ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ತಜ್ಞರ ಸಮಿತಿ: ಸಿಎಂ ಬಸವರಾಜ ಬೊಮ್ಮಾಯಿ

Last Updated 3 ಸೆಪ್ಟೆಂಬರ್ 2021, 16:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) 60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನಾಲ್ಕು ಸಾರಿಗೆ ನಿಗಮಗಳ 60 ಮಂದಿ ಚಾಲಕರಿಗೆ ಅಪಘಾತ ರಹಿತ ಚಾಲನೆಗಾಗಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

‘ವರಮಾನ ಗಳಿಸುವ ಮಾದರಿಯ ಆಧಾರದಲ್ಲಿ ಸಾರಿಗೆ ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಆದರೂ, ನಷ್ಟದ ಸುಳಿಗೆ ಏಕೆ ಸಿಲುಕಿವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಸಮಸ್ಯೆಗೆ ಕಾರಣ ಮತ್ತು ಪುನಶ್ಚೇತನಕ್ಕೆ ಇರುವ ಅವಕಾಶಗಳ ಕುರಿತು ಅಧ್ಯಯನ ನಡೆಸುವಂತೆ ತಜ್ಞರ ಸಮಿತಿಗೆ ಸೂಚಿಸಲಾಗುವುದು. ಡಿಸೆಂಬರ್‌ ಅಂತ್ಯದೊಳಗೆ ಅಧ್ಯಯನ ವರದಿ ಪಡೆದು, ಮುಂದಿನ ಬಜೆಟ್‌ನಲ್ಲಿ ಅಗತ್ಯ ಯೋಜನೆಗಳನ್ನು ಪ್ರಕಟಿಸಲಾಗುವುದು’ ಎಂದರು.

ಸಾರಿಗೆ ನಿಗಮಗಳು ಅತ್ಯಾಧುನಿಕ ಕಾರ್ಯಾಗಾರ ಮತ್ತು ಯಂತ್ರೋಪಕರಣಗಳನ್ನು ಹೊಂದಿವೆ. ಅವುಗಳ ಸಮರ್ಪಕ ಬಳಕೆ ಕುರಿತು ಯೋಚಿಸಬೇಕಿದೆ. ಸರ್ಕಾರಿ ಸ್ವಾಮ್ಯದ ಕಾರ್ಯಾಗಾರಗಳಲ್ಲಿ ಖಾಸಗಿ ಬಸ್‌ಗಳಿಗೂ ಸೇವೆ ನೀಡುವ ಕುರಿತು ಪರಿಶೀಲನೆ ನಡೆಯಬೇಕಿದೆ. ಇರುವ ಎಲ್ಲ ಸಂಪನ್ಮೂಲಗಳನ್ನೂ ಬಳಸಿಕೊಂಡು ಈ ಸಂಸ್ಥೆಗಳನ್ನು ಲಾಭದಾಯಕವಾಗಿ ಪರಿವರ್ತಿಸಬೇಕು ಎಂದರು.

ಹೆಚ್ಚಿನ ನೆರವು:ಸಾರಿಗೆ ನಿಗಮಗಳಿಗೆ ಎಲ್ಲ ಅವಧಿಯಲ್ಲೂ ಸಹಕಾರ ದೊರಕಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ₹2,300 ಕೋಟಿ ನೀಡಲಾಗಿತ್ತು. ತಾವು ಅಧಿಕಾರ ಸ್ವೀಕರಿಸಿದ ಬಳಿಕ ₹ 130 ಕೋಟಿ ನೀಡಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ರಾಜ್ಯದ ಸಾರಿಗೆ ಕ್ಷೇತ್ರದ ದಿಕ್ಸೂಚಿಯಾಗಿ ಬದಲಾಗಬೇಕು. ನಿಗಮಗಳು ಬಿಟ್ಟ ಮಾರ್ಗಗಳಲ್ಲಿ ಮಾತ್ರ ಖಾಸಗಿಯವರು ಬಸ್‌ ಓಡಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು. ಆಗ ನಿಗಮಗಳು ಬಲಿಷ್ಠವಾಗಿ ಬೆಳೆಯಲು ಸಾಧ್ಯ’ ಎಂದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ‘ನಾಲ್ಕೂ ನಿಗಮಗಳ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. ಈ ದಿಸೆಯಲ್ಲಿ ನೌಕರರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸಕಾಲ ಖಾತೆ ಸಚಿವ ಬಿ.ಸಿ. ನಾಗೇಶ್, ಆನ್‌ಲೈನ್‌ ಮೂಲಕ ಅಹವಾಲು ಸಲ್ಲಿಸುವ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ಸಾರಿಗೆ ನಿಗಮಗಳ ಸಿಬ್ಬಂದಿ, ಕುಟುಂಬದವರು ಹಾಗೂ ಮಕ್ಕಳಿಗೆ ಆನ್‌ಲೈನ್‌ ಮೂಲಕ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಒಪ್ಪಂದವನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮತ್ತು ಇನ್ಫೋಸಿಸ್‌ ಕಂಪನಿಯ ಶಿಕ್ಷಣ, ತರಬೇತಿ ಮತ್ತು ಮೌಲ್ಯಮಾಪನ ವಿಭಾಗದ ಹಿರಿಯ ಉಪಾಧ್ಯಕ್ಷ ತಿರುಮಲ ಅರೋಹಿ ವಿನಿಮಯ ಮಾಡಿಕೊಂಡರು.

ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ, ಉಪಾಧ್ಯಕ್ಷ ಎಸ್‌.ಎನ್‌. ಈಶ್ವರಪ್ಪ, ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌. ನಂದೀಶ್ ರೆಡ್ಡಿ, ಎಂ.ಆರ್‌. ವೆಂಕಟೇಶ್, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ಉಪಾಧ್ಯಕ್ಷ ಬಸವರಾಜ ಎಸ್‌. ಕೇಲಗಾರ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌, ಬಿಎಂಟಿಸಿ ವ್ಯವಸ್ಥಾಪಕ ಎಂ.ಟಿ. ರೇಜು ಉಪಸ್ಥಿತರಿದ್ದರು.

ಅಂಚೆ ಲಕೋಟೆ ಬಿಡುಗಡೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 60 ವರ್ಷಗಳು ತುಂಬಿರುವ ಪ್ರಯುಕ್ತ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಕೆಂಪೇಗೌಡ ಬಸ್‌ ನಿಲ್ದಾಣ 50 ವರ್ಷ ಪೂರೈಸಿರುವುದಕ್ಕಾಗಿ ರೂಪಿಸಿರುವ ಸ್ಮರಣ ಸಂಚಿಕೆಯನ್ನೂ ಅನಾವರಣ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT