ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದು ಆಳುವ ನೀತಿ ವಿರುದ್ಧ ಸಂಘಟಿತ ಹೋರಾಟ

ವಿವಿಧ ಸಂಘಟನೆಗಳ ದುಂಡು ಮೇಜಿನ ಸಭೆಯಲ್ಲಿ ಘೋಷಣೆ
Last Updated 27 ಜೂನ್ 2022, 15:45 IST
ಅಕ್ಷರ ಗಾತ್ರ

ಬೆಂಗಳೂರು: ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿಯ ವಿರುದ್ಧ ರೈತ, ಕಾರ್ಮಿಕ, ದಲಿತ, ಹಿಂದುಳಿದ ವರ್ಗಗಳು, ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಗಳು ಹಾಗೂ ಜನಪರ ರಾಜಕೀಯ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸುವ ಘೋಷಣೆಯನ್ನು ಜನ ಸಂಗ್ರಾಮ ಪರಿಷತ್‌ ನೇತೃತ್ವದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾಡಲಾಗಿದೆ.

ಯುವಜನರು, ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಗಳು, ಮಾನವ ಹಕ್ಕು ಸಂಘಟನೆಗಳು, ರಾಜಕೀಯೇತರ ಸಂಘಟನೆಗಳು, ಮಾಧ್ಯಮ ಕ್ಷೇತ್ರ, ಸಮಾಜ ಸೇವೆಯಲ್ಲಿ ನಿರತವಾಗಿರುವ ವ್ಯಕ್ತಿ ಮತ್ತು ಗುಂಪುಗಳನ್ನು ಒಗ್ಗೂಡಿಸಿಕೊಂಡು ಹೋರಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಿಟಿಜನ್‌ ಫಾರ್‌ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌. ಹಿರೇಮಠ, ಸೊಸೈಟಿ ಫಾರ್‌ ಕಮ್ಯುನಲ್‌ ಹಾರ್ಮನಿಯ ಅಧ್ಯಕ್ಷ ಪ್ರೊ. ಆನಂದ್‌ ಕುಮಾರ್‌, ಹೋರಾಟಗಾರ ದತ್ತ ದೇಸಾಯಿ, ಉತ್ತರ ಪ್ರದೇಶದ ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ಆರ್‌. ದಾರಾಪುರಿ ಮತ್ತು ಸಿಟಿಜನ್‌ ಫಾರ್‌ ಡೆಮಾಕ್ರಸಿಯ ಪ್ರಧಾನ ಕಾರ್ಯದರ್ಶಿ ಎನ್‌.ಡಿ. ಪಾಂಚೋಲಿ ಈ ‘ಬೆಂಗಳೂರು ದುಂಡುಮೇಜಿನ ಸಭೆಯ ಘೋಷಣೆ’ಗೆ ಸಹಿ ಮಾಡಿದ್ದಾರೆ.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಅಂತರರಾಷ್ಟ್ರೀಯ ಮಟ್ಟದ ಹಣಕಾಸು ಮತ್ತು ಕಾರ್ಪೋರೇಟ್‌ ಶಕ್ತಿಗಳು ಹಾಗೂ ಕೋಮುವಾದಿ ಶಕ್ತಿಗಳ ಜತೆ ಕೈಜೋಡಿಸಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ, ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ಈಗ ‘ಅಗ್ನಿವೀರರ’ ನೇಮಕಾತಿ ಹೆಸರಿನಲ್ಲಿ ಸೇನಾಪಡೆಗಳ ನೇಮಕಾತಿ ಬದಲಿಸಲು ಹೊರಟಿದೆ’ ಎಂದು ಘೋಷಣೆಯಲ್ಲಿ ಆರೋಪಿಸಲಾಗಿದೆ.

‘ಕೃಷಿ ಸಂಬಂಧಿ ಮೂರು ಕಾಯ್ದೆಗಳ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆದರೂ, ಕರ್ನಾಟಕ ಸರ್ಕಾರ ವಾಪಸ್‌ ಪಡೆದಿಲ್ಲ. ವಿಧಾನಮಂಡಲದ ಮುಂದಿನ ಅಧಿವೇಶನದಲ್ಲೇ ವಾಪಸ್‌ ಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಸಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹೆಸರಿನಲ್ಲಿ ಶಿಕ್ಷಣ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅದನ್ನು ತಡೆಯಲೇಬೇಕಿದೆ’ ಎಂಬ ನಿರ್ಣಯವನ್ನು ದುಂಡುಮೇಜಿನ ಸಭೆ ಕೈಗೊಂಡಿದೆ.

ಜಾತಿ, ಧರ್ಮಗಳ ಹೆಸರಿನಲ್ಲಿ ದಾಳಿಗಳು ನಡೆಯುತ್ತಿವೆ. ಸರ್ಕಾರವೇ ಅಂತಹ ಹಿಂಸೆಯನ್ನು ಪ್ರಚೋದಿಸುತ್ತಿದೆ. ಪೌರತ್ವ ಮತ್ತು ರಾಷ್ಟ್ರೀಯತೆಯ ವಿಚಾರದಲ್ಲಿ ಸುಳ್ಳು ಮಾಹಿತಿಯನ್ನು ಹರಿಬಿಡಲಾಗುತ್ತಿದೆ. ‘ವಸುಧೈವ ಕುಟುಂಬಕಂ’ ಎಂಬ ತತ್ವದ ಆಧಾರದಲ್ಲಿ ಜನರ ನಡುವೆ ಸೌಹಾರ್ದ, ಭ್ರಾತೃತ್ವ ಬಿತ್ತುವ ಕೆಲಸಕ್ಕೆ ಉತ್ತೇಜನ ನೀಡಬೇಕು ಎಂದು ಘೋಷಣೆಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT