ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಅಭಿಯಾನ ಇನ್ನೊಂದು ವಾರ ವಿಸ್ತರಣೆ

ಬಿಬಿಎಂಪಿ: ನಿಗದಿತ ದಿನದಂದು ಲಸಿಕೆ ಹಾಕಿಸಿಕೊಳ್ಳದ ಕೆಲ ಆರೋಗ್ಯ ಕಾರ್ಯಕರ್ತರು
Last Updated 19 ಜನವರಿ 2021, 0:52 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ದಿನಗಳಲ್ಲಿ ಶೇ 54ರಷ್ಟು ಆರೋಗ್ಯ ಕಾರ್ಯಕರ್ತರು ಮಾತ್ರ ನಿಗದಿತ ದಿನದಂದೇ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರು ಇನ್ನೂ ಲಸಿಕಾ ಕೇಂದ್ರಕ್ಕೆ ಬಂದಿಲ್ಲ. ಹಾಗಾಗಿಕೋವಿಡ್‌ ಲಸಿಕೆ ಅಭಿಯಾನವನ್ನು ಎರಡನೇ ವಾರವೂ ಮುಂದುವರಿಸಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲು ಒಟ್ಟು 1.82 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಗೊತ್ತುಪಡಿಸಲಾಗಿತ್ತು. ಸರ್ಕಾರವು 1.05 ಲಕ್ಷ ಕೋವಿಡ್‌ ಲಸಿಕೆಗಳನ್ನು ಬಿಬಿಎಂಪಿ ವ್ಯಾಪ್ತಿಯ ಲಸಿಕಾ ಕೇಂದ್ರಗಳಿಗೆ ಪೂರೈಸಿತ್ತು.

‘ನಾವು ಮೊದಲ ಹಂತದ ಲಸಿಕಾ ಕಾರ್ಯವನ್ನು ಗರಿಷ್ಠ ಒಂದು ವಾರದೊಳಗೆ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ನಿರೀಕ್ಷೆಯಂತೆ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಂಡಿಲ್ಲ. ಹಾಗಾಗಿ ಮೊದಲ ಹಂತದ ಲಸಿಕಾ ಅಭಿಯಾನವನ್ನು ಇನ್ನೂ ಒಂದು ವಾರ ಮುಂದುವರಿಸಲು ನಿರ್ಧರಿಸಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಸಿಕೆ ಪಡೆಯುವ ಬಗ್ಗೆ ಫಲಾನುಭವಿಗಳ ಮೊಬೈಲ್‌ಗೆ ಸಂದೇಶ ಕಳುಹಿಸಿ ಹಾಗೂ ಕರೆ ಮಾಡಿ ತಿಳಿಸಲಾಗುತ್ತದೆ. ಲಸಿಕೆ ಪಡೆಯಲೇಬೇಕೆಂದು ಯಾರಿಗೂ ಬಲವಂತ ಮಾಡುವುದಿಲ್ಲ. ಅದರ ಬದಲು ಲಸಿಕೆಯ ಪ್ರಯೋಜನಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು’ ಎಂದು ಕೋರಿದರು.

‘ಕಾರಣಾಂತರಗಳಿಂದ ಕೆಲವು ಫಲಾನುಭವಿಗಳು ಸೋಮವಾರ ಲಸಿಕೆ ಪಡೆಯಲು ಸಾಧ್ಯವಾಗಿಲ್ಲ. ಭಾನುವಾರ ರಜಾ ದಿನವಾದ ಕಾರಣ ಕೆಲವರು ಬೇರೆಡೆ ಹೋಗಿದ್ದ ಕಾರಣ ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯಲು ಬರದೇ ಇರುವವರಿಗೆ ಮತ್ತೊಂದು ದಿನ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ 180 ಲಸಿಕಾ ಕೇಂದ್ರಗಳಲ್ಲಿ ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಕಂಡುಬಂದಿಲ್ಲ. ಭಾನುವಾರವೂ ಲಸಿಕೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾದ ಘಟನೆಗಳು ನಡೆದಿಲ್ಲ. ನೋಂದಣಿ ಮಾಡಿಕೊಂಡಿರುವವರು ಉತ್ಸಾಹದಿಂದಲೇ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ನೀಡುವ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳಮಾಡಲಾಗುತ್ತದೆ’ ಎಂದು ಹೇಳಿದರು.

ದಾಸಪ್ಪ ಆಸ್ಪತ್ರೆಯ ಲಸಿಕೆ ಕೇಂದ್ರಕ್ಕೆ ಬಿಬಿಎಂಪಿ ಆಯುಕ್ತರು ಸೋಮವಾರ ಭೇಟಿ ನೀಡಿ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT