಲಿಗೆ ದೌಡಾಯಿಸಿರುವ ಅನೇಕ ಶಾಸಕರು, ತಮ್ಮ ಮನವಿ ಸಲ್ಲಿಸಲು ವರಿಷ್ಠರ ಭೇಟಿಗೆ ಸಮಯ ಕೋರಿದ್ದಾರೆ.

ಹಿರಿಯ ಶಾಸಕರಾದ ಉಮೇಶ ಕತ್ತಿ, ಆರ್.ಅಶೋಕ, ಅರವಿಂದ ಬೆಲ್ಲದ, ಸಿ.ಪಿ. ಯೋಗೇಶ್ವರ, ಮುನಿರತ್ನ, ಎಂ.ಪಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಮತ್ತಿತರರು ಸಚಿವ ಸ್ಥಾನಕ್ಕೆ ಅವಕಾಶ ಕೋರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

‘ಸಚಿವ ಸ್ಥಾನ ನೀಡಿದರೆ ಸಂತೋಷದಿಂದ ನಿರ್ವಹಿಸುವೆ. ಇಲ್ಲದಿದ್ದರೆ, ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವೆ’ ಎಂದು ಪ್ರತಿಕ್ರಿಯಿಸಿರುವ ಹುಕ್ಕೇರಿ ಶಾಸಕ ಉಮೇಶ ಕತ್ತಿ, ‘ಸಕ್ಕರೆ ಕಾರ್ಖಾನೆ ಕೆಲಸದ ನಿಮಿತ್ತ ದೆಹಲಿಗೆ ಬಂದಿರುವೆ. ವರಿಷ್ಠರ ಭೇಟಿಗೆ ಅವಕಾಶ ಸಿಕ್ಕರೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸುವೆ’ ಎಂದರು.

‘ಸಂಪುಟ ರಚನೆಗೆ ಒತ್ತಡ ಸಹಜ’

ಬೆಂಗಳೂರು: ‘ಸಚಿವ ಸಂಪುಟ ರಚನೆಗೆ ಒತ್ತಡಗಳು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ವರಿಷ್ಠರ ಭೇಟಿಗಾಗಿ ಶುಕ್ರವಾರ ದೆಹಲಿಗೆ ಹೋಗುತ್ತೇನೆ. ಆದರೆ, ಸಂಫುಟ ಸಂಪುಟ ರಚನೆ ವಿಚಾರ ಮೊದಲ ಭೇಟಿಯಲ್ಲಿ ಚರ್ಚೆ ಮಾಡುವುದಿಲ್ಲ. ಮುಂದಿನ ಭೇಟಿಯಲ್ಲಿ ಚರ್ಚೆ ಮಾಡುತ್ತೇನೆ’ ಎಂದು ಸುದ್ದಿಗಾರರಿಗೆ ಹೇಳಿದರು.

‘ಬುಧವಾರ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ಆಡಳಿತ ಕೊಡಿ ಎಂದು ಶುಭ ಕೋರಿದ್ದಲ್ಲದೇ, ನಿಮ್ಮ ಮೇಲೆ ವಿಶ್ವಾಸವಿದೆ ಎಂದೂ ಹೇಳಿದ್ದಾರೆ’ ಎಂದರು.

‘ದೆಹಲಿಗೆ ಹೋದ ವೇಳೆ ಲಭ್ಯ ಸಮಯವನ್ನು ಬಳಕೆ ಮಾಡಿ ರಾಜ್ಯದ ಸಂಸದರು, ಕರ್ನಾಟಕದ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಬಾಕಿ ಇರುವ ರಾಜ್ಯದ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡುತ್ತೇನೆ’ ಎಂದರು.

ಪ್ರಧಾನಿ ಭೇಟಿಗೆ ಸಮಯ ನಿಗದಿ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಗೆ ತೆರಳುತ್ತಿರುವ ಬೊಮ್ಮಾಯಿ, ಪ್ರಧಾನಿ ಮೋದಿ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿಯಾಗಲಿದ್ದಾರೆ. ಇದಾದ ಬಳಿಕ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರು, ಸಂಸದರನ್ನು ಭೇಟಿಯಾಗಲಿದ್ದಾರೆ. ಶನಿವಾರ ಸಂಜೆ ಅವರು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.

ತಡೆಯಾಜ್ಞೆ ತಂದಿರುವವರು: ಡಾ.ಕೆ. ಸುಧಾಕರ್‌, ಬೈರತಿ ಬಸವರಾಜ, ಬಿ.ಸಿ.ಪಾಟೀಲ, ಶಿವರಾಂ ಹೆಬ್ಬಾರ್‌, ಎಸ್.ಟಿ. ಸೋಮಶೇಖರ್‌, ಕೆ.ಸಿ. ನಾರಾಯಣಗೌಡ

ಆಕಾಂಕ್ಷಿಗಳ ಒತ್ತಡ ಆರಂಭ: 

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರಲು ಹಲವು ಶಾಸಕರು ಪ್ರಭಾವ ಬೀರುವ, ಒತ್ತಡ ಹೇರುವ ಕಾರ್ಯ ಆರಂಭಿಸಿದ್ದಾರೆ. ತಮ್ಮ ಆಕಾಂಕ್ಷೆಯನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ತೋಡಿಕೊಳ್ಳಲಾರಂಭಿಸಿದ್ದಾರೆ.

ಹಿರಿಯ ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಮುರುಗೇಶ ನಿರಾಣಿ, ಉಮೇಶ ಕತ್ತಿ, ಸೋಮಶೇಖರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ ಮುಂತಾದವರು ಗುರುವಾರ ತಮ್ಮದೇ ಆದ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನಕ್ಕೆ ಸೈ: ಈಶ್ವರಪ್ಪ: ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್‌.ಈಶ್ವರಪ್ಪ ಅವರು, ‘ಸಂಪುಟದಲ್ಲಿ ಯಾವುದೇ ಸ್ಥಾನ ನೀಡಿದರೂ ಒಪ್ಪಿಕೊಳ್ಳುತ್ತೇನೆ. ಶೆಟ್ಟರ್‌ ಅವರಂತೆ ಹೊರಗುಳಿಯುವ ಯೋಚನೆ ಮಾಡಿಲ್ಲ. ಒಂದು ವೇಳೆ ಪಕ್ಷದ ಸಂಘಟನೆಗೆ ಹೋಗಿ ಎಂದು ಸೂಚಿಸಿದರೂ ಅದಕ್ಕೆ ಸಿದ್ಧನಿದ್ದೇನೆ’ ಎಂದರು.

ಸಿಎಂ ನಿರ್ಧಾರಕ್ಕೆ ಬದ್ದ: ನಿರಾಣಿ

‘ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಪರಮಾಧಿಕಾರ. ಮುಖ್ಯಮಂತ್ರಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ. ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು, ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರಬೇಕು’ ಎಂದು ಮುರುಗೇಶ ನಿರಾಣಿ ಬೆಂಗಳೂರಿನಲ್ಲಿ ಹೇಳಿದರು.

‘ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಕಳೆದ ಬಾರಿ ನೀಡಿರಲಿಲ್ಲ’ ಎಂದು ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ.

ಯಡಿಯೂರಪ್ಪ ಅವರ ಆಪ್ತ ಬಣದ ಶಾಸಕ ಎಂ.ಪಿ.ರೇಣುಕಾಚಾರ್ಯ ಬೆಂಗಳೂರಿನಲ್ಲಿ ಮಾತನಾಡಿ, ‘ಈ ಬಾರಿಯ ಸಂಪುಟದಲ್ಲಿ ಮಧ್ಯ ಕರ್ನಾಟಕ ಅದರಲ್ಲೂ ದಾವಣಗೆರೆ ಜಿಲ್ಲೆಗೆ ಪ್ರಾತಿನಿಧ್ಯ ಸಿಗಲಿದೆ ಎಂಬ ವಿಶ್ವಾಸವಿದೆ‘ ಎಂದರು.

ಹಿರಿಯ ಶಾಸಕರಾದ ಮುರುಗೇಶ ನಿರಾಣಿ, ರೇಣುಕಾಚಾರ್ಯ, ರಾಜೂಗೌಡ ನಾಯಕ್, ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಇನ್ನೂ ಕೆಲವು ಶಾಸಕರು ಯಡಿಯೂರಪ್ಪ ಅವರ ಮೂಲಕ ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು