ಶುಕ್ರವಾರ, ಜುಲೈ 1, 2022
28 °C

ಪುಂಡರಿಗೆ ದೇಶದ್ರೋಹದ ದಂಡ: ತಂಟೆಕೋರರಿಗೆ ಶಾಸ್ತಿ ಎಂದ ಸಿ.ಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ‘ಮಹಾರಾಷ್ಟ್ರ ಪರ ಒಲವಿಟ್ಟುಕೊಂಡು ಕರ್ನಾಟಕದ ವಿರುದ್ಧ ಸದಾ ಕತ್ತಿ ಮಸೆಯುವ ಪುಂಡ ತಂಟೆಕೋರರ ವಿರುದ್ಧ ದೇಶ ದ್ರೋಹ ಮತ್ತು ಗೂಂಡಾ ಕಾಯ್ದೆ ಹಾಕಿ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟು ಮಾತಿನಲ್ಲಿ ಎಚ್ಚರಿಕೆ ಕೊಟ್ಟರು.

ನಾಡಿನ ಎರಡನೇ ರಾಜಧಾನಿ ಎಂದೇ ಹೆಸರಾಗಿರುವ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸೋಮವಾರ ಮಾತನಾಡಿದ ಬೊಮ್ಮಾಯಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದೂ ಗುಡುಗಿದರು.

‘ಪದೇ ಪದೇ ಗಡಿ ವಿವಾದವನ್ನು ಕೆದಕಿ ಪುಂಡಾಟ ನಡೆಸುತ್ತಿರುವ ಶಕ್ತಿಗಳಿಗೆ ಕಡಿವಾಣ ಹಾಕಬೇಕು, ಗಡಿಯಾಚೆಯಿಂದ ಪ್ರಚೋದನೆ ನಿಲ್ಲಿಸಬೇಕು. ಅಲ್ಲಿರುವ ಕನ್ನಡಿಗರಿಗೆ ರಕ್ಷಣೆ ಕೊಡಬೇಕು’ ಎಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿ ಬೊಮ್ಮಾಯಿಮಂಡಿಸಿದ ನಿರ್ಣಯಕ್ಕೆ ವಿಧಾನ ಮಂಡಲದ ಉಭಯ ಸದನಗಳು ಸರ್ವಾನುಮತದ ಒಪ್ಪಿಗೆ ನೀಡಿದವು.

ಅಲ್ಲದೆ, ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದ ಪ್ರಮುಖ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು. ಈ ಪ್ರತಿಮೆಗಳು ಸೂರ್ಯ– ಚಂದ್ರರು ಇರುವವರೆಗೂ ಇರಬೇಕು ಎಂದೂ ಮುಖ್ಯಮಂತ್ರಿ ಪ್ರಕಟಿಸಿದರು.

ಇದಕ್ಕೂ ಮುನ್ನ ಉಭಯ ಸದನಗಳಲ್ಲಿ ಎಲ್ಲ ಪಕ್ಷಗಳ ಸದಸ್ಯರು ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿದ್ದು, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು, ಖಾನಾಪುರದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿ ಕನ್ನಡ ಬಾವುಟ ಸುಟ್ಟಿರುವುದನ್ನು ಖಂಡಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ದೇಶಭಕ್ತರ, ನಾಡಿನ ಭಕ್ತರ ಪ್ರತಿಮೆಗಳನ್ನು ವಿರೂಪಗೊಳಿಸುವವರು ಮತ್ತು ಮಸಿ ಬಳಿದು ಅಪಮಾನ ಮಾಡುವವರ ವಿರುದ್ಧ ದೇಶ ದ್ರೋಹ ಕಾಯ್ದೆ ಹಾಕಿ, ಆ ಕಾಯ್ದೆಯ ಅನ್ವಯವೇ ವಿಚಾರಣೆ ನಡೆಸಲಾಗುವುದು. ಇಂತಹ ಕೃತ್ಯಗಳನ್ನು ನಡೆಸುವವರು ಮತ್ತು ಅದರ ಹಿಂದಿರುವವರ ವಿರುದ್ಧ ಗೂಂಡಾ ಕಾಯ್ದೆ ಹಾಕುತ್ತೇವೆ ಎಂದರು.

ಇಷ್ಟು ದಿನ ಶಿಷ್ಯರ ಬಂಧನ ಆಗುತ್ತಿತ್ತು. ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಾ ಹಿಂದೆ ನಿಂತು ಕೆಲಸ ಮಾಡುವ ಪ್ರಮುಖರನ್ನು ಬಂಧಿಸುವ ಕೆಲಸ ಮಾಡಿದ್ದೇವೆ. 26 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

‘ರಾಜ್ಯದಲ್ಲಿ ಎಂಇಎಸ್‌ ಸಂಘಟನೆಯನ್ನು ನಿಷೇಧಿಸುವ ಸಂಬಂಧ ಕಾನೂನಾತ್ಮಕವಾಗಿ ಪರಿಶೀಲಿಸಲಾಗುವುದು. ಇಲ್ಲವಾದರೆ, ಅಂತಹ ಸಂಘಟನೆಯ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಒತ್ತಡಗಳಿಗೂ ಮಣಿಯುವುದಿಲ್ಲ’ ಎಂದು ತಿಳಿಸಿದರು.

‘ರಾಜ್ಯದ ಗಡಿ ಭಾಗಗಳಲ್ಲಿ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಬಗ್ಗೆ ಸಂಕಲ್ಪ ಮಾಡುತ್ತೇವೆ. ಮಹಾರಾಷ್ಟ್ರದ ರಾಜಕೀಯ ಚಟುವಟಿಕೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ಎರಡೂ ರಾಜ್ಯಗಳ ಜನರ ಮಧ್ಯೆ ವಿಶ್ವಾಸಕ್ಕೆ ಕೊರತೆ ಇಲ್ಲ. ಸಾಮರಸ್ಯದಿಂದಲೇ ಇದ್ದಾರೆ. ಆದರೆ, ಗಡಿ ತಂಟೆ ಮಾಡುವ ಪುಂಡರಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಬೊಮ್ಮಾಯಿ ಹೇಳಿದರು.

‘ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಬಂಧಿತರಾದವರನ್ನು ತನಿಖೆ ಮಾಡಿ, ಇದರ ಹಿಂದಿನ ಶಕ್ತಿಗಳು ಯಾರು ಮತ್ತು ಯಾರ ನಿರ್ದೇಶನದ ಮೇರೆಗೆ ಷಡ್ಯಂತ್ರ ಮಾಡಿದ್ದಾರೆ ಎಂಬದನ್ನು ಬಯಲಿಗೆಳೆಯುತ್ತೇವೆ. ತನಿಖೆಯ ಬಳಿಕ ಅದನ್ನು ಖಂಡಿತಾ ಬಹಿರಂಗಪಡಿಸಿ ರಾಜ್ಯದ ಜನರ ಗಮನಕ್ಕೆ ತರುತ್ತೇವೆ’ ಎಂದರು.

‘ಕರ್ನಾಟಕ ಸೇರುವ ನಿರ್ಣಯಕ್ಕೆ ಬೆಂಬಲ’
‘ಗಡಿಯಲ್ಲಿ (ಮಹಾರಾಷ್ಟ್ರ) ಕನ್ನಡಿಗರ ಜೀವನ ಸರಿ ಇಲ್ಲ ಎಂದು ಕರ್ನಾಟಕ ಸೇರಲು ಯಾವುದೇ ಗ್ರಾಮ ಅಥವಾ ಪ್ರದೇಶ ನಿರ್ಣಯ ಮಾಡಿದರೆ, ಸೇರಿಸಿಕೊಳ್ಳಲು ನಮ್ಮ ಬೆಂಬಲ ಇದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

‘ನನ್ನ ಹೇಳಿಕೆಯಿಂದ ವಿವಾದ ಆಗಬಹುದು. ಆದರೆ ಆಗಲಿ ಬಿಡಿ. ಈವರೆಗೆ  ರಕ್ಷಣಾತ್ಮಕ ಧೋರಣೆಯನ್ನೇ ಅನುಸರಿಸಿಕೊಂಡು ಬಂದಿದ್ದೇವೆ. ಇದರಿಂದ ಒಳಿತಾಗಿಲ್ಲ. ದಿಟ್ಟ ನಿಲುವು ತೆಗೆದುಕೊಂಡಾಗ ಮಾತ್ರ ಬದಲಾವಣೆ ಸಾಧ್ಯ’ ಎಂದು ತಿಳಿಸಿದರು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ಎಂಬ ತಾಲ್ಲೂಕಿನಲ್ಲಿ 40 ಗ್ರಾಮ ಪಂಚಾಯಿತಿಗಳು ತಮಗೆ ಮಹಾರಾಷ್ಟ್ರದಲ್ಲಿ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಿಸಿ ಎಂದು ನಿರ್ಣಯ ತೆಗೆದುಕೊಂಡಿವೆ ಎಂದರು.

*
ರಾಯಣ್ಣ ಪ್ರತಿಮೆ ವಿರೂಪಗೊಳಿಸಿದವರು ಮತ್ತು ಶಿವಾಜಿ ಪ್ರತಿಮೆಗೆ ಮಸಿ ಬಳಿದವರನ್ನು ಗಡಿಪಾರು ಮಾಡಬೇಕು. ಈ ಕೃತ್ಯ ಎಸಗಿದವರು ಬುದ್ಧಿಹೀನರು.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*
ಎಂಇಎಸ್‌ನವರು ಹೇಡಿಗಳು, ಅವರು ಗಂಡಸರೇ ಆದರೆ ಹಗಲಿನಲ್ಲಿ ಬಂದು ರಾಯಣ್ಣನ ಪ್ರತಿಮೆ ಮುಟ್ಟಲಿ. ಕನ್ನಡಿಗರು ಏನು ಎಂಬುದನ್ನು ತೋರಿಸುತ್ತೇವೆ.
–ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು