ಭಾನುವಾರ, ಸೆಪ್ಟೆಂಬರ್ 25, 2022
29 °C

‘ಭಾರತ ಒಗ್ಗೂಡಿಸಿ ಯಾತ್ರೆ’ಗೆ ಪ್ರಿಯಾಂಕಾ ಗಾಂಧಿ– ಇನ್ನೂ ಖಚಿತ ಆಗಿಲ್ಲ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಕ್ಷ ಹಮ್ಮಿಕೊಂಡಿರುವ ಭಾರತ ಒಗ್ಗೂಡಿಸಿ ಯಾತ್ರೆ ರಾಜ್ಯದಲ್ಲಿ ಸಾಗುವ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ, ಈ ಬಗ್ಗೆ ಇನ್ನೂ ಖಚಿತ ಆಗಿಲ್ಲ. ಬಹುತೇಕ ರಾಷ್ಟ್ರೀಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಯಾತ್ರೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಕೆಲವು ಸಮಿತಿಗಳನ್ನು ರಚಿಸಲಾಗಿದೆ. ಬಳ್ಳಾರಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಜವಾಬ್ದಾರಿಯನ್ನು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ನೇತೃತ್ವದ ಸಮಿತಿಗೆ ವಹಿಸಲಾಗಿದೆ’ ಎಂದರು.

‘ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಲು ಪಕ್ಷದ ನಾಯಕರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಮಹಿಳೆಯರ ಸಂಘಟನೆಗೆ ಐದಾರು ತಂಡಗಳನ್ನೂ ರಚಿಸಲಾಗಿದೆ. ಉಳಿದ ಜವಾಬ್ದಾರಿಗಳನ್ನು ಬೇರೆ ಶಾಸಕರುಗಳಿಗೆ ನೀಡಲಾಗುವುದು. ಪದಾಧಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಘಟನೆ ಮಾಡಲಿದ್ದಾರೆ’ ಎಂದರು.

‘ಕೆಲವರಿಗೆ ಅವರ ಕ್ಷೇತ್ರದಲ್ಲಿನ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ನನ್ನ ವೇಗಕ್ಕೆ ಪೂರಕವಾಗಿ ಅವರಿಗೆ ಕೆಲಸ ಮಾಡಲು ಸಾಧ್ಯ ಆಗದೇ ಇರಬಹುದು. ಎಲ್ಲವನ್ನೂ ನನ್ನಿಂದಲೇ ಮಾಡಲು ಆಗುವುದಿಲ್ಲ. ನಮ್ಮ ನಾಯಕರು ಅವರವರ ಕೆಲಸ ಮಾಡುತ್ತಿದ್ದಾರೆ. ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಕ್ಕೂ ಹೋಗಬೇಕು, ಪ್ರಧಾನ ಕಾರ್ಯದರ್ಶಿಗಳು ಪ್ರತಿ ಪಂಚಾಯಿತಿ ಹೋಗುವ ಜವಾಬ್ದಾರಿ ನೀಡಿದ್ದೇವೆ. ಆ ಪ್ರಕಾರ ಅವರು ಸಂಘಟನೆ ಮಾಡಬೇಕು. ಸಂಘಟನೆ ಇಲ್ಲದೇ ಯಶಸ್ಸು ಸಿಗುವುದಿಲ್ಲ’ ಎಂದರು.

ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡುವ ವೇಳೆ ಬೇರೆಯವರು ಸಹಕಾರ ನೀಡುತ್ತಿಲ್ಲ ಎಂದು ಭಾವನೆ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ‘ನನಗೆ ಅಸಹಕಾರದ ನೋವಿಲ್ಲ. ಸರ್ಕಾರ ಅಧಿವೇಶನ ಕರೆದಾಗ ಕೇವಲ ವಿರೋಧ ಪಕ್ಷದ ನಾಯಕರೇ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಅವರಿಗೆ ನಾನು ಸೇರಿದಂತೆ 69 ಶಾಸಕರ ಸಹಕಾರ ಇರಬೇಕು’ ಎಂದರು.

‘ಇನ್ನು ಸರ್ಕಾರದ ಪರ 100ಕ್ಕೂ ಹೆಚ್ಚು ಶಾಸಕರಿದ್ದರೂ ಸಚಿವರುಗಳು ಅಧಿವೇಶನಕ್ಕೆ ಬರುತ್ತಿಲ್ಲ. ಅವರು ಸರ್ಕಾರದ ಸಾಧನೆ ಕಾರ್ಯಕ್ರಮ ಮಾಡಿದಾಗ ಎಷ್ಟು ಜನ ಸಚಿವರು ಹೋಗಿದ್ದರು? ಏನಾಯ್ತು? ಎಷ್ಟು ಜನ ಇದ್ದರು. ಯಡಿಯೂರಪ್ಪ ಅವರ ಭಾಷಣ ಮುಗಿದ ನಂತರ ಎಲ್ಲರೂ ಖಾಲಿ ಆದರು. ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅದನ್ನು ಅಸಹಕಾರ ಚಳವಳಿ ಎನ್ನುತ್ತೀರಾ‘ ಎಂದು ಮರುಪ್ರಶ್ನೆ ಕೇಳಿದರು.

‘ನಾನು ನಮ್ಮ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿ ತಿಳಿಸಿದ್ದೇನೆ ಅಷ್ಟೇ. ನಮ್ಮ ಶಾಸಕರುಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಗುರಿ ನೀಡಿದ್ದಾರೆ. ಶಾಸಕರು ಎಂದರೆ ಕೇವಲ ಮದುವೆ ಸಮಾರಂಭ, ಟೇಪ್ ಕಟ್ ಕಾರ್ಯಕ್ರಮಕ್ಕೆ ಹೋಗುವುದಲ್ಲ. ಮನೆ ಮನೆಗೆ ಹೋಗಿ ಬೂತ್ ಯಾತ್ರೆ ಮಾಡಬೇಕು ಎಂದು ಬಯಸುತ್ತೇನೆ. ಅವರು ಮೊದಲು ತಮ್ಮ ಹೊಲ ಚೆನ್ನಾಗಿ ಬೇಸಾಯ ಮಾಡಬೇಕು. ನಂತರ ಬಿತ್ತನೆ ಮಾಡಬೇಕು ಎಂದು ಹೇಳಿದ್ದೇನೆ’ ಎಂದು ತಿಳಿಸಿದರು.

ಇ.ಡಿ. ವಿಚಾರಣೆಗೆ ಹಾಜರಾಗುತ್ತೀರಾ ಎಂದು ಕೇಳಿದಾಗ, ‘ಮೈಸೂರು ಪ್ರವಾಸ ಮುಗಿಸಿದ ಬಳಿಕ ದೆಹಲಿಗೆ ಹೋಗಿ ಇಡಿ ತನಿಖೆ ಎದುರಿಸುತ್ತೇನೆ. ಅವರು ಯಾವ ಕಾರಣಕ್ಕೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಅಲ್ಲಿಗೆ ಹೋಗಿ ವಿಚಾರ ತಿಳಿಯುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರ, ನಾನು ಅಕ್ರಮವಾಗಿ ಆಸ್ತಿ ಗಳಿಸಿದ್ದೇನೆಂದು ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದೇನೆ. ಮೊದಲ ಬಾರಿಗೆ ಇಡಿ ನೋಟಿಸ್ ಬಂದಿದೆ. ಅವರ ಬಳಿ ಎಲ್ಲ ಮಾಹಿತಿ ಇದೆ. ಆದರೂ ಹೊಸತಾಗಿ ಯಾಕೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುತ್ತೇನೆ' ಎಂದರು.

ಅಧಿವೇಶನದ ನಡೆಯುತ್ತಿರುವುದರಿಂದ ಹಾಜರಾತಿಗೆ ವಿನಾಯಿತಿ ಕೇಳಬಹುದಲ್ಲವೇ ಎಂದಾಗ, ‘ಅಧಿವೇಶನ ಕಾರಣದಿಂದ ವಿಚಾರಣೆಯಿಂದ ವಿನಾಯಿತಿ ಕೇಳಿದರೆ, ನಾನು ಪಲಾಯನ ಮಾಡಿದಂತೆ ಆಗುತ್ತದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ನಾನು ಹೋಗುತ್ತೇನೆ’ ಎಂದರು.

‘ಭಾರತ್‌ ಒಗ್ಗೂಡಿಸಿ ಯಾತ್ರೆ’– ಯಾರಿಗೆ, ಯಾವ ಹೊಣೆ

ಪ್ರಚಾರ– ರಾಮಲಿಂಗಾರೆಡ್ಡಿ

ಸಂಚಾರ ವ್ಯವಸ್ಥೆ– ಎಚ್‌.ಎಂ. ರೇವಣ್ಣ

ಪ್ರತಿನಿತ್ಯದ ಸಭೆ– ಕೃಷ್ಣಬೈರೇಗೌಡ

‌ವಾಸ್ತವ್ಯ– ದಿನೇಶ್ ಗುಂಡೂರಾವ್

ಮೈಸೂರು, ಚಾಮರಾಜನಗರ ಭಾಗದ ಉಸ್ತುವಾರಿ– ಆರ್‌. ಧ್ರುವನಾರಾಯಣ

ಮೈಸೂರು ನಗರದ ಉಸ್ತುವಾರಿ– ಎಚ್‌.ಸಿ. ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ

ಮಂಡ್ಯ ಭಾಗದ ಉಸ್ತುವಾರಿ– ಚಲುವರಾಯಸ್ವಾಮಿ

ತುಮಕೂರು ಭಾಗ– ಜಿ. ಪರಮೇಶ್ವರ

ಚಳ್ಳಕೆರೆ ಭಾಗ– ಸಲೀಂ ಅಹ್ಮದ್

ರಾಯಚೂರು– ಈಶ್ವರ್ ಖಂಡ್ರೆ

ಗಾಂಧಿ ಜಯಂತಿ, ಸಾಂಸ್ಕೃತಿಕ ಕಾರ್ಯಕ್ರಮ– ಬಿ.ಎಲ್. ಶಂಕರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು