ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಪ್ರಧಾನಿ ದೇವೇಗೌಡರ ಬಲ

ಸಂಕಷ್ಟ ಎದುರಾದರೆ ಬೆನ್ನಿಗೆ: ದೇವೇಗೌಡ l ಸಂಪುಟ ವಿಸ್ತರಣೆಗೆ ಮುನ್ನವೇ ಹೊಸ ಆಟ?
Last Updated 1 ಆಗಸ್ಟ್ 2021, 21:57 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ತಮ್ಮ ಪಕ್ಷ ಬೆಂಬಲಕ್ಕೆ ನಿಲ್ಲಲಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಘೋಷಿಸಿದರು. ಸಂಪುಟ ವಿಸ್ತರಣೆಯ ಕಸರತ್ತಿನ ನಡುವೆಯೇ ಈ ಹೇಳಿಕೆ ಹೊರಬಿದ್ದಿರುವುದು ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಎಚ್‌.ಡಿ. ದೇವೇಗೌಡ ಅವರ ನಿವಾಸಕ್ಕೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ, ಗೌಡರ ಕಾಲಿಗೆ ಎರಗಿ ಆಶೀರ್ವಾದ ಪಡೆದರಲ್ಲದೇ, ಮಾತುಕತೆಯನ್ನೂ ನಡೆಸಿದರು. ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಮತ್ತು ಬಿಜೆಪಿ ಶಾಸಕ ವಿ. ಸೋಮಣ್ಣ ಈ ವೇಳೆ ಜತೆಗಿದ್ದರು. ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೌಡರು, ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಅನಿವಾರ್ಯ ಸಂದರ್ಭಗಳಲ್ಲಿ ‘ಸಹಕಾರ’ ನೀಡುವ ಭರವಸೆಯನ್ನು ಪ್ರಕಟಿಸಿದರು.

ಬಿ.ಎಸ್‌. ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಮೊದಲು ಹೂಡಿದ್ದ ಆಟದ ವೇಳೆ, ಬಿಜೆಪಿಯ ದೆಹಲಿ ಮಟ್ಟದ ಪ್ರಮುಖ ನಾಯಕರೊಬ್ಬರು ಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು ಎಂಬ ಸುದ್ದಿ ಕೆಲ ದಿನಗಳಿಂದ ಹಬ್ಬಿತ್ತು. ಯಡಿಯೂರಪ್ಪ ಒಂದು ವೇಳೆ ರಾಜೀನಾಮೆಗೆ ನಿರಾಕರಿಸಿ, ವರಿಷ್ಠರ ವಿರುದ್ಧವೇ ಬಂಡಾಯವೆದ್ದು ಪಕ್ಷ ಒಡೆಯಲು ಮುಂದಾದರೆ ಜೆಡಿಎಸ್‌ ಬೆಂಬಲದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಿದ್ಧತೆಗಳು ನಡೆದಿವೆ ಎಂಬ ಮಾಹಿತಿ ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿತ್ತು. ಬೊಮ್ಮಾಯಿ–ಗೌಡರ ಭೇಟಿ ಹಾಗೂ ನಂತರದ ಬೆಳವಣಿಗೆಗಳು ಆ ಸುದ್ದಿಗಳನ್ನು ದೃಢೀಕರಿಸುವಂತೆ ಇವೆ ಎಂಬ ಚರ್ಚೆ ಕಮಲ ಪಾಳಯದಲ್ಲಿ ಈಗ ಗಂಭೀರ ವಿಷಯವಾಗಿ ಮಾರ್ಪಟ್ಟಿದೆ.

‘ಮುಖ್ಯಮಂತ್ರಿ ಬದಲಾವಣೆಗೂ ಮೊದಲೇ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಕೆಲ ಹೊತ್ತು ಚರ್ಚಿಸಿದ್ದರು. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಯಡಿಯೂರಪ್ಪ ಹೊರತಾಗಿ ಬಿಜೆಪಿಯ ಯಾವುದೇ ನಾಯಕರ ಮನೆಗೆ ಭೇಟಿ ನೀಡಿಲ್ಲ. ಆದರೆ, ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಿಜೆಪಿ ವರಿಷ್ಠರ ಸೂಚನೆಯಂತೆಯೇ ಎಲ್ಲವೂ ನಡೆದಿದೆ’ ಎಂಬ ವ್ಯಾಖ್ಯಾನವೂ ಬಿಜೆಪಿಯೊಳಗೆ ನಡೆಯುತ್ತಿದೆ.

ಪೂರ್ಣ ಸಹಕಾರದ ಭರವಸೆ: ‘2023 ಕ್ಕೂ ಮೊದಲೇ ವಿಧಾನಸಭಾ ಚುನಾವಣೆ ಎದುರಿಸಲು ಯಾರೂ ಸಿದ್ಧರಿಲ್ಲ. ಅದಕ್ಕೂ ಮುಂಚೆ ಚುನಾವಣೆಗೆ ಹೋಗಬೇಕು ಎಂಬ ಹೆಬ್ಬಯಕೆ ನಮಗೇನೂ ಇಲ್ಲ. ಈ ಸರ್ಕಾರ ಯಾವುದಾದರೂ ರೀತಿಯ ತೊಂದರೆಗೆ ಸಿಲುಕಿದರೆ ಸಹಕಾರ ನೀಡಲು ನಾವು ಸಿದ್ಧ’ ಎಂದು ದೇವೇಗೌಡ ಹೇಳಿದರು.

‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಇದೆ. 2022ರಲ್ಲಿ ಅದು ಮುಗಿಯಲಿದೆ. ಆ ಬಳಿಕ ವಿಧಾನಸಭಾ ಚುನಾವಣೆ ಬರಲಿದೆ. ಎರಡು ವರ್ಷಗಳ ಅವಧಿಯಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಜೆಡಿಎಸ್‌ನಿಂದ ಯಾವ ರೀತಿಯ ತೊಂದರೆಯೂ ಆಗದು’ ಎಂದು ಭರವಸೆ
ನೀಡಿದರು.

‘ಯಡಿಯೂರಪ್ಪ ಅವರನ್ನು ದೂರ ಇಟ್ಟು ಸರ್ಕಾರ ನಡೆಸುವುದು ಕಷ್ಟ. ಯಡಿಯೂರಪ್ಪ ಅವರ ಆಶೀರ್ವಾದವೂ ಬಸವರಾಜ ಬೊಮ್ಮಾಯಿ ಅವರಿಗೆ ಇದೆ. ಬಿಜೆಪಿಯ ವರಿಷ್ಠರ ಬೆಂಬಲ, ಆಶೀರ್ವಾದವೂ ಮುಖ್ಯಮಂತ್ರಿಗೆ ಇದೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಯಡಿಯೂರಪ್ಪ ಅವರನ್ನು ದೂರ ಇಟ್ಟು ಬೊಮ್ಮಾಯಿ ಆಡಳಿತ ನಡೆಸುತ್ತಾರಾ ಎಂಬುದು ತಮಗೆ ತಿಳಿದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಹಕಾರದ ಭರವಸೆ: ಬೊಮ್ಮಾಯಿ

ದೇವೇಗೌಡರ ಭೇಟಿ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅವರು ಹಿರಿಯರು ಮತ್ತು ಅನುಭವಿ ರಾಜಕಾರಣಿ. ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ನಾನು ಮತ್ತು ಅವರು ಯಾವಾಗಲೂ ಒಂದೇ ನಿಲುವು ಹೊಂದಿದವರು. ಆಶೀರ್ವಾದ ಪಡೆಯುವುದಕ್ಕಾಗಿ ಭೇಟಿಮಾಡಿದ್ದೆ. ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ಪೂರ್ಣ ಸಹಕಾರದ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ತಿಳಿಸಿದರು.

ಬಿಎಸ್‌ವೈ ಆಪ್ತ ಶಾಖೆಯ ಸಿಬ್ಬಂದಿಯೂ ಹೊರಗೆ

ಬೆಂಗಳೂರು: ಯಡಿಯೂರಪ್ಪ ಅವರ ಅವಧಿಯಲ್ಲಿ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿದ್ದ 19 ಮಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.

ತಮ್ಮೊಂದಿಗೆ ಅತ್ಯಂತ ನಿಕಟ ವಾಗಿದ್ದ ಹಲವರನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಚಿವಾಲಯಕ್ಕೆ ನೇಮಿಸಿಕೊಂಡಿದ್ದರು. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರ ಆಪ್ತರೂ ಹಲವು ಮಂದಿ ಸಚಿವಾಲಯದಲ್ಲಿದ್ದರು. ಬಹುತೇಕ ಎಲ್ಲರನ್ನೂ ಸಚಿವಾಲಯದಿಂದ ಹೊರ ಕಳುಹಿಸುವ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿಯವರ ಕಾರ್ಯದರ್ಶಿಯಾಗಿದ್ದ ಐಎಎಸ್‌ ಅಧಿಕಾರಿ ಡಾ.ಎಸ್‌. ಸೆಲ್ವಕುಮಾರ್‌ ಅವರನ್ನು ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿದ್ದ ಐಎಎಸ್‌ ಅಧಿಕಾರಿ ವಿ. ಪೊನ್ನುರಾಜ್‌ ಅವರನ್ನು ಮುಖ್ಯಮಂತ್ರಿಯವರ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಪೊನ್ನುರಾಜ್‌ ಅವರಿಗೆ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನೂ ಹೆಚ್ಚುವರಿಯಾಗಿ ನೀಡಲಾಗಿದೆ.

ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯವರ ಸಲಹೆಗಾರರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಎಂ. ಲಕ್ಷ್ಮೀನಾರಾಯಣ ಅವರನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಡಾ.ಎ. ಲೋಕೇಶ್‌, ವಿಶೇಷಾಧಿಕಾರಿಗಳಾಗಿದ್ದ ಎಚ್‌.ಎಸ್‌. ಸತೀಶ್, ಟಿ.ಎಂ. ಸುರೇಶ್, ಉಪ ಕಾರ್ಯದರ್ಶಿಯಾಗಿದ್ದ ಎ.ಆರ್‌. ರವಿ ಸೇರಿದಂತೆ ಹಲವು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದು, ಮೂಲ ಸ್ಥಾನಕ್ಕೆ ವರದಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯ ಅಧಿಕಾರಿಗಳಾಗಿದ್ದ ಎಸ್‌. ಶಾಂತಾರಾಂ, ಜಿ.ಎಸ್‌. ಸುನೀಲ್‌, ಸಾಂಸ್ಕೃತಿಕ ಸಮನ್ವಯ ಅಧಿಕಾರಿಯಾಗಿದ್ದ ಗಣೇಶ್‌ ಯಾಜಿ ಅವರನ್ನೂ ಹುದ್ದೆಯಿಂದ ಕೈಬಿಡಲಾಗಿದೆ.

ಯಡಿಯೂರಪ್ಪ ಅವಧಿಯಲ್ಲಿದ್ದವರಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಸೇರಿದಂತೆ ಕೆಲವು ಅಧಿಕಾರಿಗಳನ್ನು ಮಾತ್ರ ಮುಂದುವರಿಸಲಾಗಿದೆ.

ಮುಖ್ಯಮಂತ್ರಿ ದಿಢೀರ್ ದೆಹಲಿಗೆ

ಬೆಂಗಳೂರು: ಮುಖ್ಯಮಂತ್ರಿ ಬೊಮ್ಮಾಯಿ ಭಾನುವಾರ ರಾತ್ರಿ ದಿಢೀರ್‌ ದೆಹಲಿಗೆ ತೆರಳಿದ್ದು, ಸಂಪುಟ ವಿಸ್ತರಣೆ ಪ್ರಕ್ರಿಯೆ ಒಂದೆರಡು ದಿನಗ ಳಲ್ಲಿ ನಡೆಯುವ ಸಾಧ್ಯತೆ ಇದೆ. ಯಾರಿಗೆಲ್ಲಾ ಸಂಪುಟದಲ್ಲಿ ಅವಕಾಶ ದೊರಕಬಹುದು ಎಂಬ ಕುತೂಹಲ ಗರಿಗೆದರಿದೆ.

ಪ್ರಮಾಣವಚನ ಸ್ವೀಕರಿಸಿದ ಬಳಿಕ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿದ್ದ ಬೊಮ್ಮಾಯಿ, ಶನಿವಾರ ಸಂಜೆಯಷ್ಟೇ ಬೆಂಗಳೂರಿಗೆ ಮರಳಿದ್ದರು. 24 ಗಂಟೆಗಳಲ್ಲೇ ಪುನಃ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜತೆ ದೆಹಲಿಗೆ ತೆರಳಿದ ಅವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಜೊತೆ ತಡರಾತ್ರಿವರೆಗೂ ಚರ್ಚೆ ನಡೆಸಿದರು. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿ, ಸಚಿವರ ಪಟ್ಟಿಗೆ ಒಪ್ಪಿಗೆ ಪಡೆದು ಬೊಮ್ಮಾಯಿ ಅವರು ಸಂಜೆ ವಾಪಸ್‌ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಹಿರಿಯ ಶಾಸಕರಾದ ಗೋವಿಂದ ಕಾರಜೋಳ, ಆರ್‌. ಅಶೋಕ ಮತ್ತು ಬಿ. ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬ ಮಾಹಿತಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದ ದಿನವೇ ಪಕ್ಷದ ಮೂಲಗಳಿಂದ ಹೊರಬಿದ್ದಿತ್ತು.

ಸಮತೋಲನಕ್ಕೆ ಕಸರತ್ತು: 2023ರ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು ಸಂಪುಟ ರಚಿಸಲು ಬಿಜೆಪಿ ವರಿಷ್ಠರು ಪ್ರಯತ್ನಿಸುತ್ತಿದ್ದಾರೆ. ಶುದ್ಧಹಸ್ತರು, ದಕ್ಷರು ಮತ್ತು ಪಾರದರ್ಶಕ ಆಡಳಿತ ನೀಡುವವರಿಗೆ ಆದ್ಯತೆ ನೀಡಬೇಕು ಎಂಬ ಚರ್ಚೆ ಪಕ್ಷದೊಳಗೆ ನಡೆಯುತ್ತಿದೆ.

‘ಬಹುತೇಕ ಎಲ್ಲ ಸಚಿವರನ್ನೂ ಬಿಜೆಪಿ ವರಿಷ್ಠರೇ ಆಯ್ಕೆಮಾಡುವ ಸಾಧ್ಯತೆ ಇದೆ. ಅದರ ನಡುವೆಯೇ ಸರ್ಕಾರವನ್ನು ಸುಲಭವಾಗಿ ಮುನ್ನಡೆಸಿಕೊಂಡು ಹೋಗುವುದಕ್ಕೆ ಅನುಕೂಲವಾಗುವಂತೆ ತಮ್ಮ ಆಯ್ಕೆಯ ಕೆಲವರನ್ನು ಸಚಿವರನ್ನಾಗಿ ಮಾಡುವಂತೆ ವರಿಷ್ಠರನ್ನು ಮನವೊಲಿಸಲು ಬಸವರಾಜ ಬೊಮ್ಮಾಯಿ ಪ್ರಯತ್ನಿಸುತ್ತಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಮತ್ತೆ ಲಿಂಗಾಯತರೇ ಮುಖ್ಯಮಂತ್ರಿ ಆಗಿರುವುದರಿಂದ ಸಂಪುಟದಲ್ಲಿ ಆ ಸಮುದಾಯದ ಪ್ರಾತಿನಿಧ್ಯ ಕುಗ್ಗುವ ಸಾಧ್ಯತೆ ಇದೆ. ಪಂಚಮಸಾಲಿ ಸಮುದಾಯದಲ್ಲಿ ಹೊಸಮುಖಗಳಿಗೆ ಅವಕಾಶ ನೀಡಲೂಬಹುದು ಎಂಬ ಚರ್ಚೆಯೂ ನಡೆದಿದೆ.

ಹಿರಿಯರು, ಕಿರಿಯರು, ಮೂಲದಿಂದ ಪಕ್ಷದಲ್ಲಿ ಬೆಳೆದವರು, ವಲಸಿಗರು ಎಲ್ಲರನ್ನೂ ಸರಿದೂಗಿಸಿಕೊಂಡು ಸಂಪುಟ ರಚಿಸಬೇಕಾದ ಸವಾಲು ಬಿಜೆಪಿ ವರಿಷ್ಠರ ಮುಂದಿದೆ. ಕಾಂಗ್ರೆಸ್‌, ಜೆಡಿಎಸ್‌ ತೊರೆದವರ ಪೈಕಿ ಹೆಚ್ಚು ಮಂದಿಗೆ ಅವಕಾಶ ನಿರಾಕರಿಸಿದರೆ ಅವರು ಇಲ್ಲಿಯೂ ಬಂಡೇಳಬಹುದು ಎಂಬ ಸಣ್ಣ ಆತಂಕವೂ ಪಕ್ಷದ ವರಿಷ್ಠರನ್ನು ಕಾಡುತ್ತಿದೆ. ಕೆಲವು ಅಚ್ಚರಿಯ ಆಯ್ಕೆಗಳೊಂದಿಗೆ ಎಲ್ಲವನ್ನೂ ಸರಿದೂಗಿಸುವ ಪ್ರಯತ್ನವೂ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT