ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜಾಗಿಲ್ಲ ಪರಿಹಾರ ಕೇಂದ್ರಗಳು!

ಕೊರೊನಾ ಭೀತಿ: ಹೆಚ್ಚುವರಿ ಕೇಂದ್ರಗಳಿಗಾಗಿ ಪರದಾಟ
Last Updated 6 ಆಗಸ್ಟ್ 2020, 8:19 IST
ಅಕ್ಷರ ಗಾತ್ರ

ಬೆಳಗಾವಿ: ನಿರಂತರ ಮಳೆಯಿಂದಾಗಿ‌ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ಈ ಬಾರಿಯೂ ಪ್ರವಾಹ ಉಂಟಾಗುವ ಸಾಧ್ಯತೆಗಳಿರುವುದರಿಂದ ಜನರಿಗೆ ಆಶ್ರಯ ನೀಡಲು ಪರಿಹಾರ ಕೇಂದ್ರಗಳನ್ನು ಸಜ್ಜುಗೊಳಿಸುವ ಕಾರ್ಯ ಇನ್ನೂ ಅರಂಭವಾಗಿಲ್ಲ.

ಹೋದ ವರ್ಷ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ 423 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 872 ಹಳ್ಳಿಗಳು ಬಾಧಿತವಾಗಿದ್ದವು. ಅಲ್ಲಿನ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿತ್ತು. ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಲ್ಲಿರುವ ಶಾಲೆಗಳು, ಸಮುದಾಯ ಭವನಗಳು ಮೊದಲಾದ ಸರ್ಕಾರಿ ಕಟ್ಟಡಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿತ್ತು. ಆದರೆ, ಧಾರಾಕಾರ ಮಳೆಯಾಗುತ್ತಿದ್ದರೂ ಈ ಬಾರಿ ಕೇಂದ್ರಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿಲ್ಲ.

ಸೌಲಭ್ಯ ಕಲ್ಪಿಸಲಾಗಿಲ್ಲ:

ಈಗಾಗಲೇ ಹುಕ್ಕೇರಿ ತಾಲ್ಲೂಕಿನ ಮಾರ್ಕಂಡೇಯ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ನದಿ ತೀರದಲ್ಲಿರುವ ಗ್ರಾಮಗಳ ಜನರಿಗೆ ಎತ್ತರದ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ. ಪಾಶ್ಚಾಪೂರ ಸೇರಿದಂತೆ ಕೆಲವು ಗ್ರಾಮಗಳ ಸಂಪರ್ಕವೇ ಕಡಿತಗೊಂಡಿದೆ. ಆದರೆ, ಆತಂಕಕ್ಕೆ ಸಿಲುಕಿರುವ ಜನರಿಗೆ ಪರಿಹಾರ ಕೇಂದ್ರಗಳ ವ್ಯವಸ್ಥೆಯಾಗಿಲ್ಲ. ಹೋದ ವರ್ಷಗಳು ಈ ಹಳ್ಳಿಗಳು ಪ್ರವಾಹಪೀಡಿತವಾಗಿದ್ದವು.

‘ಹಿಂದಿನ ವರ್ಷದ ಅನುಭವದ ಆಧಾರದ ಮೇಲೆ ಈ ವೇಳೆಗಾಗಲೇ ಪರಿಹಾರ ಕೇಂದ್ರಗಳಿಗೆ ಜಾಗಗಳನ್ನು ಗುರುತಿಸಬೇಕಾಗಿತ್ತು. ಅಲ್ಲಿಗೆ ಕುಡಿಯುವ ನೀರು, ಶೌಚಾಲಯ, ದಿನಸಿ ಪದಾರ್ಥ ಪೂರೈಕೆ ಮೊದಲಾದ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಾಗಿತ್ತು. ಜಾನುವಾರುಗಳಿಗೆ ಗೋಶಾಲೆ ಮತ್ತು ಮೇವಿನ ವ್ಯವಸ್ಥೆ ಆಗಬೇಕಾಗಿತ್ತು. ಈ ನಿಟ್ಟಿನಲ್ಲಿ ಪೂರ್ವ ತಯಾರಿಗಳು ಪರಿಣಾಮಕಾರಿಯಾಗಿ ನಡೆದಿಲ್ಲ. ಎಲ್ಲರೂ ಕೋವಿಡ್ ನಿಯಂತ್ರಣ ಕೆಲಸದಲ್ಲಿ ತೊಡಗಿರುವುದರಿಂದ ಇತ್ತ ಗಮನ ಹರಿಸಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವ್ಯವಸ್ಥೆಗೆ ಕ್ರಮ

ಈ ನಡುವೆ, ಕೊರೊನಾ ಸೋಂಕಿನ ಭೀತಿ ಕಾರಣದಿಂದ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಹೆಚ್ಚುವರಿಯಾಗಿ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಎಲ್ಲ ತಾಲ್ಲೂಕುಗಳ ಸರ್ಕಾರಿ ವಸತಿ ಶಾಲೆಗಳು, ಹಾಸ್ಟೆಲ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಬಳಸಲಾಗುತ್ತಿದೆ. ಹೀಗಾಗಿ, ಕೇಂದ್ರಗಳಿಗಾಗಿ ಪರದಾಟ ಎದುರಾಗುವ ಸಾಧ್ಯತೆ ಎನ್ನಲಾಗುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಕಳೆದ ವರ್ಷದ ಅನುಭವ ಆಧರಿಸಿ ಪರಿಹಾರ ಕೇಂದ್ರಗಳನ್ನು ಪಟ್ಟಿ ಮಾಡಿ ಸಿದ್ಧತೆ ಕೈಗೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಸಮುದಾಯ ಭವನಗಳ ಬದಲಿಗೆ, ಸರ್ಕಾರಿ ಶಾಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಕೋವಿಡ್ ಸೋಂಕಿನ ಭೀತಿ ಇರುವುದರಿಂದ ಹಾಗೂ ಅಂತರ ಕಾಯ್ದುಕೊಳ್ಳಬೇಕಿದೆ. ಹೀಗಾಗಿ, ಹೋದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಬೇಕಾಗುತ್ತದೆ. ಸಂತ್ರಸ್ತರಿಗೆ ಮುಖಗವಸುಗಳು, ಸ್ಯಾನಿಟೈಸರ್‌ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ತಪಾಸಣೆಗೆ ಒಳಪಡಿಸಿ ರೋಗ ಲಕ್ಷಣ ಇರುವವರನ್ನು ಪ್ರತ್ಯೇಕವಾಗಿ ಇರಿಸುವ ಕಾರ್ಯವೂ ನಡೆಯಬೇಕಾಗುತ್ತದೆ. ಇದಕ್ಕಾಗಿ ಕ್ರಮ ವಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT