ಶನಿವಾರ, ಸೆಪ್ಟೆಂಬರ್ 25, 2021
30 °C

ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಆಯ್ಕೆ: ಯಾರು ಏನೆಂದರು? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಎಸ್‌ ಯಡಿಯೂರಪ್ಪ ಅವರ ರಾಜೀನಾಮೆ ಅವರಿಂದ ತೆರವಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಯ ಬಗ್ಗೆ ಬಿಜೆಪಿಯ ಎಲ್ಲ ನಾಯಕರೂ ಹರ್ಷ ವ್ಯಕ್ತಪಡಿಸಿದ್ದಾರೆ. 

ಯಾರು ಏನು ಹೇಳಿದರು? 

ಸರ್ವಸಮ್ಮತದ ತೀರ್ಮಾನ: ಕಟೀಲ್‌  
ಬವರಾಜ ಬೊಮ್ಮಾಯಿ ಹಿರಿಯ ಅನುಭವಿ ರಾಜಕಾರಣಿ. ಅವರ ಆಯ್ಕೆ ಎಲ್ಲರ ಸರ್ವಸಮ್ಮತದ ತೀರ್ಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. 

ನೀರಾವರಿ ಅನ್ಯಾಯಗಳತ್ತ ಗಮನಹರಿಸಿ: ಎಚ್‌ಡಿಕೆ 
ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯಕ್ಕೆ ಪರಿಹಾರಾತ್ಮಕವಾಗಿ ಕೆಲಸ ಮಾಡುವಿರೆಂದು ನಿರೀಕ್ಷಿಸುವೆ. ನೀರಾವರಿ ವಿಚಾರಗಳಲ್ಲಿ ತಮಗೆ ಜ್ಞಾನವುಂಟು. ಅಣೆಕಟ್ಟು ನಿರ್ಮಾಣದಂಥ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳತ್ತ ತಾವು ಗಮನಹರಿಸುವಿರೆಂದು ಭಾವಿಸುವೆ ಎಂದು ಎಚ್‌.ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. 

ಆಡಳಿತದ ಮೇಲೆ ಗಮನ ಹರಿಸುವ ಭರವಸೆ: ಡಿಕೆಶಿ 
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಆಡಳಿತದ ಮೇಲೆ ಮರಳಿ ಗಮನ ಹರಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಭರವಸೆ ಇರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ. 

ಅನುಭವ ಆಡಳಿತಕ್ಕೆ ನೆರವಾಗಲಿದೆ: ಸಿ.ಟಿ ರವಿ 
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂಧನೆ. ಮಿತ ಭಾಷಿ, ಕಠಿಣ ಪರಿಶ್ರಮದ ಕಾರ್ಯಕರ್ತರಾದ ಬೊಮ್ಮಾಯಿ ಅವರ ಅಪಾರ ಅನುಭವವು ಆಡಳಿತಕ್ಕೆ ನೆರವಾಗಲಿದೆ ಎಂದು ಸಿ.ಟಿ ರವಿ ಟ್ವೀಟ್‌ ಮಾಡಿದ್ದಾರೆ. 

ಅಭಿವೃದ್ಧಿಯಲ್ಲಿ ರಾಜ್ಯ ಹೊಸ ಎತ್ತರಕ್ಕೆ ಹೋಗಲಿದೆ: ಸಂತೋಷ್‌ 
ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಅನುಭವಿ ರಾಜಕಾರಣಿ, ಆಡಳಿತಗಾರರಾಗಿರುವ ಬೊಮ್ಮಾಯಿ ಅವರಿಂದ ರಾಜ್ಯವು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಟ್ವೀಟ್‌ ಮಾಡಿದ್ದಾರೆ. 

ಬಸವರಾಜ ಪ್ರಧಾನಿಯೂ ಆಗುತ್ತಾನೆ: ಅಕ್ಕ ಉಮಾ  
ನನ್ನ ತಮ್ಮ ಇಂದಲ್ಲ ನಾಳೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾನೆ ಎಂಬ ನಂಬಿಕೆ ಇತ್ತು. ಅದರಂತೆ, ಇಂದು ಸಿ.ಎಂ ಆಗಿ ಆಯ್ಕೆಯಾಗಿದ್ದಾನೆ. ಸಿ.ಎಂ ಸ್ಥಾನಕ್ಕಾಗಿ ತಮ್ಮ ಕಟ್ಟಿದ್ದ ಪರೀಕ್ಷೆಯ ಫಲಿತಾಂಶ ಇಂದು ಬಂದಿದೆ. ಬಸವರಾಜ ರಾಜಕೀಯಕ್ಕೆ ಬರುವುದು ತಂದೆ ಎಸ್.ಆರ್. ಬೊಮ್ಮಾಯಿ ಅವರಿಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ಅನಿವಾರ್ಯವಾಗಿ ರಾಜಕೀಯಕ್ಕೆ ಬಂದ ಬಸವರಾಜ, ವಿಧಾನ ಪರಿಷತ್ ಸದಸ್ಯರಾಗಿ, ಶಾಸಕರಾಗಿ ಹಾಗೂ ಸಚಿವರಾಗಿ ಹಂತಹಂತವಾಗಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾನೆ. ಮುಂದೊಮ್ಮಡ ಆತ ಪ್ರಧಾನಿಯೂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರ ಅಕ್ಕ ಉಮಾ ಪಾಟೀಲ ಅವರು ಸಂತಸ ವ್ಯಕ್ತಪಡಿಸಿದರು.

ವರಿಷ್ಠ ಮಂಡಳಿಯ ತೀರ್ಮಾನಕ್ಕೆ ಬದ್ಧ: ಯತ್ನಾಳ್‌
ಕೇಂದ್ರ ವರಿಷ್ಠ ಮಂಡಳಿಯ ತೀರ್ಮಾನಕ್ಕೆ ಬದ್ಧ. ಎಲ್ಲರನ್ನೂ ವಿಶ್ವಾಸ ತೆಗೆದುಕೊಂಡು ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿದೆ. ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ನಾವೆಲ್ಲ ಕೂಡಿ ಕೆಲಸ ಮಾಡುತ್ತೇವೆ. ಅವರ ಆಯ್ಕೆಗೆ ಸಹಮತಿ ಇದ್ದೇ ಇದೆ ಎಂದು ಬಸವರಾಜ ಯತ್ನಾಳ್‌ ಹೇಳಿದ್ದಾರೆ. 

ಒಳ್ಳೆಯ ತೀರ್ಮಾನ: ಬೆಲ್ಲದ್‌  
ಬಸವರಾಜ ಬೊಮ್ಮಾಯಿ ಅವರು ವೈಯಕ್ತಿಕವಾಗಿ ನನಗೆ ಬಹಳ ಹತ್ತಿರದವರು. ನನ್ನ ರಾಜಕೀಯ ಜೀವನಕ್ಕೆ ಅವರಿಂದ ಸಲಹೆ ಪಡೆಯುತ್ತಿರುತ್ತೇನೆ.  ಹೈಕಮಾಂಡ್‌ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ. ನನಗೆ ಖುಷಿ ಆಗಿದೆ. ಬಸವರಾಜ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಅನುಭವಿ. 2023, 24ರಲ್ಲಿ ಅವರು ಪಕ್ಷವನ್ನು ಸಶಕ್ತವಾಗಿ ಮುನ್ನಡೆಸುತ್ತಾರೆ. ಅದರ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಅರವಿಂದ ಬೆಲ್ಲದ್‌ ಅಭಿಪ್ರಾಯಪಟ್ಟಿದ್ದಾರೆ. 

ಹುಷಾರ್‌ ಮನುಷ್ಯ: ಚೌಹಾಣ್‌ 
ಬಸವರಾಜ ಬೊಮ್ಮಾಯಿ ಹುಷಾರ್‌ ಮನಷ್ಯ, ಎಲ್ಲರಿಗೂ ಸಾಥ್‌ ಕೊಟ್ಟಿದ್ದಾರೆ. ಅವರ ಆಯ್ಕೆಯಿಂದ ಖುಷಿಯಾಗಿದೆ ಎಂದು ಮಾಜಿ ಸಚಿವ ಪ್ರಭು ಚೌಹಾಣ್‌ ಹೇಳಿದ್ದಾರೆ. 

ನಾನು ಸ್ವಾಗತಿಸುವೆ: ಸೋಮಣ್ಣ 
ಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಆಯ್ಕೆ. ಒಳ್ಳೆಯ ತೀರ್ಮಾನ, ಇದನ್ನು ಸ್ವಾಗತಿಸುತ್ತೇನೆ ಎಂದು ವಿ. ಸೋಮಣ್ಣ ಹೇಳಿದ್ದಾರೆ. 
 
ಸರ್ವಾನುಮತದಿಂದ ಆಯ್ಕೆ: ಸಿ.ಪಿ ಯೋಗೇಶ್ವರ್‌ 
ಬಸವರಾಜ ಬೊಮ್ಮಾಯಿ ಅವರಿಗೆ ಅನುಭವವಿದೆ. ಸರ್ವಾನುಮತದಿಂದ ಅವರನ್ನು ಆಯ್ಕೆ ಮಾಡಿದ್ದೇವೆ. ಈ ಆಯ್ಕೆ ಖುಷಿ ನೀಡಿದೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು