ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಪಾಲಿಕೆ ಮೇಲೆ ಕಾಂಗ್ರೆಸ್‌ ಬಾವುಟ, ಬಿಜೆಪಿಗೆ ವಿರೋಧ ಪಕ್ಷದ ಸ್ಥಾನ

ಕಾಂಗ್ರೆಸ್‌ನ ಐವರು ಬಂಡಾಯಗಾರರಿಗೂ ಗೆಲುವು
Last Updated 30 ಏಪ್ರಿಲ್ 2021, 7:44 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಲಭಿಸಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್‌ ಟಿಕೆಟ್‌ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಐವರು ಕೂಡ ಪಾಲಿಕೆಯ ಮೆಟ್ಟಿಲು ಹತ್ತಿದ್ದಾರೆ.

39 ವಾರ್ಡ್‌ಗಳ ಪೈಕಿ 21 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 13 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ಮಧ್ಯಾಹ್ನದವರೆಗೂ ನಡೆದ ಮತ ಎಣಿಕೆಯ ಉದ್ದಕ್ಕೂ ಕಾಂಗ್ರೆಸ್‌ ಅಭ್ಯರ್ಥಿಗಳು ಮುನ್ನಡೆ ಸಾಧಿಸಿ ಗಮನ ಸೆಳೆದರು.

ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ನಿರಂತರ ಭಾರೀ ಪ್ರಚಾರದ ಬಳಿಕವೂ ಬಿಜೆಪಿಯು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಆಗಿಲ್ಲ.

ಶಾಸಕ ಪುತ್ರನ ಸೋಲು: ವಿಪರ್ಯಾಸವೆಂದರೆ 18ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಪುತ್ರ ಜಿ.ಶ್ರವಣಕುಮಾರ್‌ ರೆಡ್ಡಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಎಂ,ನಂದೀಶ್‌ ಎದುರು ಕೇವಲ 133 ಮತಗಳ ಅಂತರದಿಂದ ಸೋತರು. ಶಾಸಕ ರೆಡ್ಡಿ ಈ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿ ಹಗಲು–ರಾತ್ರಿ ನಿರಂತರ ಪ್ರಚಾರ ನಡೆಸಿದ್ದರು.

ಕಾಂಗ್ರೆಸ್‌ ಟಿಕೆಟ್‌ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ 3ನೇ ವಾರ್ಡಿನ ಎಂ.ಪ್ರಭಂಜನ್‌ಕುಮಾರ್‌, 15ನೇ ವಾರ್ಡಿನ ನೂರ್‌ ಮಹ್ಮದ್‌, 17ನೇ ವಾರ್ಡಿನ ಕವಿತಾ ಕೆ.ಹೊನ್ನಪ್ಪ, 32ನೇ ವಾರ್ಡಿನ ಮಂಜುಳಾ, 35ನೇ ವಾರ್ಡಿನ ವಿ.ಶ್ರೀನಿವಾಸಲು ಅತ್ಯಧಿಕ ಮತಗಳಿಂದ ಗೆದ್ದಿದ್ದಾರೆ. ಈ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ತೀವ್ರ ಹಿನ್ನಡೆ ಕಂಡಿದ್ದಾರೆ.

32ನೇ ವಾರ್ಡಿನಲ್ಲಿಕಾಂಗ್ರೆಸ್‌ ಅಭ್ಯರ್ಥಿ ಚಾಮುಂಡೇಶ್ವರಿ ಕೇವಲ 338 ಮತ ಗಳಿಸಿ ಹೀನಾಯ ಸೋಲು ಕಂಡರು. ವಾರ್ಡ್‌ 37ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾಲನ್‌ ಬಿ ಕೇವಲ 13 ಮತಗಳ ಅಂತರದಲ್ಲಿ ಗೆಲುವು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT