ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆ ಪ್ರಕರಣ: ಭರವಸೆಯಲ್ಲೇ ಉಳಿದ ರಕ್ಷಣೆ ಎಂದು ಶಾಸಕ ಅಖಂಡ ಅಳಲು

ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಠಾಣೆಗಳ ವ್ಯಾಪ್ತಿಯ ಪ್ರಕರಣ
Last Updated 15 ಆಗಸ್ಟ್ 2020, 18:49 IST
ಅಕ್ಷರ ಗಾತ್ರ

ಬೆಂಗಳೂರು: ‘ರಕ್ಷಣೆ ಕೊಡುವುದಾಗಿ ಹೇಳಿದ್ದ ಸರ್ಕಾರ ಈವರೆಗೂ ಯಾವುದೇ ಭದ್ರತೆ ಒದಗಿಸಲಿಲ್ಲ’ ಎಂದು ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ಶಾಸಕರ ಜತೆಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನನಗೆ, ಕುಟುಂಬದವರಿಗೆ ಪ್ರಾಣ ಭಯ ಇದೆ. ಘಟನೆ ನಡೆದ ಮಾರನೇ ದಿನ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆ ಮಾಡಿದ್ದರು. ಕಂದಾಯ ಸಚಿವ ಅಶೋಕ ಅವರು ಮಧ್ಯರಾತ್ರಿಯೇ ಭೇಟಿ ನೀಡಿ ಧೈರ್ಯ ಹೇಳಿದ್ದರು. ಪೊಲೀಸ್ ಕಮಿಷನರ್‌ ಭೇಟಿ ಮಾಡಿ ರಕ್ಷಣೆ ನೀಡುವಂತೆ ಕೋರಿದ್ದೆ. ರಕ್ಷಣೆ ಕೊಡುವುದಾಗಿ ನೀಡಿದ ಭರವಸೆ ಈಗಲೂ ಈಡೇರಿಲ್ಲ. ಗನ್‌ಮ್ಯಾನ್‌ ಬಿಟ್ಟರೆ ಯಾರೂ ಜತೆಗಿಲ್ಲ’ ಎಂದರು.

‘ನಾನು ಏನು ತಪ್ಪು ಮಾಡಿದೆ ಎಂದು ನನ್ನ ಮನೆಗೆ ಬೆಂಕಿ ಹಚ್ಚಿದರು ಎನ್ನುವುದು ನನಗೆ ಗೊತ್ತಾಗಬೇಕು. ನಮ್ಮ ಮನೆಯಲ್ಲಿ ಅಂದು ಯಾರೊಬ್ಬರು ಇದ್ದಿದ್ದರೂ ನಾವು ಅನಾಥರಾಗುತ್ತಿದ್ದೆವು. ಘಟನೆ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿ. ನಮ್ಮ ಪಕ್ಷದವರು ನಮ್ಮ ರಕ್ಷಣೆಗೆ ನಿಲ್ಲಬೇಕು’ ಎಂದರು.

‘ನಮ್ಮ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಹೀಗೆ ಎಲ್ಲ ನಾಯಕರೂ ಕರೆ ಮಾಡಿ ಧೈರ್ಯ ತುಂಬಿದ್ದಾರೆ’ ಎಂದೂ ಹೇಳಿದರು.

‘ನಿಷೇಧಕ್ಕೆ ನಿರ್ಧರಿಸಿಲ್ಲ’
ತುಮಕೂರು: ರಾಜ್ಯದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ಸರ್ಕಾರ ನಿರ್ಧಾರಕ್ಕೆ ಬಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

‘ತನಿಖೆ ಆಗುವವರೆಗೆ ಮತ್ತು ಸಾಕ್ಷ್ಯಧಾರಗಳು ಸಿಗುವವರೆಗೆ ಸಂಘಟನೆಗಳನ್ನು ನಿಷೇಧಿಸುವುದು ಕಷ್ಟ’ ಎಂದರು.

ನಿರ್ಲಕ್ಷ್ಯದ ಪರಮಾವಧಿ: ಡಿಕೆಶಿ
ಬೆಂಗಳೂರು: ಶಾಸಕರ ಕುಟುಂಬ ಆತಂಕದಲ್ಲೇ ಕಾಲಕಳೆಯುತ್ತಿದ್ದು, ಈವರೆಗೆ ಕೇವಲ ಹೇಳಿಕೆಗಳಲ್ಲೇ ಕಾಲ ಕಳೆಯುತ್ತಿರುವ ಸರ್ಕಾರ, ಅಖಂಡ ಕುಟುಂಬಕ್ಕೆ ರಕ್ಷಣೆ ಕೊಡದೇ ಇರುವುದು ನಿರ್ಲಕ್ಷ್ಯದ ಪರಮಾವಧಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಚಿವರು, ಅಧಿಕಾರಿಗಳು ನೆಪಮಾತ್ರಕ್ಕೆ ಭೇಟಿ ನೀಡಿ ಅನವಶ್ಯಕ ಹೇಳಿಕೆ ನೀಡುತ್ತಿದ್ದಾರೆ. ಶಾಸಕರೊಬ್ಬರಿಗೆ ಭದ್ರತೆ ಒದಗಿಸಲು ಸಾಧ್ಯವಾಗದ ಸರ್ಕಾರ ಜನರಿಗೆ ಯಾವ ರೀತಿ ರಕ್ಷಣೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಕೂಡಲೇ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಹೈಕೋರ್ಟ್‌ ನ್ಯಾಯಮೂರ್ತಿಯಿಂದ ತನಿಖೆ ನಡೆಸಿ’
‘ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನಡೆಸಬೇಕು’ ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿ ಅಧ್ಯಕ್ಷ, ಶಾಸಕ ಜಿ. ಪರಮೇಶ್ವರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಇದುವರೆಗೆ 400 ಜನರನ್ನು ಬಂಧಿಸಿದ್ದಾರೆ. 10–12 ವರ್ಷದ ಹುಡುಗರು ಸೇರಿದಂತೆ ಘಟನೆಗೆ ಸಂಬಂಧಪಡದವರನ್ನೂ ಬಂಧಿಸಿದ್ದಾರೆ‌. ಕೆ.ಜೆ. ಜಾರ್ಜ್ ಅವರ ಕ್ಷೇತ್ರದ ಮೌಲ್ವಿಯೊಬ್ಬರು ಮಸೀದಿಗೆ ಪ್ರಾರ್ಥನೆ ಮಾಡಲು ಬಂದಿದ್ದರು. ಆಗ ಅವರನ್ನೂ ಬಂಧಿಸಲಾಗಿದೆ. ಈಗ ಅಲ್ಲಿನ ಜನ ಭಯಬೀತರಾಗಿದ್ದಾರೆ’ ಎಂದರು.

‘ಘಟನೆ ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಇದೆ ಎನ್ನಲಾಗುತ್ತಿದೆ. ನಮಗೂ ಸಾಕಷ್ಟು ಸತ್ಯ ಸಂಗತಿ ಗೊತ್ತಾಗಿದೆ. ಈಗ ಅದನ್ನು ಬಹಿರಂಗಪಡಿಸಲ್ಲ. ವರದಿ ಕೊಡುವಾಗ ಅದನ್ನೆಲ್ಲಾ ಉಲ್ಲೇಖಿಸುತ್ತೇನೆ’ ಎಂದರು.

‘ದಲಿತ ಶಾಸಕರಿಗೆ ರಕ್ಷಣೆ ಸರ್ಕಾರ ಕೊಡಬೇಕು. ನಾವೂ ಕೂಡ ಪಕ್ಷವಾಗಿ ಅವರಿಗೆ ರಕ್ಷಣೆ ಕೊಡುತ್ತೇವೆ. ಘಟನೆ ನಡೆದಾಗ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು. ಠಾಣೆ ಸುಡುತ್ತಿದ್ದರೆ ತಡೆಯಲು ತಂಡ ಕಳಿಸಲು ಸಾಧ್ಯವಾಗಲಿಲ್ಲ ಎಂದರೆ ಇದು ಪೊಲೀಸ್ ಇಲಾಖೆ, ಗೃಹ ಇಲಾಖೆಯ ವೈಫಲ್ಯ’ ಎಂದರು.

’ಗೋಲಿಬಾರ್‌ನಿಂದ ಮೃತಪಟ್ಟವರ ಮನೆಗೆ ತೆರಳಿದ್ದಶಾಸಕ ಜಮೀರ್ ಅಹ್ಮದ್ ಮಾನವೀಯತೆ ದೃಷ್ಟಿಯಿಂದ ಪರಿಹಾರ ಕೊಟ್ಟಿದ್ದಾರೆ. ಸತ್ತವರು ಅಮಾಯಕರು ಎಂದು ಜಮೀರ್ ಹೇಳಿಕೆ ನೀಡಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಅದು ಪಕ್ಷದ ಅಭಿಪ್ರಾಯವಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಯಾರು ಅಮಾಯಕರು, ಮುಗ್ಧರು ಎಂಬುದು ಖಚಿತವಾಗುವುದಿಲ್ಲ‌’ ಎಂದರು.

ಎಸ್‌ಡಿಪಿಐ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ ಅವರು. ‘ಯಾವುದೇ ಸಂಘಟನೆ ಯನ್ನು ನಿಷೇಧಿಸಬೇಕಾದರೆ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಈ ಪ್ರಕ್ರಿಯೆ ಆರಂಭಿಸಿದ್ದೆವು. ಈಗ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಆ ಪ್ರಕ್ರಿಯೆ ಮುಂದುವರಿಸಿ, ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿದ್ದರೆ ನಿಷೇಧಿಸಲಿ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಕೆ.ಜೆ. ಜಾರ್ಜ್‌, ಸಲೀಂ ಅಹಮದ್‌, ನಜೀರ್ ಅಹಮದ್‌, ನಾರಾಯಣಸ್ವಾಮಿ ಇದ್ದರು.

‘ನೋಟಿಸ್ ಕೊಟ್ಟು ಬೆದರಿಸಲು ಬಿಜೆಪಿ ಯತ್ನ’
‘ನಗರದಲ್ಲಿ ನಡೆದ ಗಲಭೆ ನೆಪದಲ್ಲಿ ನಮ್ಮ ಪಕ್ಷದ ಪಾಲಿಕೆ ಸದಸ್ಯರಿಗೆ ನೋಟಿಸ್ ಕೊಟ್ಟು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇಡೀ ಘಟನೆಗೆ ಬಿಜೆಪಿ ಕಾರ್ಯಕರ್ತರು ಕಾರಣ. ತಪ್ಪು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರಕರಣ ನಿರ್ವಹಿಸುವಲ್ಲಿ ಗೃಹ ಇಲಾಖೆ ವಿಫಲವಾಗಿದೆ. ನಮ್ಮ ಶಾಸಕ, ಮುಖಂಡರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗಿದೆ’ ಎಂದು ದೂರಿದರು.

‘ಬಿಜೆಪಿಯ ಒಳತಂತ್ರದಿಂದ ಈ ಘಟನೆ ನಡೆದಿದೆ. ಇದೇ ರೀತಿ ಹೇಳಿಕೆ ನೀಡುವಂತೆ ನಮ್ಮ ಶಾಸಕರಿಗೆ ಬಲವಂತ ಮಾಡುತ್ತಿದ್ದಾರೆ’ ಎಂದು ದೂರಿದರು.

ವಿಎಚ್‌ಪಿಯ ಎಲ್ಲ ಪ್ರಕರಣ ತೆಗೆದು ಹಾಕುತ್ತೇನೆ ಎಂದಿಲ್ಲ:ಬಸವರಾಜ ಬೊಮ್ಮಾಯಿ
ಹಾವೇರಿ: ‘ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರ ಮೇಲಿನ ಎಲ್ಲ ಪ್ರಕರಣಗಳನ್ನು ತೆಗೆದು ಹಾಕುತ್ತೇನೆ ಎಂದು ಹೇಳಿಲ್ಲ. ವಿಎಚ್‌ಪಿ ಮುಖಂಡರು ಮನವಿ ಪತ್ರ ಕೊಟ್ಟು ಅನ್ಯಾಯ ಸರಿಪಡಿಸಿ ಎಂದು ಕೇಳಿದ್ದಾರೆ. ಯಾರಿಗೆ ಅನ್ಯಾಯವಾದರೂ ಸರಿಪಡಿಸುವ ಕೆಲಸ ನನ್ನದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರವೂ ಕೆಲವು ಸಂಘಟನೆಗಳ ಮೇಲಿನ ಪ್ರಕರಣಗಳನ್ನು ಹಿಂಪಡೆದಿದೆ. ನಾವೂ ಕಾನೂನು ಪ್ರಕಾರವೇ ನ್ಯಾಯ ಒದಗಿಸುತ್ತೇವೆ ಎಂದರು.

ಹೆದರಿಸುವ ಪ್ರಶ್ನೆಯೇ ಇಲ್ಲ: ‘ಡಿ.ಕೆ. ಶಿವಕುಮಾರ್‌ ಅವರಿಗೆ ಈ ನೆಲದ ಕಾನೂನು ಗೊತ್ತಿದೆ ಎಂದು ಭಾವಿಸುತ್ತೇನೆ. ಕಾನೂನು ಪ್ರಕಾರ ಗಲಭೆಯಲ್ಲಿ ಪಾಲ್ಗೊಂಡವರಿಗೆ ನೋಟಿಸ್‌ ಕೊಟ್ಟು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ನೋಟಿಸ್‌ ಕೊಟ್ಟು ಯಾರನ್ನೂ ಹೆದರಿಸುವ ಪ್ರಶ್ನೆಯೇ ಇಲ್ಲ’ ಎಂದುಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT