ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೆಸರಿನಲ್ಲಿ ಬಿ.ಸಿ.ಪಾಟೀಲ ಲೂಟಿ: ಸಿದ್ದರಾಮಯ್ಯ ವಾಗ್ದಾಳಿ

ಹಿರೇಕೆರೂರು ‘ಪ್ರಜಾಧ್ವನಿ ಯಾತ್ರೆ’ ಸಮಾವೇಶ
Last Updated 14 ಮಾರ್ಚ್ 2023, 22:53 IST
ಅಕ್ಷರ ಗಾತ್ರ

ಹಾವೇರಿ: ‘ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ₹8 ಕೋಟಿ ಸಿಕ್ಕಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಮನೆ ಮೇಲೆ ದಾಳಿ ಮಾಡಿದರೆ ಕನಿಷ್ಠ ₹1 ಸಾವಿರ ಕೋಟಿ ಸಿಗುತ್ತದೆ. ರೈತರ ಹೆಸರು ಹೇಳುವುದು ಲೂಟಿ ಹೊಡೆಯುವುದು ಇದೇ ಪಾಟೀಲರ ಕಸುಬಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹಿರೇಕೆರೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾಲ್ಕು ವರ್ಷಗಳಿಂದ ಲೂಟಿ ಹೊಡೆದಿದ್ದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರ ಸರ್ಕಾರವಿದು. ಆ ಕಳ್ಳರಲ್ಲಿ ಬಿ.ಸಿ.ಪಾಟೀಲ ಕೂಡ ಒಬ್ಬ. ಸಿನಿಮಾ ನಟ ಬೇರೆ, ಜನರ ಹತ್ತಿರ ಹೇಗೆ ನಟಿಸಬೇಕು ಎಂಬುದನ್ನು ಚೆನ್ನಾಗಿ ಕಲಿತುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘2018ರಲ್ಲಿ ಚುನಾವಣಾ ಪ್ರಚಾರಕ್ಕೆ ನಾನು ಬರದಿದ್ದರೆ ಅಂದಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಸಿ. ಪಾಟೀಲ ಸೋಲುತ್ತಿದ್ದರು. ಗೆದ್ದ ನಂತರ ನಿಮ್ಮನ್ನು ಬಿಟ್ಟು ಹೋಗಲ್ಲ ಎಂದಿದ್ದರು. ಆಪರೇಷನ್‌ ಕಮಲದಲ್ಲಿ ₹25 ಕೋಟಿ ಕೊಟ್ಟು ಬಿಜೆಪಿಯವರು ಪಾಟೀಲರನ್ನು ಖರೀದಿಸಿದರು. 2019ರ ಉಪಚುನಾವಣೆಯಲ್ಲಿ ₹40 ಕೋಟಿ ಖರ್ಚು ಮಾಡಿ, ಬಿಜೆಪಿಯಿಂದ ಗೆದ್ದು ಶಾಸಕರಾಗಿ, ಮಂತ್ರಿಯೂ ಆದರು. ದುಡ್ಡು ಹೊಡೆದು ದೊಡ್ಡವನಾದನೇ ಹೊರತು ಹಿರೇಕೆರೂರು ಅಭಿವೃದ್ಧಿಗೆ ಏನೂ ಮಾಡಲಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ, ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಗ್ಯಾರಂಟಿ ಕಾರ್ಡ್‌ ಅನ್ನು ಸಿಎಂ ಬೊಮ್ಮಾಯಿ ಸುಳ್ಳು ಎಂದು ಅಣಕವಾಡಿದ್ದಾರೆ. 2013ರ ಚುನಾವಣೆಯಲ್ಲಿ 165 ಭರವಸೆಗಳಲ್ಲಿ 158 ಕಾರ್ಯಕ್ರಮಗಳನ್ನು ಜಾರಿಗೆ ತಂದೆವು. ಬಿಜೆಪಿ ಕೊಟ್ಟ ಭರವಸೆ ಈಡೇರಿಸದೆ ವಚನಭ್ರಷ್ಟವಾಗಿದೆ’ ಎಂದು ತಿರುಗೇಟು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT