ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಚಿವರ ಪ್ರವೇಶ ನಿಷೇಧ: ಬೆಳಗಾವಿ ನಗರದ ಸುತ್ತ ಸರ್ಪಗಾವಲು

Last Updated 6 ಡಿಸೆಂಬರ್ 2022, 5:06 IST
ಅಕ್ಷರ ಗಾತ್ರ

ಬೆಳಗಾವಿ: ಒಂದೆಡೆ ಕನ್ನಡ ಪರ ಸಂಘಟನೆಗಳು, ಇನ್ನೊಂದೆಡೆ ಮಹಾರಾಷ್ಟ್ರದ ಎಂಇಎಸ್‌ ಕಾರ್ಯಕರ್ತರು ನಗರಕ್ಕೆ ನುಗ್ಗುವ ಸವಾಲು ಹಾಕಿದ ಹಿನ್ನೆಲೆಯಲ್ಲಿ, ಬೆಳಗಾವಿಯ ಗಡಿಯ ಎಲ್ಲ 22 ಸ್ಥಳಗಳಲ್ಲೂ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಲಾಗಿದೆ.

ಬೆಳಗಾವಿ, ಖಾನಾಪುರ, ನಿಪ್ಪಾಣಿ, ಹುಕ್ಕೇರಿ, ಚಿಕ್ಕೋಡಿ, ಕಾಗವಾಡ ತಾಲ್ಲೂಕುಗಳಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ಪೊಲೀಸರು ಕಾವಲು ನಿಂತಿದ್ದಾರೆ.

1,000 ಪೊಲೀಸರನ್ನು ಚೆಕ್‌ಪೋಸ್ಟ್‌ ಸ್ಥಳದಲ್ಲಿ ನಿಯೋಜಿಸಲಾಗಿದೆ. ಇನ್ನೊಂದೆಡೆ ನಗರದಲ್ಲಿ ಕೂಡ ಕಟ್ಟುನಿಟ್ಟಿನ ಭದ್ರತೆ ಮಾಡಲಾಗಿದ್ದು, ಸಾವಿರಕ್ಕೂ ಹೆಚ್ಚು ಖಾಕಿಧಾರಿಗಳು ಕಾವಲು ನಿಂತಿದ್ದಾರೆ.

ಮಹಾರಾಷ್ಟ್ರ ಸಚಿವರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಇದನ್ನು ಖಂಡಿಸಿ ಎಂಇಎಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದಾರೆ. ಅವರಿಗೆ ಸವಾಲೊಡ್ಡಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರು ಬೆಳಗಾವಿಯಲ್ಲಿ ಬೃಹತ್‌ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರು ಬೆಳಗಾವಿ ಗಡಿ ಪ್ರವೇಶಿಸುವುದನ್ನು ತಡೆಯಲು, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 500ಕ್ಕೂ ಹೆಚ್ಚು ಪೊಲೀಸರು ಸರ್ಪಗಾವಲು ನಿಂತಿದ್ದಾರೆ. ಪ್ರತಿಯೊಂದು ವಾಹನವನ್ನು ಕೂಲಂಕಶವಾಗಿ ತಪಾಸಣೆ ಮಾಡಿ ಗಡಿಯೊಳಗೆ ಬಿಡುವುದು ಮುಂದುವರಿದಿದೆ.

ಕನ್ನಡ ಸಂಘಟನೆಗಳ ಕಾರ್ಯಕರ್ತರು ಹಾಗೂ ಎಂಇಎಸ್‌ ಇಬ್ಬರಿಗೂ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ಸಿಆರ್‌ಪಿಸಿ 144(3) ಅಡಿ ನಿಷೇಧಾಜ್ಞೆ ಇರುವ ಕಾರಣ ಯಾವುದೇ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮವಾಗಿ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಗಡಿ ಗ್ರಾಮಗಳಲ್ಲಿ ತ್ವೇಷಮಯ ಸ್ಥಿತಿ

ಕರ್ನಾಟಕ– ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡು ರಾಜ್ಯದಲ್ಲಿ 865 ಹಳ್ಳಿಗಳು, ಮಹಾರಾಷ್ಟ್ರದಲ್ಲಿ 220 ಹಳ್ಳಿಗಳು ಇವೆ. ಗಡಿ ತಂಟೆ ತಾರಕಕ್ಕೇರಿದ ಕಾರಣ ಈ ಎಲ್ಲ ಹಳ್ಳಿಗಳಲ್ಲೂ ಈಗ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.

ಒಂದೆಡೆ ಮಹಾರಾಷ್ಟ್ರದಿಂದ ಸಚಿವರು, ಎಂಇಎಸ್‌, ಶಿವಸೇನೆ ಕಾರ್ಯಕರ್ಯರು ಪ್ರವೇಶಿದಂತೆ ಕರ್ನಾಟಕ ಪೊಲೀಸರು ಭದ್ರತೆ ನಿಯೋಜನೆ ಮಾಡಿದ್ದಾರೆ.

ಅದೇ ರೀತಿ, ಕನ್ನಡ ಸಂಘಟನೆಗಳ ಕಾರ್ಯಕರ್ತರು ಮಹಾರಾಷ್ಟ್ರ ಪ್ರವೇಶ ಮಾಡದಂತೆ ಗಡಿ ದಾರಿಗಳಲ್ಲಿ ಅಲ್ಲಿನ ಪೊಲೀಸರೂ ಭದ್ರತೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT