ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ರಾಜ್ಯದ ಹೊಸ ಸಾರಥಿ; ಇಂದು ಬೆಳಿಗ್ಗೆ 11ಕ್ಕೆ ಏಕಾಂಗಿಯಾಗಿ ಪ್ರಮಾಣ ವಚನ

ಸಚಿವ ಸಂಪುಟ ವಿಸ್ತರಣೆ ಒಂದು ವಾರ ವಿಳಂಬ?
Last Updated 27 ಜುಲೈ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದ ಶಾಸಕ, ನಿಕಟಪೂರ್ವ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಆಯ್ಕೆಯಾಗಿದ್ದು, ಬುಧವಾರ (ಜು.28) ಬೆಳಿಗ್ಗೆ ಅವರು ಒಬ್ಬರೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ಭರ್ತಿ ಮಾಡಲು ಮಂಗಳವಾರ ರಾತ್ರಿ ನಡೆದಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನನ್ನು ಆಯ್ಕೆ ಮಾಡಲಾಯಿತು. ಬಸವರಾಜ ಬೊಮ್ಮಾಯಿರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ 23ನೇ ವ್ಯಕ್ತಿ. ಜನತಾ ಪರಿವಾರದಲ್ಲಿ ರಾಜಕೀಯ ಜೀವನ ಆರಂಭಿಸಿದ ಬೊಮ್ಮಾಯಿ, ಜೆ.ಎಚ್‌. ಪಟೇಲ್ ಮುಖ್ಯ ಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. 2008 ರಲ್ಲಿ ಬಿಜೆಪಿ ಸೇರಿದ್ದರು.

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಬಿರುಸು ಪಡೆದ ದಿನಗಳಿಂದಲೂ ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರುಗಳು ಪರಿಶೀಲನೆಯಲ್ಲಿದ್ದವು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಮುರುಗೇಶ ನಿರಾಣಿ, ಜಗದೀಶ ಶೆಟ್ಟರ್‌, ಬೊಮ್ಮಾಯಿ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಶಾಸಕ ಅರವಿಂದ ಬೆಲ್ಲದ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರುಗಳು ಚರ್ಚೆಯಲ್ಲಿದ್ದವು.

ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಸೋಮವಾರ ಸಂಜೆಯೇ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು ಹಾಲಿ ಶಾಸಕರಲ್ಲೇ ಒಬ್ಬರನ್ನು ನೂತನ ನಾಯಕನನ್ನಾಗಿ ಆಯ್ಕೆಮಾಡುವ ತೀರ್ಮಾನಕ್ಕೂ ಬರಲಾಗಿತ್ತು. ಮಂಗಳವಾರ ಬೆಳಿಗ್ಗೆಯ ವೇಳೆಗೆ ಬೊಮ್ಮಾಯಿ, ಅರವಿಂದ ಬೆಲ್ಲದ ಮತ್ತು ಮುರುಗೇಶ ನಿರಾಣಿ ಹೆಸರುಗಳು ಮಾತ್ರ ಪರಿಶೀಲನೆಯಲ್ಲಿ ಉಳಿದಿದ್ದವು. ಮಧ್ಯಾಹ್ನದ ವೇಳೆಗಾಗಲೇ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸುಳಿವು ದೊರಕಲಾರಂಬಿಸಿತ್ತು.

ನೂತನ ಮುಖ್ಯಮಂತ್ರಿಯಾಗಿ ತಮ್ಮನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸಂದೇಶವನ್ನು ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್‌ ಮಂಗಳವಾರ ಬೆಳಿಗ್ಗೆಯೇ ರವಾನಿಸಿತ್ತು.

ಆದರೆ, ಅವರು ಈ ಮಾಹಿತಿಯನ್ನು ಗೋಪ್ಯವಾಗಿಯೇ ಇರಿಸಿದ್ದರು. ಆದರೆ, ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಸಂದರ್ಭದಲ್ಲಿನ ಅವರ ಹಾವಭಾವಗಳು ಬೊಮ್ಮಾಯಿ ಅವರೇ ಸರ್ಕಾರದ ಹೊಸ ಸಾರಥಿಯಾಗುವ ಸುಳಿವು ನೀಡುವಂತಿದ್ದವು.

ಹೆಸರು ಪ್ರಸ್ತಾಪಿಸಿದ ಬಿಎಸ್‌ವೈ: ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ವೀಕ್ಷಕರಾಗಿ ನೇಮಕಗೊಂಡಿದ್ದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಕಿಶನ್‌ ರೆಡ್ಡಿ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬಿಜೆಪಿ ವರಿಷ್ಠರ ಸೂಚನೆಯಂತೆ ಮಂಗಳವಾರ ಸಂಜೆಯ ವೇಳೆಗೆ ನಗರಕ್ಕೆ ಬಂದರು. ಮೂವರೂ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಚರ್ಚಿಸಿದರು. ನಂತರ ಕುಮಾರಕೃಪಾ ಅತಿಥಿ ಗೃಹದಲ್ಲಿ ಬೊಮ್ಮಾಯಿ ಸೇರಿದಂತೆ ಕೆಲವು ಶಾಸಕರ ಜತೆಗೂ ಚರ್ಚಿಸಿದರು.

ಕ್ಯಾಪಿಟಲ್‌ ಹೋಟೆಲ್‌ನಲ್ಲಿ ರಾತ್ರಿ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಆರಂಭವಾಯಿತು. ಕೇಂದ್ರದ ವೀಕ್ಷಕರೊಂದಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡ ಇದ್ದರು. ಉಸ್ತುವಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬೊಮ್ಮಾಯಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸೂಚಿಸಿದರು. ಗೋವಿಂದ ಎಂ. ಕಾರಜೋಳ, ಆರ್‌.ಅಶೋಕ, ಕೆ.ಎಸ್‌. ಈಶ್ವರಪ್ಪ, ಕೆ. ಪೂರ್ಣಿಮಾ ಸೇರಿದಂತೆ ಹಲವರು ಅನುಮೋದಿಸಿದರು. ಸಭೆಯಲ್ಲಿದ್ದ ಎಲ್ಲ ಶಾಸಕರೂ ಸರ್ವಾನುಮತದಿಂದ ಬೆಂಬಲ ಸೂಚಿಸಿದರು. ಕೇಂದ್ರದಿಂದ ಬಂದಿದ್ದ ವೀಕ್ಷಕರು ಬಸವರಾಜ ಬೊಮ್ಮಾಯಿ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು. ತಕ್ಷಣವೇ ವೇದಿಕೆಗೆ ಬಂದ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.

ಹಕ್ಕು ಮಂಡಿಸಿದ ಬೊಮ್ಮಾಯಿ: ಶಾಸಕಾಂಗ ಪಕ್ಷದ ಸಭೆ ಮುಗಿಯುತ್ತಿದ್ದಂತೆಯೇ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಭೇಟಿಮಾಡಿದ ಬೊಮ್ಮಾಯಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ನಿರ್ಣಯದ ಪ್ರತಿಯನ್ನೂ ರಾಜ್ಯಪಾಲರಿಗೆ ಸಲ್ಲಿಸಿದರು.

ಬುಧವಾರ ಬೆಳಿಗ್ಗೆ 11 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರು.

ಮುಂದಿದೆ ಸಂಪುಟ ರಚನೆಯ ಸವಾಲು:ಬೆಂಗಳೂರು: 24 ಗಂಟೆಗಳಿಂದಲೂ ಕುತೂಹಲದ ಕೇಂದ್ರ ಬಿಂದುವಾಗಿದ್ದ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ತೆರೆಬಿದ್ದಿದೆ. ಈಗ ಹೊಸ ಸಂಪುಟ ರಚನೆಯ ಸವಾಲು ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ವರಿಷ್ಠರ ಮುಂದಿದೆ.

ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಪರಿಶಿಷ್ಟ ಜಾತಿಗೆ ಸೇರಿದ ಗೋವಿಂದ ಕಾರಜೋಳ ಅವರಿಗೆ ಹಾಗೂ ಒಕ್ಕಲಿಗ ಸಮುದಾಯದ ಆರ್‌. ಅಶೋಕ ಹಾಗೂ ಪರಿಶಿಷ್ಟ ಪಂಗಡಕ್ಕೆ (ನಾಯಕ) ಸೇರಿದ ಬಿ. ಶ್ರೀರಾಮುಲು ಅವರಿಗೂ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

ಯಾರೆಲ್ಲಾ ಬೊಮ್ಮಾಯಿ ಅವರ ಸಂಪುಟ ಸೇರುತ್ತಾರೆ ಎಂಬ ಪ್ರಶ್ನೆ ಈಗ ಬಲವಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಹಿರಿಯರನ್ನು ಸಂಪೂರ್ಣವಾಗಿ ಹೊರಗಿಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕಾರಜೋಳ ಮತ್ತು ಅಶೋಕ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದು ಖಚಿತವಾಗಿರುವುರಿಂದ ಪೂರ್ಣ ಪ್ರಮಾಣದಲ್ಲಿ ಹಿರಿಯರನ್ನು ಕೈಬಿಡುವುದಿಲ್ಲ ಎಂಬ ಸುಳಿವು ದೊರಕಿದೆ.

ಈಗ ಜಾತಿ, ಪ್ರಾದೇಶಿಕತೆ, ಹಿರಿಯರು ಮತ್ತು ಯುವಕರು ಹೀಗೆ ನಾನಾ ಆಯಾಮಗಳಲ್ಲಿ ಅಳೆದು, ತೂಗಿ ಸಂಪುಟ ಸದಸ್ಯರನ್ನು ಆಯ್ಕೆ ಮಾಡಬೇಕಾದ ಸವಾಲು ಬಿಜೆಪಿ ಮುಂದಿದೆ. 2019ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಬೆಂಬಲವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕಾದ ವಿಚಾರವೂ ಬಿಜೆಪಿಗೆ ದೊಡ್ಡ ಪರೀಕ್ಷೆಯೇ ಆಗಿದೆ.

ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ 17 ಜನರಲ್ಲಿ 11 ಮಂದಿಗೆ ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ನೀಡಲಾಗಿತ್ತು. ಬೊಮ್ಮಾಯಿ ಅವರ ಸಂಪುಟದಲ್ಲಿ ಈ ಪೈಕಿ ಅರ್ಧದಷ್ಟು ಮಂದಿಗೆ ಮಾತ್ರ ಸಚಿವ ಸ್ಥಾನ ದೊರಕಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಯಡಿಯೂರಪ್ಪ ಸಂಪುಟದಲ್ಲಿದ್ದ ಹಿರಿಯರಲ್ಲಿ ಕೆಲವರನ್ನು ಹೊಸ ಸಂಪುಟದಿಂದ ಹೊರಗಿಡುವ ಸಾಧ್ಯತೆ ಹೆಚ್ಚಿದೆ. 2019ರಲ್ಲಿ ಯಡಿಯೂರಪ್ಪ ಅವರು ಸಂಪುಟದ ರಚಿಸಿದ ಸಂದರ್ಭದಲ್ಲೂ ಸಚಿವ ಸ್ಥಾನ ವಂಚಿತರಾಗಿದ್ದ ಹಲವರು ಅಸಮಾಧಾನ ಹೊರಹಾಕಿದ್ದರು. ಈಗ ಮತ್ತೆ ಶಾಸಕರು ಬಂಡೇಳದಂತೆ ಸಮಾಧಾನಕರವಾದ ಸೂತ್ರ ರೂಪಿಸುವ ದಿಸೆಯಲ್ಲಿ ಬಿಜೆಪಿ ವರಿಷ್ಠರು ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ.

‘ಉತ್ತಮ ಆಡಳಿತ ನೀಡುವೆ’:

‘ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂಯಡಿಯೂರಪ್ಪ ಅವರ ನಾಯಕತ್ವದಲ್ಲಿ ಹೊಸ ಸರ್ಕಾರವನ್ನು ರಚಿಸಿ, ಶಕ್ತಿಯುತವಾಗಿ ರಾಜ್ಯವನ್ನು ಮುನ್ನಡೆಸಲು ಪ್ರಯತ್ನಿಸುತ್ತೇನೆ’ ಎಂದು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿರುವ ಬಿಜೆಪಿ ವರಿಷ್ಠರು ಹಾಗೂ ಎಲ್ಲ ಶಾಸಕರಿಗೆ ನಾನು ಚಿರ ಋಣಿ. ರೈತರು, ಬಡವರು ಮತ್ತು ದೀನ ದಲಿತರ ಪರವಾದ ಆಡಳಿತ ನೀಡುತ್ತೇವೆ. ಯಡಿಯೂರಪ್ಪ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರ ಮಾರ್ಗದರ್ಶನದಲ್ಲಿ, ಅವರ ಮಾರ್ಗದಲ್ಲಿ ಮುನ್ನಡೆಯುವೆ. ಯಡಿಯೂರಪ್ಪ ಅವರ ಕನಸುಗಳನ್ನು ಸಾಕಾರಗೊಳಿಸುವ ಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೋಸ್ಕರ ಜನಪರ ಆಡಳಿತ ನೀಡುತ್ತೇನೆ. ಸಾರ್ವಜನಿಕರ, ಬಡಜನರ ಸಂಕಷ್ಟ, ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ಕಷ್ಟ ನಿವಾರಣೆ ಮಾಡುವುದು ಮೊದಲ ಆದ್ಯತೆ. ಹಣಕಾಸಿನ ಸ್ಥಿತಿಯನ್ನು ಉತ್ತಮ ಗೊಳಿಸಲು ಶ್ರಮಿಸುತ್ತೇನೆ. ವರಿಷ್ಠರು ಯಾವುದೇ ಷರತ್ತು ವಿಧಿಸಿಲ್ಲ. ಪಕ್ಷದ ವರಿಷ್ಠರ ಆಶೀರ್ವಾದವೇ ನನಗೆ ಬಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT