ಗುರುವಾರ , ಮಾರ್ಚ್ 23, 2023
28 °C
ಹಿರಿಯೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

ಮತಾಂತರಕ್ಕೆ ಮುಂದಾದರೆ ಉಗ್ರ ಕ್ರಮ: ಬಿ.ಸಿ.ಪಾಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ರಾಜ್ಯದಲ್ಲಿ ಯಾರೇ ಮತಾಂತರ ಮಾಡುವುದಕ್ಕೆ ಮುಂದಾದರು ಅಂಥವರ ಮೇಲೆ ರಾಜ್ಯ ಸರ್ಕಾರ ಉಗ್ರ ಕ್ರಮ ಕೈಗೊಳ್ಳಲಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹಿರಿಯೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಭ್ರಷ್ಟನಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಲ್ವರ್‌ ಬ್ರಿಡ್ಜ್‌ ನಿರ್ಮಾಣದಲ್ಲಿ ₹ 500 ಕೋಟಿ ಪಡೆದಿದ್ದಾರೆ ಎಂಬ ಆರೋಪ ಇತ್ತು. ಆರೋಪ ಮಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ. ನಾನು ಲಂಚ ಪಡೆದಿದ್ದೇನೆ ಎಂಬುದಾಗಿ ಆರೋಪಿಸುವವರು ಸಾಬೀತು ಪಡಿಸಬೇಕು. ಇಲ್ಲದಿದ್ದರೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಜನಪರವಾಗಿದ್ದರೆ ಜನ ತಿರಸ್ಕರಿಸುತ್ತಿರಲಿಲ್ಲ. ಜನವಿರೋಧಿ ಆಗಿರುವುದಕ್ಕೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. 2023ರಲ್ಲೂ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಕೃಷಿ ಇಲಾಖೆ ಪಾರದರ್ಶಕವಾಗಿದೆ. ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಸರ್ಕಾರವೇ ರೈತರ ಹೊಲ–ಮನೆ ಬಾಗಿಲಿಗೆ ಹೋಗುವ ಕೆಲಸ ಮಾಡುತ್ತಿದೆ’ ಎಂದರು.

‘ನಿಫಾ ವೈರಸ್ ರಾಜ್ಯ ಪ್ರವೇಶಿಸದಂತೆ ಎಲ್ಲಾ ಗಡಿಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಉಳಿದ ರಾಜ್ಯಗಳಿಗಿಂತ ಕರ್ನಾಟಕ ಸುರಕ್ಷಿತವಾಗಿದೆ’ ಎಂದ ಅವರು, ‘ಕೇಂದ್ರದ ನೂತನ ಕೃಷಿ ಕಾಯ್ದೆ ರೈತ ವಿರೋಧಿಯಲ್ಲ. ಉತ್ಪನ್ನಗಳ ಮಾರಾಟಕ್ಕೆ ರೈತರಿಗೆ ಸ್ವಾತಂತ್ರ ಕೊಟ್ಟಿದೆ. ಪಂಜಾಬ್‌ ಸೇರಿ ವಿವಿಧ ರಾಜ್ಯಗಳು ಎಂಎಸ್‌ಪಿ ಬೆಂಬಲ ಬೆಲೆಯಿಂದ ಲಾಭ ಪಡೆದಿವೆ. ಪ್ರತಿಭಟನೆ ಎಂಬುದು ವಿರೋಧ ಪಕ್ಷದವರ ದುರುದ್ದೇಶ’ ಎಂದು ಕಿಡಿಕಾರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು