ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಉದ್ಯಮಿಗಳಾಗಲು ಮತ್ತಷ್ಟು ಉತ್ತೇಜನ: ಜೇಕಬ್ ಮುಂಡಪಳ್ಳಿಲ್

ಬೆಂಗಳೂರು ತಂತ್ರಜ್ಞಾನ ಶೃಂಗ
Last Updated 18 ನವೆಂಬರ್ 2021, 14:11 IST
ಅಕ್ಷರ ಗಾತ್ರ

ಬೆಂಗಳೂರು: ಸೂಕ್ತ ಅರ್ಹತೆ ಮತ್ತು ಅವಕಾಶಗಳಿದ್ದರೂ ಮಾಹಿತಿ ಕೊರತೆಯ ಕಾರಣಕ್ಕೆ ಹೆಚ್ಚು ಸಂಖ್ಯೆಯ ಮಹಿಳೆಯರು ಹೊಸ ಉದ್ಯಮಗಳಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದು, ಅದರಿಂದ ಹೊರಬರಬೇಕು ಎಂಬ ಅಭಿಪ್ರಾಯ ಬೆಂಗಳೂರು ತಂತ್ರಜ್ಞಾನ ಶೃಂಗ-2021ರ ಎರಡನೇ ದಿನವಾದ ಗುರುವಾರ ನಡೆದ ‘ಮಹಿಳಾ ಉದ್ಯಮಶೀಲತೆಗೆ ಪೂರಕ ಸಂಪನ್ಮೂಲಗಳು, ಮಾರ್ಗ ಮತ್ತು ಬೆಂಬಲ’ ಗೋಷ್ಠಿಯಲ್ಲಿ ತಜ್ಞರಿಂದ ವ್ಯಕ್ತವಾಯಿತು.

ಮಹಿಳೆಯರು ನವೋದ್ಯಮಗಳನ್ನು ಸ್ಥಾಪಿಸಲು ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿಯೇ ಸೂಕ್ತ ಮತ್ತು ಪೂರಕ ವಾತಾವರಣವನ್ನು ಸರ್ಕಾರಗಳು ಯಶಸ್ವಿಯಾಗಿ ನಿರ್ಮಿಸಿವೆ. ಈ ನಿಟ್ಟಿನಲ್ಲಿ, ಹಿಂದೆಂದಿಗಿಂತಲೂ ಹೆಚ್ಚಾಗಿ ದೊರೆಯುತ್ತಿರುವ ಸೌಲಭ್ಯ ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ಉದ್ಯಮಿಗಳಾಗಬೇಕು ಎಂಬ ಅಭಿಪ್ರಾಯ ಪ್ರಕಟಗೊಂಡಿತು..

ಉದ್ಯಮಿಗಳಾಗಬಯಸುವ ಮಹಿಳೆಯರನ್ನು ಪ್ರೋತ್ಸಾಹಿಸುವುದನ್ನೇ ಕೇಂದ್ರವಾಗಿಟ್ಟುಕೊಂಡು, ‘ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ ಕೆಲಸ ಮಾಡುತ್ತಿದ್ದು ಸೂಕ್ತ ವೇದಿಕೆ ಕಲ್ಪಿಸಿದೆ. ಐಐಎಂನ ಭಾಗವಾಗಿರುವ ಎನ್.ಎಸ್. ರಾಘವನ್ ಸೆಂಟರ್ ಫಾರ್ ಎಂಟರ್ ಪ್ರೆನ್ಯೂರಲ್ ಲರ್ನಿಂಗ್ (ಎನ್ಎಸ್ಆರ್ ಸಿಇಎಲ್), ಹಳೆಯ ವಿದ್ಯಾರ್ಥಿಗಳು, ಜಾಗತಿಕ ಮಟ್ಟದ ವಿವಿಧ ಕಂಪನಿಗಳ ಪ್ರತಿನಿಧಿಗಳ ಮೂಲಕ ಮಹಿಳೆಯರಿಗೆ ಪೂರ್ಣ ಉಚಿತ ತರಬೇತಿ ಹಾಗೂ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಭಾಷೆಯ ತೊಡಕು ನಿವಾರಿಸಲು ಮುಂದಿನ ವರ್ಷದಿಂದ ಹಂತಹಂತವಾಗಿ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದಾಗಿ ಗೋಷ್ಠಿಯಲ್ಲಿ ಭಾಗವಹಿಸಿದ್ದ ಐಐಎಂನ ಎನ್ಎಸ್ಆರ್ ಸಿಇಎಲ್‌ನಲ್ಲಿ ನವೋನ್ವೇಷಣೆಗಳ ಸಲಹೆಗಾರರಾಗಿರುವ ಜೇಕಬ್ ಮುಂಡಪಳ್ಳಿಲ್ ಹೇಳಿದರು.

ಏಕಾಂಗಿಯಾಗಿ ನವೋದ್ಯಮಗಳಿಗೆ ಕಾಲಿಡುವ ಬದಲು ಸೂಕ್ತವಾದವರನ್ನು ಸಹ ಸಂಸ್ಥಾಪಕರಾಗಿ ಸೇರಿಸಿಕೊಳ್ಳಬೇಕು, ಸಾಧ್ಯವಾದರೆ ಮೊದಲೇ ಕಾರ್ಪೋರೇಟ್ ಕಂಪನಿಗಳ ಸಹಾಯ ಪಡೆದು ಮುಂದುವರಿಯಬೇಕು, ವಿವಿಧ ಹಂತಗಳಲ್ಲಿ ಸರಿಯಾದ ನೆಟ್‌ವರ್ಕ್‌ಗಳನ್ನು ಸೃಷ್ಟಿಸಿಕೊಳ್ಳಬೇಕು, ಹಣಕಾಸು ಲಭ್ಯತೆ ಮತ್ತು ಉದ್ಯಮದ ದಿಕ್ಕುದೆಸೆಗಳ ಕುರಿತು ಸ್ಪಷ್ಟತೆ ಹೊಂದಿರಬೇಕು, ಹಣ ಬರತೊಡಗಿದಂತೆ ಅದನ್ನು ಸೂಕ್ತ ರೀತಿಯಲ್ಲಿ ವಿಸ್ತರಣೆಗಾಗಿ ಬಳಸಿಕೊಳ್ಳಬೇಕು, ಇತರ ಮಹಿಳಾ ಉದ್ಯಮಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು ಹಾಗೂ ಮಹಿಳೆಯರು ನಡೆಸುವ ಉದ್ಯಮದಲ್ಲಿ ಹೆಚ್ಚಾಗಿ ಮಹಿಳೆಯರನ್ನೇ ತೊಡಗಿಸಿಕೊಳ್ಳಬೇಕು‌. ಎರಡು ಮತ್ತು ಮೂರನೇ ಹಂತರ ನಗರಗಳಲ್ಲಿ ಉದ್ಯಮದ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂಬ ಸಲಹೆಗಳು ಗೋಷ್ಠಿಯಲ್ಲಿ ಕೇಳಿಬಂದವು..

ರಾಜಾಸ್ಥಾನದ ಬಾನಸ್ಥಲಿ ವಿದ್ಯಾಪೀಠದ ಅಟಲ್ ಇನ್ ಕ್ಯುಬೇಷನ್ ಸೆಂಟರ್‌ನ ಮ್ಯನೇಜರ್ ಡಾ. ಲತಿಕಾ ದುರಿಯಾ, ಕಿನರ ಕ್ಯಾಪಿಟಲ್‌ನ ಸಂಪಾಕರು ಮತ್ತು ಸಿಇಒ ಹಾರ್ದಿಕಾ ಷಹಾ, ಶೀ ಕ್ಯಾಪಿಟಲ್‌ನ ಸಂಸ್ಥಾಪಕಿ ಅನಿಶಾ ಸಿಂಗ್ ಅವರು ಕೇಂದ್ರ ಸರ್ಕಾರದ ಪ್ರೋತ್ಸಾಹ, ತಮ್ಮ ಅನುಭವ ಮತ್ತು ಯಶೋಗಾಥೆಗಳನ್ನು ಹಂಚಿಕೊಂಡರು.

ಗೋಷ್ಠಿಯನ್ನು ‘ಕೆಟಲಿಸ್ಟ್ ಫಾರ್ ವುಮನ್ ಎಂಟರ್ ಪ್ರೈನರ್ಶಿಪ್’ ಸಂಸ್ಥೆಯ ಸಂಸ್ಥಾಪಕರು ಮತ್ತು ಸಿಇಒ ಸುಚೆರಿತಾ ಈಶ್ವರ್ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT