ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕ್ಕೆ ತಂತ್ರಜ್ಞರನ್ನು ಪೂರೈಸುವಷ್ಟು ಶಕ್ತವಾಗಿದೆ ಕರ್ನಾಟಕ: ತಜ್ಞರ ಅಭಿಪ್ರಾಯ

ಬೆಂಗಳೂರು ತಂತ್ರಜ್ಞಾನ ಶೃಂಗ
Last Updated 18 ನವೆಂಬರ್ 2021, 13:08 IST
ಅಕ್ಷರ ಗಾತ್ರ

ಬೆಂಗಳೂರು: ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ ಎನ್ನುವುದು ಪ್ರಚಲಿತದಲ್ಲಿರುವ ಬಹು ಬೇಡಿಕೆಯ ಅಧ್ಯಯನ ಕ್ಷೇತ್ರವಾಗಿದ್ದು, ಭವಿಷ್ಯದ ಉದ್ಯೋಗದಾತ ಎಂಬ ಅಭಿಪ್ರಾಯ 24ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಗುರುವಾರ ನಡೆದ ಗೋಷ್ಠಿಯಲ್ಲಿ ತಜ್ಞರಿಂದ ವ್ಯಕ್ತವಾಯಿತು.

‘ಡ್ರೈವಿಂಗ್‌ ನೆಕ್ಟ್‌ ವಿತ್‌ ಆರ್ಟಿಫಿಯಲ್‌ ಇಂಟೆಲಿಜೆನ್ಸ್‌ ಅಂಡ್‌ ಮಷೀನ್‌ ಲರ್ನಿಂಗ್‌’ ಕುರಿತು ನಡೆದ ಗೋಷ್ಠಿಯಲ್ಲಿ ಭಾರತವು ಈ ಕ್ಷೇತ್ರದ ಅತಿದೊಡ್ಡ ಮಾರುಕಟ್ಟೆಯಾಗಿರುವ ಜೊತೆಗೆ ಕರ್ನಾಟಕವು ಜಾಗತಿಕ ಕಂಪನಿಗಳಿಗೆ ಅಗತ್ಯವಿರುವಷ್ಟು ತಂತ್ರಜ್ಞರನ್ನು ಪೂರೈಸಲು ಸಮರ್ಥವಾಗಿದೆ ಎನ್ನಲಾಯಿತು.

ಆಟೊಮೊಬೈಲ್‌, ಸ್ಮಾರ್ಟ್‌ ಡ್ರೈವಿಂಗ್‌, ಇ-ಕಾಮರ್ಸ್‌, ಬ್ಯಾಂಕಿಂಗ್‌, ಎನರ್ಜಿ ಟ್ರಾನ್ಸ್‌ಫಾರ್ಮೇಶನ್‌, ಕ್ಲೈಮೇಟ್‌ ಫ್ರೈಂಡ್ಲಿ ಸಿಸ್ಟಮ್‌, ಪ್ಲಾಂಟ್‌ ಎಂಜಿನಿಯರಿಂಗ್‌, ರಿಮೋಟ್‌ ಮಾನಿಟರಿಂಗ್‌, ಅರ್ಲಿ ಪ್ರಿಡಿಕ್ಷನ್ಸ್‌, ಡಿಜಿಟಲ್‌ ಫಾರ್ಮಿಂಗ್‌, ಹೆಲ್ತ್ ಕೇರ್‌ ಡೇಟಾ ಅನಾಲಿಸಿಸ್‌, ಗ್ರಾಹಕ ಸೇವೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಮಷೀನ್‌ ಲರ್ನಿಂಗ್‌ಗೆ ಭಾರಿ ಬೇಡಿಕೆ ಇದ್ದು, ನೂರಾರು ಜನರಿಗೆ ಉದ್ಯೋಗ ಸಿಗಲಿದೆ. ಈ ಉದ್ದೇಶದೊಂದಿಗೆ ಭಾರತವು ಈಗಾಗಲೇ ಜರ್ಮನಿ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳೊಂದಿಗೆ ಕಲಿಕೆ ಹಾಗೂ ತಂತ್ರಜ್ಞಾನ ವಿನಿಮಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಿಂದ ಭವಿಷ್ಯದಲ್ಲಿ ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಇನ್ಫೋಸಿಸ್‌ನ ಚೀಫ್‌ ಆಪರೇಟಿಂಗ್‌ ಆಫಿಸರ್‌ ಯು.ಬಿ. ಪ್ರವೀಣ್‌ ರಾವ್‌ ಅಭಿಪ್ರಾಯಪಟ್ಟರು.

ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡೇ ನಮ್ಮ ಸಂಸ್ಥೆಯು, ಡಿಜಿಟಲ್‌ ಇನ್ನೋವೇಷನ್‌ ಸೆಂಟರ್‌ ಮೂಲಕ ದೇಶೀಯ ಹಾಗೂ ಜಾಗತಿಕ ಪಾಲುದಾರ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗಿಗಳನ್ನು ಹೊಸ ಸವಾಲುಗಳಿಗೆ ಸಜ್ಜುಗೊಳಿಸಲು ಹಾಗೂ ಅವರಲ್ಲಿ ಕೌಶಲ್ಯ ಹೆಚ್ಚಿಸಲು ಒತ್ತು ನೀಡಿದೆ. ನಾನಾ ಕಂಪನಿಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಜತೆ ಕೈಜೋಡಿಸಿ ಕೌಶಲ್ಯ ಕೊರತೆ ನಿವಾರಿಸುವತ್ತ ಹೆಜ್ಜೆ ಇರಿಸಲಾಗಿದೆ ಎಂದರು.

ತಂತ್ರಜ್ಞಾನ ವಿನಿಮಯ ವಿಚಾರದಲ್ಲಿ ಇಂಡೋ-ಜರ್ಮನ್‌ ಚೇಂಬರ್‌ ಆಫ್‌ ಕಾಮರ್ಸ್‌ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟಪ್‌ಗಳ ಜತೆ ಜರ್ಮನಿ ಕೈಜೋಡಿಸಿದೆ. ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ಬರುವ ಯೋಜನೆಗಳ ಪರಿಣಾಮಕಾರಿ ಜಾರಿಗೆ ಉಭಯ ದೇಶಗಳ ಸರ್ಕಾರಗಳ ಬೆಂಬಲ ಅಗತ್ಯವಾಗಿದೆ,ʼʼ ಎಂದು ಬೆಂಗಳೂರಿನಲ್ಲಿರುವ ಜರ್ಮನಿಯ ಕಾನ್ಸುಲೇಟ್‌ನ ಕಾನ್ಸುಲ್‌ ಜನರಲ್‌ ಅಚಿಮ್‌ ಬುರ್ಕಾಟ್‌ ಹೇಳಿದರು.

ಬೆಂಗಳೂರಿನಲ್ಲಿ ನೂತನ ಕಚೇರಿ: ಆಸ್ಟ್ರೇಲಿಯಾದಲ್ಲಿ ಮಷೀನ್‌ ಲರ್ನಿಂಗ್‌ಗೆ ಭಾರಿ ಬೇಡಿಕೆ ಇದ್ದು, ಇಲ್ಲಿನ ಕಂಪನಿಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು ಪಾಲುದಾರಿಕೆಯೊಂದಿಗೆ ಕೈಜೋಡಿಸಲು ಮುಂದೆ ಬಂದರೆ ತಮ್ಮ ಕಂಪನಿ ಎಲ್ಲ ರೀತಿಯ ನೆರವು ನೀಡಲಿದೆ. ಬಂಡವಾಳ ಹೂಡಿಕೆಯೊಂದಿಗೆ ಉತ್ತಮ ಆದಾಯ ಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದು ವರ್ಚ್ಯುಯಲ್ ಆಗಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಎನ್‌ಆರ್‌ಡಬ್ಲ್ಯೂ ಗ್ಲೋಬಲ್‌ ಬ್ಯುಸಿನೆಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫಿಲಿಕ್ಸ್‌ ನಿಯೊಗ್ರಾಟ್‌ ಗೋಷ್ಠಿಯಲ್ಲಿಯೇ ಭಾರತದ ಟೆಕ್‌ ದಿಗ್ಗಜರಿಗೆ ಆಹ್ವಾನ ನೀಡಿದರು.

ಈ ಕಂಪನಿಯು ಇತ್ತೀಚಿನ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನೂತನ ಕಚೇರಿ ತೆರೆದಿದ್ದು, ಅದರ ಮುಖ್ಯ ಪ್ರತಿನಿಧಿ ಅಂಬಿಕಾ ಬನೋತ್ರಾ, ಕಂಪನಿಯು ಮುಂದಿನ ದಿನಗಳಲ್ಲಿ ಬ್ಯುಸಿನೆಸ್‌ ಮಾಡ್ಯುಲ್‌ಗಳನ್ನು ಅನಾವರಣಗೊಳಿಸಲಿದೆ ಎಂದರು.

ಗೋಷ್ಠಿಯಲ್ಲಿ ಜರ್ಮನಿಯ ಇಂಟೆಲಿಜೆಂಟ್‌ ಟೆಕ್ನಿಕಲ್‌ ಸಿಸ್ಟಮ್ಸ್‌ ಒಎಸ್‌ಟಿ ವೆಸ್ಟ್‌ಫ್ಯಾಲೆನ್‌ ಲಿಪ್ಪೆ ಕಂಪನಿಯ ಸ್ಟ್ರ್ಯಾಟಜಿ ಹಾಗೂ ಆರ್‌ ಅಂಡ್‌ ಡಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಡಾ. ರೊಮನ್‌ ಡ್ಯುಮಿಟ್ರಿಸ್ಕೂ ಸೇರಿ ಹಲವರು ಪಾಲ್ಗೊಂಡಿದ್ದರು.

ಇದನ್ನೂ ಓದಿ... ಕ್ಯಾನ್ಸರ್‌ ರೋಗ ಪತ್ತೆಗೆ ಡಿಜಿಟಲ್‌ ಇಮೇಜಿಂಗ್‌ ವರದಾನ: ಗ್ರೇಗ್‌ ಥಾಮ್ಸನ್‌

ಏನಿದು ಮಷೀನ್‌ ಲರ್ನಿಂಗ್‌ ?
ಮಷೀನ್‌ ಲರ್ನಿಂಗ್‌ ಎಂಬುದು ಕೃತಕ ಬುದ್ಧಿಮತ್ತೆಯ ಒಂದು ಮೂಲ ಅಂಶ. ಗಣಕಯಂತ್ರ ಅಥವಾ ಎಲೆಕ್ಟ್ರಾನಿಕ್‌ ಸಾಧನ ತನಗೆ ತಾನೇ ಕಲಿತುಕೊಳ್ಳುವಂತೆ ಅದನ್ನು ಯೋಜಿಸಲಾಗುತ್ತದೆ. ಮೂಲದಲ್ಲಿ ನೋಡುವುದಾದರೆ ಇದೊಂದು ಬಿಗ್‌ ಡೇಟಾಗಳ ವಿಶ್ಲೇಷಣೆ. ಮಾಹಿತಿಯನ್ನು ತನಗೆ ತಾನೇ ತೆಗೆದುಕೊಂಡು ಪ್ರೋಗ್ರಾಮ್‌ಗಳನ್ನು ರೂಪಿಸಿಕೊಳ್ಳುವುದಕ್ಕೆ ಬಳಕೆಯಾಗುತ್ತದೆ. ಗೂಗಲ್‌, ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಹೀಗೆ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಗ್ರಾಹಕರ ಖರೀದಿ ಚರಿತ್ರೆಯ ಅಂಕಿ-ಅಂಶ ಮತ್ತು ದಾಖಲೆ ಸಂಗ್ರಹಿಸಿಕೊಂಡು ನಿಮಗೆ ಏನು ಬೇಕು ಎಂಬುದನ್ನು ಊಹಿಸಿ, ನಿಮ್ಮ ಮೇಲ್‌ಗಳಿಗೆ ನೋಟಿಫಿಕೇಷನ್‌ಗಳನ್ನು ರವಾನಿಸುತ್ತದೆ. ಇದೆಲ್ಲವೂ ಮಷೀನ್‌ ಲರ್ನಿಂಗ್‌ ಚಾಕಚಕ್ಯತೆಯಾಗಿದೆ. ಇನ್ನು ಡ್ರೈವರ್‌ ಲೆಸ್‌ ಕಾರಿನ ಚಾಲನೆಯೂ ಇದಕ್ಕೊಂದು ಉದಾಹರಣೆಯಾಗಿದೆ. ನೇರವಾದ ರಸ್ತೆ ಎಲ್ಲಿದೆ? ತಿರುವು ಬಂದರೆ ಹೇಗೆ ತೆಗೆದುಕೊಳ್ಳಬೇಕು? ಹಂಪ್ ಬಂದರೆ, ಟ್ರಾಫಿಕ್‌ನಲ್ಲಿ ಹೇಗೆ ವಾಹನದ ವೇಗ ನಿಧಾನಗೊಳಿಸಬೇಕು? ಎಲ್ಲದರ ಹಿಂದೆಯೂ ಸೆನ್ಸಾರ್‌ ಹಾಗೂ ಮಷೀನ್‌ ಲರ್ನಿಂಗ್‌ ಕೆಲಸ ಮಾಡುತ್ತಿರುತ್ತದೆ.

ಫಿಲಿಕ್ಸ್‌ ನಿಯೊಗ್ರಾಟ್‌, ಎನ್‌ಆರ್‌ಡಬ್ಲ್ಯೂ ಗ್ಲೋಬಲ್‌ ಬ್ಯುಸಿನೆಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಫಿಲಿಕ್ಸ್‌ ನಿಯೊಗ್ರಾಟ್‌, ಎನ್‌ಆರ್‌ಡಬ್ಲ್ಯೂ ಗ್ಲೋಬಲ್‌ ಬ್ಯುಸಿನೆಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT