ಶನಿವಾರ, ಅಕ್ಟೋಬರ್ 23, 2021
20 °C
ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಸೇರಿ ಐವರಿಗೆ ‘ಮುರುಘಾಶ್ರೀ’

ಬಿಎಸ್‌ವೈಗೆ ‘ಶರಣಶ್ರೀ’, ಬೊಮ್ಮಾಯಿ ಅವರಿಗೆ ‘ಬಸವಭೂಷಣ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ಮುರುಘಾಮಠ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರದಾನ ಮಾಡುವ ‘ಬಸವಭೂಷಣ’ ಪ್ರಶಸ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾಗೂ ‘ಶರಣಶ್ರೀ’ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಅ.18ರಂದು ಮುರುಘಾಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಪ್ರಕಟಿಸಿದರು.

‘ಮುರುಘಾಶ್ರೀ’ ಪ್ರಶಸ್ತಿಗೆ ‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರನ್ನು ಆಯ್ಕೆ ಮಾಡಲಾಗಿದೆ. ‘ಆರೋಗ್ಯಪೂರ್ಣ ಸಮಾಜಕ್ಕಾಗಿ ಶ್ರಮಿಸುತ್ತಿರುವ ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಸಮಾಜಮುಖಿ ಚಿಂತಕ ಮತ್ತು ಶಿಕಾರಿಪುರ ಜುಬೇದ ವಿದ್ಯಾಸಂಸ್ಥೆಯ ಡಾ.ಅಮ್ಜದ್‌ ಹುಸೇನ್, ದೇಸಿ ಪದಶಕ್ತಿಯ ಶಬ್ದಗಾರುಡಿಗ ಯುಗಧರ್ಮ ರಾಮಣ್ಣ, ಅಖಿಲ ಭಾರತ ವೀರಶೈವ ಮಹಾಸಭಾದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಎಸ್. ನಾಗರತಿನಂ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಶರಣರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ 7 ವಿಶ್ವದಾಖಲೆ ಮುಡಿಗೇರಿಸಿಕೊಂಡಿರುವ ಬಾಲ ಪ್ರತಿಭೆ ಉಡುಪಿಯ ತನುಶ್ರೀ ಅವರನ್ನು ಭರಮಣ್ಣನಾಯಕ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುರುಘಾಶ್ರೀ ಮತ್ತು ಶೌರ್ಯ ಪ್ರಶಸ್ತಿಯು ₹ 25 ಸಾವಿರ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಅ.13ರಂದು ಮುರುಘಾಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಇಬ್ಬರಿಗೆ ‘ಬಸವಶ್ರೀ’: ‘ಬಸವಶ್ರೀ’ ಪ್ರಶಸ್ತಿಗೆ ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಅ. 17ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದರು.

‘2019ನೇ ಸಾಲಿನ ಪ್ರಶಸ್ತಿಗೆ ರಾಜೀವ್‌ ತಾರಾನಾಥ್‌ ಹಾಗೂ 2020ನೇ ಸಾಲಿಗೆ ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 5 ಲಕ್ಷ ಹಾಗೂ ಫಲಕ ಒಳಗೊಂಡಿದೆ’ ಎಂದು ತಿಳಿಸಿದರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು