ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲವಾರು ಬೀಸಿದ್ದರ ಹಿಂದೆ ಜಿಹಾದಿ ಶಕ್ತಿಗಳ ಕೈವಾಡ: ಶಾಸಕ ಹರೀಶ್‌ ಪೂಂಜ ಆರೋಪ

Last Updated 14 ಅಕ್ಟೋಬರ್ 2022, 12:26 IST
ಅಕ್ಷರ ಗಾತ್ರ

ಮಂಗಳೂರು: ‘ನಾನು ಹಿಂದುತ್ವ, ಹಿಂದೂ ಕಾರ್ಯಕರ್ತರು ಹಾಗೂ ರಾಷ್ಟ್ರೀಯತೆಯ ಪರವಾಗಿ ಇರುವ ಶಾಸಕ. ಜಿಹಾದಿ ಶಕ್ತಿಗಳ ವಿರುದ್ಧ ಯಾವತ್ತೂ ಮಾತನಾಡುತ್ತೇನೆ. ಹಾಗಾಗಿ ಜಿಹಾದಿ ಶಕ್ತಿಗಳೇ ನನ್ನನ್ನು ಹಿಂಬಾಲಿಸಿ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿರುವ ಸಾಧ್ಯತೆ ಇದೆ’ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು ಕೃತ್ಯದ ಬಗ್ಗೆ ವಿವರ ನೀಡಿದರು.

‘ಬೆಂಗಳೂರಿನಿಂದ ಗುರುವಾರ ಮಂಗಳೂರಿಗೆ ಮರಳಿದ ಬಳಿಕ ಸರ್ಕೀಟ್‌ ಹೌಸ್‌ಗೆ ಬಂದು, ಅಲ್ಲಿಂದ ನಂತೂರು– ಪಡೀಲ್‌ ಮಾರ್ಗವಾಗಿ ಬೆಳ್ತಂಗಡಿಗೆ ಪ್ರಯಾಣಿಸಲು ರಾತ್ರಿ 10. 45ಕ್ಕೆ ಹೊರಟಿದ್ದೆವು. ನನ್ನ ಇನೋವಾ ಕಾರು ಹಾಗೂ ಸ್ನೇಹಿತರ ಹ್ಯುಂಡೈ ಐ 20 ಕಾರುಗಳಲ್ಲಿ ಒಟ್ಟೊಟ್ಟಿಗೆ ಹೊರಟಿದ್ದೆವು. ನನ್ನ ಇನ್ನೋವಾ ಕಾರಿನ ಬದಲು ಸ್ನೇಹಿತನ ಹ್ಯುಂಡೈ ಐ 20 ಕಾರಿನಲ್ಲಿ ನಾನಿದ್ದೆ’ ಎಂದು ಶಾಸಕರು ತಿಳಿಸಿದರು.

‘ಎಂಆರ್‌ಪಿಎಲ್ ಪೆಟ್ರೋಲ್‌ ಬಂಕ್‌ನಲ್ಲಿ ಎರಡೂ ಕಾರುಗಳಿಗೆ ಇಂಧನ ತುಂಬಿಕೊಂಡು ಅಲ್ಲಿಂದ ನಾವು ಪಡೀಲ್‌ ದಾಟಿ ಮುಂದಕ್ಕೆ ಚಲಿಸುವಾಗ ನನ್ನ ಇನೋವಾ ಕಾರನ್ನು ಸ್ಕಾರ್ಪಿಯೊ ವಾಹನವೊಂದು ಹಿಂದಿಕ್ಕಿತ್ತು. ಅದರಲ್ಲಿದ ವ್ಯಕ್ತಿಯೊಬ್ಬ ತಲವಾರಿನಿಂದ ಹೊಡೆಯಲು ಯತ್ನಿಸಿದ್ದ. ಇನ್ನೋವಾ ಕಾರಿನ ಚಾಲಕ ನನಗೆ ಕರೆ ಮಾಡಿ ವಿಷಯ ತಿಳಿಸಿದ. ನಾನು ಪ್ರಯಾಣಿಸುತ್ತಿದ್ದ ಐ–20 ಕಾರನ್ನು ಹಿಂದಕ್ಕೆ ಹಾಕಿ ಮುಂದಕ್ಕೆ ಚಲಿಸುವಂತೆ ಚಾಲಕನಿಗೆ ಸಲಹೆ ನೀಡಿದೆ. ಇನೋವಾ ಕಾರಿನ ಚಾಲಕ ನಾನು ಇದ್ದ ಕಾರನ್ನು ಹಿಂದಿಕ್ಕಿ ಮುಂದಕ್ಕೆ ಹೋದ. ಸ್ಕಾರ್ಪಿಯೊ ವಾಹನದಲ್ಲಿದ್ದ ವ್ಯಕ್ತಿ ಆ ಬಳಿಕ ನಾನು ಪ್ರಯಾಣಿಸುತ್ತಿದ್ದ ಹ್ಯುಂಡೈ ಐ 20 ವಾಹನದ ಕಿಟಕಿಯತ್ತಲೂ ತಲವಾರು ಬೀಸಿದ್ದ’ ಎಂದು ತಿಳಿಸಿದರು.

‘ಆ ವ್ಯಕ್ತಿ ಬಳಿ ಇದ್ದುದು ಹಿಡಿಕೆಯನ್ನು ಹೊಂದಿದ್ದ ತಲವಾರು. ತುದಿಯಲ್ಲಿ ಚೂಪಾಗಿ ಭಾರವಾಗಿದ್ದ ಆಯುಧವದು. ಅದರಿಂದಲೇ ಎರಡು ಸಲ ನಮ್ಮ ಕಾರಿನ ಕಿಟಕಿಯತ್ತ ತಲವಾರು ಬೀಸಿದ್ದ. ಎರಡು ಸಲವೂ ತಪ್ಪಿಸಿಕೊಂಡಿದ್ದೆವು. ಬಳಿಕ ನಾನು, ‘ನಮ್ಮ ಎರಡೂ ಕಾರುಗಳು ಅಕ್ಕ‍ಪಕ್ಕ ಚಲಿಸುವ ಮೂಲಕ ಸ್ಕಾರ್ಪಿಯೊ ವಾಹನ ಓವರ್‌ಟೇಕ್‌ ಮಾಡಲು ಅವಕಾಶ ನೀಡುವುದು ಬೇಡ’ ಎಂದು ನನ್ನ ಕಾರಿನ ಚಾಲಕನಿಗೆ ಸಲಹೆ ನೀಡಿದೆ. ಯಶಸ್ವಿನಿ ಹಾಲ್‌ ದಾಟಿದ ಬಳಿಕ ನಾವು ಅಕ್ಕ ಅಕ್ಕದಲ್ಲಿ ಸಮಾನಾಂತರದಲ್ಲಿ ಚಲಿಸಲು ಶುರು ಮಾಡಿದೆವು. ಅಷ್ಟರಲ್ಲಿ ನಾನು ಡಿವೈಎಸ್‌ಪಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಅವರು ಫರಂಗಿಪೇಟೆ ಪೊಲೀಸರಿಗೆ ಮಾಹಿತಿ ತಲುಪಿಸಿದ್ದರು. ಫರಂಗಿಪೇಟೆಯಲ್ಲಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್‌ ಅಳವಡಿಸುತ್ತಾರೆ ಎಂಬ ಕಾರಣಕ್ಕೆ ನಮ್ಮ ಎರಡೂ ವಾಹನಗಳು ರಸ್ತೆಯ ಎಡಭಾಗದ ಲೇನ್‌ನಲ್ಲೇ ಚಲಿಸಿದೆವು.ಬೇರೆ ಎರಡು ಕಾರುಗಳು ಬ್ಯಾರಿಕೇಡ್‌ ಬಳಿ ಸಾಗುವಾಗ, ನಮ್ಮನ್ನು ಹಿಂಬಾಲಿಸಿದ್ದ ಸ್ಕಾರ್ಪಿಯೊ ಕಾರು ಕೂಡಾ ವೇಗವಾಗಿ ಸಾಗಿ ತಪ್ಪಿಸಿಕೊಂಡಿತು’ ಎಂದು ಅವರು ವಿವರಿಸಿದರು.

‘ಬಂಟ್ವಾಳ ಗ್ರಾಮಾತರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸ್ಕಾರ್ಪಿಯೊದಲ್ಲಿ ನನಗೆ ಕಂಡಿದ್ದು ಒಬ್ಬ ಮಾತ್ರ. ಆತನೇ ವಾಹನ ಚಲಾಯಿಸಿ, ತಲವಾರು ಝಳಪಿಸಿದ್ದ. ಇಳಿಯಲೂ ಪ್ರಯತ್ನಿಸುತ್ತಿದ್ದ. ಒಮ್ಮೆ ಎಡಭಾದಲ್ಲಿ ಮತ್ತೊಮ್ಮೆ ಬಲಭಾಗದಲ್ಲಿ ನಮ್ಮ ಕಾರನ್ನು ಹಿಂದಿಕ್ಕಲು ಯತ್ನಿಸಿದ್ದ. ನನ್ನ ಇನೋವಾ ಕಾರಿನಲ್ಲಿ ‘ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರು’ ಎಂಬ ಫಲಕವಿದೆ. ಅದನ್ನು ನೋಡಿಕೊಂಡೇ ಆ ಕಾರನ್ನು ಹಿಂಬಾಲಿಸಿದ್ದ. ಅದರಲ್ಲಿ ನಾನು ಇಲ್ಲ ಎಂಬುದೂ ಆತನಿಗೆ ಗೊತ್ತಿತ್ತು.ಆ ಕಾರು ವೇಗವಾಗಿ ಮುಂದಕ್ಕೆ ಹೋಗಲಿ ಎಂಬ ಕಾರಣಕ್ಕೆ ಆ ಕಾರಿಗೆ ತಲವಾರು ತೋರಿಸಿದ್ದ. ಅದು ಮುಂದಕ್ಕೆ ಹೋದ ಬಳಿಕ ನಾನಿದ್ದ ಹ್ಯುಂಡೈ ಕಾರಿನ ಮೇಳೆ ದಾಳಿ ನಡೆಸಲು ಯತ್ನಿಸಿದ್ದ’ ಎಂದರು.

‘ನನ್ನ ಕಾರನ್ನು ಹಿಂಬಾಲಿಸಿದ ಸ್ಕಾರ್ಪಿಯೊ ವಾಹನ ಕೇರಳದ ನೋಂದಣಿ ಸಂಖ್ಯೆಯನ್ನು ಹೊಂದಿತ್ತು. ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇವೆ. ಆ ಕಾರಿನ ಪತ್ತೆಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ’ ಎಂದು ಶಾಸಕ ಹರೀಶ್‌ ಪೂಂಜಾ ತಿಳಿಸಿದರು.

ಹಿಂದುತ್ವಕ್ಕಾಗಿ ಇನ್ನಷ್ಟು ಹೆಚ್ಚು ಕೆಲಸ: ಪೂಂಜ

‘ಇಷ್ಟರವರೆಗೆ ನಾವು ಹಿಂದುತ್ವದ ಕೆಲಸ ಮಾಡಿಕೊಂಡು ಬಂದವರು. ಭದ್ರತೆ ಇಟ್ಟುಕೊಂಡು ಕೆಲಸ ಮಾಡಲು ಬಂದವರಲ್ಲ. ಇಂತಹ ಘಟನೆಗಳ ಬಳಿಕ ಹಿಂದುತ್ವದ ಕೆಲಸವನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತೇವೆ’ ಎಂದು ಹರೀಶ್‌ ಪೂಂಜ ಹೇಳಿದರು.

‘ನನಗೆ ಈ ರೀತಿಯ ಅನುಭವ ಇದೇ ಮೊದಲ ಸಲ ಆಗಿದೆ. ಸರ್ಕಾರ ಮತ್ತು ಗೃಹ ಇಲಾಖೆ ಯಾವ ರೀತಿ ವ್ಯವಸ್ಥೆ ಕಲ್ಪಿಸುತ್ತದೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಭದ್ರತೆ ಪಡೆಯಬೇಕೋ ಬೇಡವೋ ಎಂಬ ಬಗ್ಗೆ ಹಿರಿಯರ ಮಾರ್ಗದರ್ಶನ ಪಡೆದು ನಿರ್ಧರಿಸುತ್ತೇನೆ. ಗೃಹಸಚಿವರು ಎರಡು ಸಲ ದೂರವಾಣಿ ಕರೆ ಮಾಡಿ ವಿಚಾರಿಸಿದ್ದರು. ನನಗೆ ಅಂಗರಕ್ಷಕರನ್ನು ಒದಗಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಸೂಚಿಸಿದ್ದೇನೆ ಎಂದೂ ತಿಳಿಸಿದ್ದಾರೆ. ಈ ಕೃತ್ಯ ನಡೆಸಿದವರನ್ನು ಬಂಧಿಸುವ ಭರವಸೆಯನ್ನೂ ನೀಡಿದ್ದಾರೆ’ ಎಂದರು.

‘ಸರ್ಕಾರಕ್ಕೆ ಮುಜುಗರ ತರಲು ಮತಾಂಧ ಶಕ್ತಿಗಳಿಂದ ಯತ್ನ’

‘ಬಿಜೆಪಿ ಶಾಸಕರನ್ನೇ ಟಾರ್ಗೆಟ್‌ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಮತಾಂಧ ಶಕ್ತಿಗಳು ಪ್ರಯತ್ನಿಸಿವೆ. ಪೂಂಜ ಅವರ ಮೇಲೆ ಹಲ್ಲೆಗೆ ಯತ್ನಿಸಿದವರ ಮೂಲ ಯಾವುದು, ಇಂಥವರಿಗೆ ಆಯುಧಗಳು ಎಲ್ಲಿಂದ ಲಭಿಸುತ್ತವೆ, ಇವರ ಹಿಂದೆ ಇರುವವರು ಯಾರು ಎಂಬ ಎಲ್ಲಾ ವಿಚಾರಗಳ ತನಿಖೆ ಆಗಬೇಕು’ ಎಂದು ಶಾಸಕ ವೇದವ್ಯಾಸ ಕಾಮತ್‌ ಒತ್ತಾಯಿಸಿದರು.

‘ನಿಮ್ಮ ನಾಯಕರನ್ನೂ ಹತ್ಯೆ ಮಾಡಬಲ್ಲೆವು ಎಂಬ ಸಂದೇಶ ನೀಡಲು ಇಂಥ ಮತಾಂಧ ಶಕ್ತಿಗಳು ಪ್ರಯತ್ನಿಸುತ್ತಿವೆ. ಕೇಂದ್ರ ಸರ್ಕಾರವು ಈಗಾಗಲೇ ಹಲವು ಸಂಘಟನೆಗಳನ್ನು ನಿಷೇಧಿಸಿದೆ. ಸರ್ಕಾರ ನಿರ್ದಾಕ್ಷಿಣ್ಯವಾಗಿ ಇಂಥವರನ್ನು ಮಟ್ಟ ಹಾಕುತ್ತದೆ’ ಎಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಅವರು ತಿಳಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂಥವರ ವಿರುದ್ಧದ ಕೇಸ್‌ಗಳನ್ನು ಹಿಂತೆಗೆದುಕೊಂಡಿದ್ದೂ ಇಂಥ ಮಾನಸಿಕತೆ ಬೆಳೆಯಲು ಕಾರಣ. ಅಧಿಕಾರಕ್ಕೆ ಬಂದರೆ ಇನ್ನು ಮುಂದೆಯೂ ಅಂಥವರಿಗೆ ಬೆಂಬಲ ಕೊಡುವ ಅರ್ಥದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮಾತನಾಡುತ್ತಿದ್ದಾರೆ. ರಾಜ್ಯದ ಜನರಷ್ಟೇ ಅಲ್ಲ, ಇಡೀ ಹಿಂದೂ ಸಮಾಜ ಈಗ ಜಾಗೃತವಾಗಬೇಕಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT