ಶುಕ್ರವಾರ, ಜುಲೈ 1, 2022
23 °C
ಬಿಬಿಎಂಪಿ: ಶೇ 7ಕ್ಕಿಳಿದ ಸೋಂಕು ಪತ್ತೆ ಪ್ರಮಾಣ

ಕೋವಿಡ್‌: ಶೇ 6ಕ್ಕೇರಿದ ಸಾವಿನ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯು ಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ ಕೋವಿಡ್‌ ರೋಗಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸುವ ವ್ಯವಸ್ಥೆಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಿದೆ. ಇನ್ನೊಂದೆಡೆ, ನಗರದಲ್ಲಿ ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕಿತರ ಸಾವಿನ ದರ ಶೇ 6.10ಕ್ಕೆ ಏರಿದೆ.

ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆ ಪ್ರಮಾಣ ಶೇ 7.58ಕ್ಕೆ ಇಳಿದಿದೆ. ಗುರುವಾರ 64,935 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ.

‘ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು ಆರಂಭಿಸಿದ ಬಳಿಕ ಪ್ರಾಥಮಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸುವುದು ಸಾಧ್ಯವಾಗಿದೆ. ಹೆಚ್ಚಿನವರಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಸಿಗುತ್ತಿದೆ. ಸೋಂಕು ಪತ್ತೆ ಪ್ರಮಾಣ ಗಣನೀಯವಾಗಿ ಇಳಿಕೆಯಾದರೂ ಕೋವಿಡ್‌ ಸೋಂಕಿತರ ಸಾವಿನ ದರ ಇಳಿಕೆ ಕಾಣದಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಅಚ್ಚರಿ ವ್ಯಕ್ತಪಡಿಸಿದರು. 

‘ಕೋವಿಡ್‌ ಸೋಂಕಿತರ ಸಾವಿದ ರದ ಶೇ 6.10ಕ್ಕೆ ಹೆಚ್ಚಿರುವುದು ನಿಜಕ್ಕೂ ಗಾಬರಿ ಹುಟ್ಟಿಸುವಂತಹದ್ದು. ಈಗಲೂ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆ ಕೊರತೆ ಇದೆ. ಐಸಿಯುಗಳಲ್ಲಿ ಹಾಸಿಗೆ ಅಗತ್ಯ ಇರುವವರಿಗೆ ಇದನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಹುಶಃ ಇದು ಕೂಡಾ ಸಾವಿನ ದರ ಹೆಚ್ಚಳಕ್ಕೆ ಕಾರಣವಾಗಿರಬಹುದು. ತೀವ್ರ ಅವಲಂಬನೆ ಘಟಕ (ಎಚ್‌ಡಿಯು) ಘಟಕಗಳಲ್ಲಿ ಹಾಸಿಗೆಗಳು ಲಭ್ಯ ಇವೆ. ನಾವು ಐಸಿಯುಗಳಲ್ಲಿ ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು. 

ಬಿಬಿಎಂಪಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ವೆಂಟಿಲೇಟರ್‌ ಸೌಲಭ್ಯ ಇರುವ 29 ಹಾಸಿಗೆಗಳು ಹಂಚಿಕೆಗೆ ಗುರುವಾರ ಲಭ್ಯ ಇದ್ದವು. ಆದರೆ, ಐಸಿಯುವಿನಲ್ಲಿ ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳು ಸಿಗದೇ ರೋಗಿಗಳು ಸಮಸ್ಯೆ ಎದುರಿಸುವ ಪರಿಸ್ಥಿತಿ ಗುರುವಾರವೂ ಮುಂದುವರಿದಿತ್ತು.

ಕೋವಿಡ್‌: ಸಾವಿರ ದರ, ಸೋಂಕು ಪತ್ತೆ ದರ

(ಕಳೆದ ಎಂಟು ವಾರಗಳ ವಿವರ) 

ದಿನಾಂಕ; ಸೋಂಕು ಪತ್ತೆ; ಸೋಂಕು ಪತ್ತೆ ದರ (ಶೇ); ಸಾವಿನ ದರ (ಶೇ)

ಏ.08–ಏ.14; 48,083; 9.04; 0.46

ಏ. 15– ಏ.21; 86,398; 12.59; 0.56

ಏ. 22– ಏ.28; 1,31,065; 22.50; 0.63

ಏ.29– ಮೇ 05; 1,57,102; 38.70; 0.55

ಮೇ 06– ಮೇ 12; 1,27,910; 37.65; 1.55

ಮೇ 13– ಮೇ 19; 79,257; 26.44; 1.77

ಮೇ 20– ಮೇ 26; 49,625; 14.52; 3.82

ಮೇ 27– ಜೂ.02; 30,417; 7.58; 6.10

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು