ಭಾನುವಾರ, ಅಕ್ಟೋಬರ್ 17, 2021
23 °C

ಡಿಎಪಿ, ಪೊಟ್ಯಾಷ್ ಗೊಬ್ಬರಕ್ಕೆ ಬೇಡಿಕೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಿಂಗಾರು ಬಿತ್ತನೆ ಹಂಗಾಮಿನಲ್ಲಿ ರೈತರಿಗೆ ನೆರವಾಗಲು 32,000 ಟನ್ ಡಿಎಪಿ ಗೊಬ್ಬರ ಪೂರೈಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರದ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನಸುಖ್ ಮಾಂಡವಿಯಾ ಅವರಿಗೆ ಶುಕ್ರವಾರ ಈ ಕುರಿತ ಮನವಿ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯಕ್ಕೆ 10,000 ಟನ್ ಪೊಟ್ಯಾಷ್ ಗೊಬ್ಬರದ ಅಗತ್ಯವೂ ಇದ್ದು, ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಬೇಡಿಕೆ ಈಡೇರಿಸುವ ಭರವಸೆ ದೊರೆತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೊರತೆ ಇಲ್ಲ. ಕೊರತೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯವಿರುವ ಗೊಬ್ಬರಕ್ಕೆ ಮಾತ್ರ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಾದ್ಯಂತ ಕೊರೊನಾ ಲಸಿಕೆ ಅಭಿಯಾನ ಯಶಸ್ವಿ ಆಗಿರುವ ಕುರಿತೂ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸದ್ಯ 51 ಲಕ್ಷ ಡೋಸ್ ಲಸಿಕೆ ಸಂಗ್ರಹ ಇದೆ. ಡಿಸೆಂಬರ್ ಅಂತ್ಯಕ್ಕೆ ಶೇ 90ರಷ್ಟು ಜನತೆಗೆ ಮೊದಲ ಹಂತದ ಲಸಿಕೆಯನ್ನೂ, ಶೇ 70ರಷ್ಟು ಅರ್ಹರಿಗೆ ಎರಡನೇ ಹಂತದ ಲಸಿಕೆಯನ್ನೂ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ನಬಾರ್ಡ್‌ ನೆರವು: ನಂತರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬೊಮ್ಮಾಯಿ, ‘ರಾಜ್ಯಕ್ಕೆ ನೀಡಲಾಗುತ್ತಿರುವ ನಬಾರ್ಡ್‌ ನೆರವಿನ ಮೊತ್ತವನ್ನು ಹೆಚ್ಚಿಸುವಂತೆ ಕೋರಿದ್ದಾಗಿ ತಿಳಿಸಿದರು.

‘ಕೇಂದ್ರದ ಹಣಕಾಸು ಸಚಿವಾಲಯ ಹೊಸದಾಗಿ ರಚಿಸಿರುವ ಗ್ರೂಪ್‌ ಆಫ್‌ ಮಿನಿಸ್ಟರ್ಸ್‌ಗೆ ನನ್ನನ್ನು ನೇಮಿಸಲಾಗಿದೆ. ಶೀಘ್ರವೇ ಸಭೆ ನಡೆಸುವ ಮೂಲಕ ಜಿಎಸ್‌ಟಿ ಆದಾಯ ಹೆಚ್ಚಳ ಹಾಗೂ ತೆರಿಗೆ ಸುಧಾರಣೆ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆಯೂ ಸಚಿವೆ ನಿರ್ಮಲಾ ಸೂಚಿಸಿದ್ದಾರೆ’ ಎಂದು ಅವರು ಹೇಳಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು