ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಕ್ ಮಾಡಿಸಿ ಹಣ ಗಳಿಸುತ್ತಿದ್ದ ಬಿಬಿಎಂಪಿ ಗುತ್ತಿಗೆದಾರ!

2018ರಲ್ಲಿ ಶ್ರೀಕೃಷ್ಣನ ಪರಿಚಯ l ಇಸ್ಟೀಟ್ ಎಲೆ ಕದ್ದು ನೋಡಿ ಗೆಲುವು l ಐಷಾರಾಮಿ ಹೋಟೆಲ್‌ನಲ್ಲಿ ಪಾರ್ಟಿ
Last Updated 3 ನವೆಂಬರ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು (26) ಸ್ನೇಹಿತನನ್ನಾಗಿ ಮಾಡಿಕೊಂಡಿದ್ದ ಬಿಬಿಎಂಪಿ ಕ್ಲಾಸ್–1 ಗುತ್ತಿಗೆದಾರ ಸುನೀಶ್ ಹೆಗ್ಡೆ (34), ವಿವಿಧ ಜಾಲತಾಣಗಳನ್ನು ಹ್ಯಾಕ್ ಮಾಡಿಸಿ ಹಣ ಗಳಿಸುತ್ತಿದ್ದನೆಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮೂರನೇ ಆರೋಪಿಯಾದ ಸುನೀಶ್ ಹೆಗ್ಡೆ ವಿರುದ್ಧವೂ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

‘ಶ್ರೀಕೃಷ್ಣನನ್ನು 2018ರಲ್ಲಿ ಸುನೀಶ್ ಪರಿಚಯ ಮಾಡಿಕೊಂಡಿದ್ದ. ಆತ ಅಂತರರಾಷ್ಟ್ರೀಯ ಹ್ಯಾಕರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡುತ್ತಾನೆಂಬುದು ಸುನೀಶ್‌ಗೆ ಗೊತ್ತಾಗಿತ್ತು. ಹೀಗಾಗಿಯೇ ಹೆಚ್ಚು ಆತ್ಮಿಯತೆ ಬೆಳೆಸಿಕೊಂಡಿದ್ದ. ಶ್ರೀಕೃಷ್ಣನನ್ನು ಬಳಸಿಕೊಂಡು ಸುನೀಶ್ ಹಣ ಗಳಿಸಲಾರಂಭಿಸಿದ್ದ’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

ಎಂಜಿನಿಯರ್ ಪದವೀಧರ: ‘ಮಂಗಳೂರಿನ ಸುನೀಶ್ ಹೆಗ್ಡೆ, ಪೋಷಕರ ಜೊತೆ ಬೆಂಗಳೂರಿಗೆ ಬಂದು ಸಂಜಯನಗರದ 60 ಅಡಿ ರಸ್ತೆಯಲ್ಲಿ ವಾಸವಿದ್ದ. ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ (ಬಿ.ಇ) ಪದವಿ ಮುಗಿಸಿದ್ದ ಆತ, ಬಿಬಿಎಂಪಿ ಕೆಡಿಐಬಿ ಕ್ಲಾಸ್–1 ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ’ ಎಂಬ ಸಂಗತಿ ಪಟ್ಟಿಯಲ್ಲಿದೆ.

‘ಪ್ರಕರಣದ ಇತರ ಆರೋಪಿಗಳ ಸ್ನೇಹಿತನೂ ಆಗಿದ್ದ ಸುನೀಶ್, ಶ್ರೀಕೃಷ್ಣನನ್ನು ಹೋಟೆಲೊಂದರಲ್ಲಿ ಭೇಟಿಯಾಗಿ ಗೆಳೆತನ ಬೆಳೆಸಿದ್ದ. ಶ್ರೀಕೃಷ್ಣನ ಬಿಟ್‌ ಕಾಯಿನ್‌ಗಳನ್ನು ವಿನಿಮಯ ಮಾಡಿಸಿಕೊಡುತ್ತಿದ್ದ ರಾಬಿನ್ ಖಂಡೇಲ್‌ವಾಲಾ ಪರಿಚಯವೂ ಆತನಿಗೆ ಆಗಿತ್ತು.’

‘ಶ್ರೀಕೃಷ್ಣ, ಸುನೀಶ್ ಹಾಗೂ ಇತರರು, ಐಟಿಸಿ ಗಾರ್ಡೆನಿಯಾ, 4 ಸೀಜನ್, ಶಾಂಗ್ರಿಲಾ, ಗೋಕುಲಂ ಗ್ರ್ಯಾಂಡ್‌ ಹೋಟೆಲ್‌ಗಳಲ್ಲಿ ಸೇರಿ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯಲ್ಲಿ ಮದ್ಯ ಹಾಗೂ ಮಾದಕ ದ್ರವ್ಯ ಸೇವಿಸುತ್ತಿದ್ದ ಶ್ರೀಕೃಷ್ಣ, ತಾನೊಬ್ಬ ಅಂತರರಾಷ್ಟ್ರೀಯ ಹ್ಯಾಕರ್ ಎಂಬುದನ್ನು ಬಾಯ್ಬಿಟ್ಟಿದ್ದ. ಆನ್‌ಲೈನ್ ಗೇಮಿಂಗ್ ಹಾಗೂ ಹಣ ವಿನಿಮಯ ಏಜೆನ್ಸಿಗಳ ಜಾಲತಾಣಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದ. ಅದನ್ನು ಕೇಳಿ ಆಶ್ಚರ್ಯಗೊಂಡಿದ್ದ ಸುನೀಶ್, ತನಗೂ ಹಣ ಗಳಿಸಿಕೊಡುವಂತೆ ಹೇಳಿದ್ದ. ತನ್ನ ಖರ್ಚು ನೋಡಿಕೊಂಡರೆ, ಪಾಲು ನೀಡುವುದಾಗಿ ಶ್ರೀಕೃಷ್ಣ ಭರವಸೆ ನೀಡಿದ್ದ’ ಎಂಬುದು ಮಾಹಿತಿ ಪಟ್ಟಿಯಲ್ಲಿದೆ.

‘ಪೋಕರ್ ಸೇಂಟ್’ ಸರ್ವರ್ ಹ್ಯಾಕ್; ‘ಪೋಕರ್ ಬಾಜಿ’ ಆನ್‌ಲೈನ್ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ ಆರೋಪಿ, ಅದರಿಂದ ₹ 50 ಲಕ್ಷ ದೋಚಿದ್ದ. ನಂತರ, ‘ಪೋಕರ್‌ ಸೇಂಟ್’ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿ ಸುನೀಶ್‌ಗೆ ಕೋಟ್ಯಂತರ ರೂಪಾಯಿ ಹಣ ಮಾಡಿಕೊಟ್ಟಿದ್ದ’ ಎಂಬ ಸಂಗತಿಯನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಹ್ಯಾಕಿಂಗ್ ಮೂಲಕ ‘ಪೋಕರ್ ಸೇಂಟ್‌‘ ಗೇಮಿಂಗ್ ಜಾಲತಾಣದಲ್ಲಿ ಎದುರಾಳಿಗಳ ಇಸ್ಪೀಟ್ ಎಲೆಗಳನ್ನು ಶ್ರೀಕೃಷ್ಣ ನೋಡುತ್ತಿದ್ದ. ಅದೇ ಎಲೆಗಳನ್ನು ಸುನೀಶ್‌ಗೆ ತೋರಿಸುತ್ತಿದ್ದ. ಅದನ್ನು ನೋಡಿ ಗೇಮ್ ಆಡುತ್ತಿದ್ದ ಸುನೀಶ್ ಹಾಗೂ ಇತರರು, ಸುಲಭವಾಗಿ ಹಣ ಗಳಿಸುತ್ತಿದ್ದರು. ಅದೇ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂಬ ಮಾಹಿತಿಯೂ ತನಿಖೆಯಿಂದ ಗೊತ್ತಾಗಿದೆ.

ಆನ್‌ಲೈನ್ ಗೇಮ್ ಜಾಲತಾಣ ನಿರ್ವಹಣೆ: ‘ಕೋರಮಂಗಲದಲ್ಲಿ ಪೋಕರ್ ಕ್ಲಬ್ ನಡೆಸುತ್ತಿದ್ದ ಆರೋಪಿ ಸುನೀಶ್, ‘ಕಾಲಿಂಗ್ ಸ್ಟೇಷನ್ ಡಾಟ್ ಇನ್’ ಎಂಬ ಪೋಕರ್ ಆನ್‌ಲೈನ್ ಗೇಮ್ ಜಾಲತಾಣ ಸಹ ನಿರ್ವಹಿಸುತ್ತಿದ್ದ. ಇದರ ಬೆಳವಣಿಗೆಗೆ ಬೇರೆ ಗೇಮ್‌ಗಳ ಗ್ರಾಹಕರ ದತ್ತಾಂಶದ ಅಗತ್ಯವಿತ್ತು. ಇದುವರೆಗೂ ಹ್ಯಾಕ್ ಮಾಡಿದ್ದ ಗೇಮಿಂಗ್ ಗ್ರಾಹಕರ ದತ್ತಾಂಶಗಳನ್ನು ನೀಡುವಂತೆ ಶ್ರೀಕೃಷ್ಣನನ್ನು ಸುನೀಶ್ ಕೇಳಿದ್ದ. ಅದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ಹಾರ್ಡ್‌ಡಿಸ್ಕ್ ನೀಡಿದ್ದ. ಅದೇ ಹಾರ್ಡ್‌ಡಿಸ್ಕ್‌ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ’ ಎಂಬ ಅಂಶ ಪಟ್ಟಿಯಲ್ಲಿದೆ.

ಇ–ಪ್ರೊಕ್ಯೂರ್‌ಮೆಂಟ್ ಹ್ಯಾಕ್‌ನಲ್ಲೂ ಭಾಗಿ: ‘ರಾಜ್ಯ ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್ ಜಾಲತಾಣವನ್ನು ಹ್ಯಾಕ್ ಮಾಡುವ ಕೃತ್ಯದಲ್ಲಿ ಸುನೀಶ್ ಸಹ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ’ ಎಂಬ ಮಾಹಿತಿಯನ್ನು ಪಟ್ಟಿಯಲ್ಲಿ ದಾಖಲಿಸಲಾಗಿದೆ.

‘ಜಾಲತಾಣ ಹ್ಯಾಕ್ ಮಾಡಿದ್ದ ನಂತರ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆಗಳು ಬೇಕೆಂದು ಶ್ರೀಕೃಷ್ಣ ಹೇಳಿದ್ದ. ಸಂಬಂಧಿಯೂ ಆದ ಹೇಮಂತ್‌ ಮುದ್ದಪ್ಪನ ಬ್ಯಾಂಕ್ ಖಾತೆ ವಿವರವನ್ನು ಸುನೀಶ್, ಶ್ರೀಕೃಷ್ಣನಿಗೆ ಕೊಟ್ಟಿದ್ದ. ಅದೇ ಖಾತೆಗೆ ಹಣ ವರ್ಗಾವಣೆ ಆಗಿತ್ತು.’

‘ಹ್ಯಾಕಿಂಗ್‌ ಹಣದಲ್ಲಿ ಪಾಲು ನೀಡುವ ವಿಚಾರದಲ್ಲಿ ಶ್ರೀಕೃಷ್ಣನಿಂದ ನನಗೆ ಅನ್ಯಾಯವಾಗಿತ್ತು. ಇದೇ ಕಾರಣಕ್ಕೆ ಹಲವು ಬಾರಿ ಗಲಾಟೆಯೂ ಆಗಿತ್ತು’ ಎಂದು ಸುನೀಶ್ ಹೇಳಿಕೆ ನೀಡಿದ್ದಾನೆ’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

‘₹50 ಲಕ್ಷ ಕೊಟ್ಟಿದ್ದ ಪೋಕರ್ ಬಾಜಿ’

‘ಪೋಕರ್ ಬಾಜಿ’ ಆನ್‌ಲೈನ್ ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ, ಹಣ ದೋಚಿದ್ದ. ಈ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಠಾಣೆಗೆ ಗೇಮಿಂಗ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೂರು ನೀಡಿದ್ದರು. ಸರ್ವರ್ ಹೇಗೆ ಹ್ಯಾಕ್ ಆಯಿತು ? ಎಂಬ ಕುತೂಹಲ ಸಿಇಒಗೆ ಇತ್ತು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಸಿಇಒ ಅವರನ್ನು ಸಂಪರ್ಕಿಸಿದ್ದ ಸುನೀಶ್, ಆ್ಯಪ್‌ ಸುರಕ್ಷಿತ ಮಾಡಿಕೊಡುವುದಾಗಿ ಹೇಳಿದ್ದ. ಅದರಂತೆ ಸುನೀಶ್, ಶ್ರೀಕೃಷ್ಣ, ಪ್ರಸಿದ್ಧ ಹಾಗೂ ಸುಜಯ್, ಗೋವಾದಲ್ಲಿ ಸಿಇಒ ಭೇಟಿ ಮಾಡಿದ್ದರು. ಸಿಇಒ ಎದುರೇ ಶ್ರೀಕೃಷ್ಣ, ಹ್ಯಾಕಿಂಗ್ ಹೇಗಾಯಿತು ? ಎಂದು ವಿವರಿಸಿದ್ದ. ಜೊತೆಗೆ, ಬೇರೆ ಯಾರೊಬ್ಬರು ಹ್ಯಾಕ್ ಮಾಡದಂತೆ ಸುರಕ್ಷತೆ ಮಾಡಿಕೊಟ್ಟಿದ್ದ. ಇದಕ್ಕಾಗಿ ಸಿಇಒ, ಆರೋಪಿಗಳಿಗೆ ₹ 50 ಲಕ್ಷ ಕೊಟ್ಟಿದ್ದ’ ಎಂಬ ಅಂಶವನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಶ್ರೀಕೃಷ್ಣನಿಗಾಗಿ ₹2 ಕೋಟಿ ಖರ್ಚು’

‘ಹ್ಯಾಕರ್ ಶ್ರೀಕೃಷ್ಣನ ಬಿಟ್ ಕಾಯಿನ್‌ಗಳನ್ನು ಮಾರಿಸಿ ಕೊಡುತ್ತಿದ್ದ ಪಶ್ಚಿಮ ಬಂಗಾಳದ ರಾಬಿನ್ ಖಂಡೇಲ್‌ವಾಲಾ, ದಿನನಿತ್ಯದ ಖರ್ಚು ಸಹ ನೋಡಿಕೊಳ್ಳುತ್ತಿದ್ದ. ಆರೋಗ್ಯ ಸಮಸ್ಯೆಯಿಂದಾಗಿ ರಾಬಿನ್ ಕೆಲದಿನ ವಿಶ್ರಾಂತಿ ಪಡೆದಿದ್ದ. ಈ ಸಂದರ್ಭದಲ್ಲಿ ಶ್ರೀಕೃಷ್ಣನ ದಿನನಿತ್ಯದ ಖರ್ಚುಗಳನ್ನು ಸುನೀಶ್ ನೋಡಿಕೊಳ್ಳಲಾರಂಭಿಸಿದ್ದ’ ಎಂಬ ಸಂಗತಿ ಪಟ್ಟಿಯಲ್ಲಿದೆ.

‘ಹ್ಯಾಕಿಂಗ್‌ನಿಂದ ಬಂದ ಹಣದಲ್ಲಿ ಪಾಲು ನೀಡುವುದಾಗಿ ಹೇಳಿದ್ದರಿಂದ ಶ್ರೀಕೃಷ್ಣನಿಗಾಗಿ ಇದುವರೆಗೂ ₹ 2 ಕೋಟಿ ಖರ್ಚು ಮಾಡಿದ್ದೇನೆ. ಆತನ ಕೃತ್ಯದಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಸ್ನೇಹಿತರನ್ನೂ ರಾಜೀ ಮಾಡಿಸಿ ಬಿಡಿಸಿದ್ದೇನೆ’ ಎಂಬುದಾಗಿ ಸುನೀಶ್ ಹೇಳಿಕೆ ನೀಡಿದ್ದಾನೆ’ ಎಂಬ ಅಂಶವನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT