ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆಡಳಿತ ಅಂತ್ಯಕ್ಕೆ ಭಾರತ್ ಜೋಡೊ ಯಾತ್ರೆ ಅಡಿಗಲ್ಲು

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅಭಿಮತ
Last Updated 27 ಸೆಪ್ಟೆಂಬರ್ 2022, 16:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಆಡಳಿತವನ್ನು ಅಂತ್ಯಗೊಳಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಭಾರತ್‌ ಜೋಡೊ ಯಾತ್ರೆ ಅಡಿಗಲ್ಲು ಆಗಲಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅಭಿಪ್ರಾಯಪಟ್ಟರು.

ಇಲ್ಲಿನ ತಿರುಮಲಾ ಕಲ್ಯಾಣ ಮಂಪಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ್‌ ಜೋಡೊ ಯಾತ್ರೆಯ ದಾವಣಗೆರೆ–ಚಿತ್ರದುರ್ಗ ಜಿಲ್ಲಾ ಉಸ್ತುವಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಎಂದರೆ ಬೇಚೋ ರೋಜ್‌ಗಾರ್‌ ಪಾರ್ಟಿ. ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಇರುವ ಪಕ್ಷ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಲಂಚ ಇಲ್ಲದೇ ಕೆಲಸ ನಡೆಯುವುದಿಲ್ಲ. ಬಿಜೆಪಿ ಕಾರ್ಯಕರ್ತರಿಂದಲೂ ಶೇ 40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ. ಮಕ್ಕಳಿಗೆ ನೀಡುವ ಮೊಟ್ಟೆ, ಬಟ್ಟೆ, ಪುಸ್ತಕದಲ್ಲೂ ಸಚಿವರೊಬ್ಬರು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಮಠಗಳಿಂದಲೂ ಶೇ 30ರಷ್ಟು ಲಂಚ ಪಡೆದಿರುವ ಬಗ್ಗೆ ವರದಿಗಳಾಗಿವೆ. ಕೆಪಿಎಸ್‌ಸಿ ಹಗರಣ, ಪಿಎಸ್‌ಐ ನೇಮಕಾತಿ ಹಗರಣದಿಂದ ಯುವಸಮೂಹ ಬೇಸತ್ತು ಹೋಗಿದೆ. ₹ 60 ಲಕ್ಷಕ್ಕೆ ಪಿಎಸ್‌ಐ ಹುದ್ದೆಗಳು ಹರಾಜಾಗಿವೆ. ಯುವ ಸಮೂಹದ ಭವಿಷ್ಯವೂ ಹರಾಜಾಗುತ್ತಿದೆ. ನಿರುದ್ಯೋಗದ ಸಮಸ್ಯೆ ಯುವಕರನ್ನು ಕಂಗೆಡಿಸಿದೆ. ಸರ್ಕಾರ ನಡೆಸುವ ಬದಲು ಕಾಲಹರಣ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಡುಗೆ ಮನೆಯಲ್ಲಿ ಮಹಿಳೆಯರು ನಿತ್ಯ ಆತಂಕಗೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅವರು ಕೈಸುಟ್ಟುಕೊಳ್ಳುತ್ತಿದ್ದಾರೆ. ಅಕ್ಕಿ, ಬೇಳೆ, ಸಿಲಿಂಡರ್‌, ತರಕಾರಿ ದರ ಗಗನಕ್ಕೆ ಏರಿದೆ. ಬೆಲೆ ಏರಿಕೆ ಎಂಬುದು ಹಿಂದೂ, ಮುಸ್ಲಿಂ, ಸಿಕ್‌ ಎಲ್ಲರಿಗೂ ಒಂದೇ. ಬೆಲೆ ಏರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಹೊಣೆ’ ಎಂದು ಕಿಡಿಕಾರಿದರು.

‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,600 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇಶದ ಎಲ್ಲ ವರ್ಗದ ಜನರ ಕಷ್ಟ ಸುಖಗಳನ್ನು ಆಲಿಸುವ ಮೂಲಕ ಅವರಿಗೆ ಧ್ವನಿಯಾಗುವ ಕೆಲಸವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ. ಬಡವರು, ದಲಿತರು, ರೈತರು ಎಲ್ಲ ವರ್ಗದ ಜನರು ಯಾತ್ರೆಗೆ ಕೈಜೋಡಿಸಬೇಕು. ಪಕ್ಷದ ಕಾರ್ಯಕರ್ತರು ತಪ್ಪದೇ ಪಾಲ್ಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಪ್ರಿಯಾಂಕ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ

ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಭಾರತ್‌ ಜೋಡೊ ಯಾತ್ರೆಗೆ ಆಗಮಿಸುವ ಸಾಧ್ಯತೆ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗುವ ಸಮಯದಲ್ಲೇ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

‘ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕನಿಷ್ಠ 20 ಸಾವಿರ ಮಹಿಳೆಯರು ಹೆಜ್ಜೆ ಹಾಕಬೇಕು. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಪ್ರತಿ ಹಳ್ಳಿಯಿಂದ ಜನರನ್ನು ಕರೆತರಲು ಪ್ರಯತ್ನಿಸಿ’ ಎಂದು ಸೂಚನೆ ನೀಡಿದರು.

‘ಪಾದಯಾತ್ರೆ ರಾಜ್ಯದಲ್ಲಿ 22 ದಿನ ಸಾಗಲಿದೆ. ಇದರಲ್ಲಿ ನಾಲ್ಕೂವರೆ ದಿನ ಚಿತ್ರದುರ್ಗ ಜಿಲ್ಲೆಯಲ್ಲಿ ತೆರಳಲಿದೆ. ಇದೊಂದು ಅವಕಾಶವೆಂದು ಭಾವಿಸಿ ಕೆಲಸ ಮಾಡಬೇಕು. ಜಿಲ್ಲೆಯ 130 ಕಿ.ಮೀ ದೂರದವರೆಗೆ ಫ್ಲೆಕ್ಸ್‌ಗಳನ್ನು ಅಳವಡಿಸಬೇಕು. ಮಾವಿನ ತೋರಣ, ಬಾಳೆಕಂದು ಕಟ್ಟಿ ಮಾರ್ಗವನ್ನು ಸಿಂಗರಿಸಬೇಕು’ ಎಂದು ತಾಕೀತು ಮಾಡಿದರು.

‘ನಿತ್ಯ ಬೆಳಿಗ್ಗೆ 7ಕ್ಕೆ ಪಾದಯಾತ್ರೆ ಆರಂಭವಾಗುತ್ತದೆ. ಊಟದ ವಿರಾಮದ ಬಳಿಕ ಮಧ್ಯಾಹ್ನ 3ಕ್ಕೆ ಮತ್ತೆ ಶುರುವಾಗುತ್ತದೆ. ನಿಗದಿತ ಸ್ಥಳದಲ್ಲಿ ಊಟ, ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಪೂರೈಕೆ, ಸ್ವಚ್ಛತೆಗೆ ತಂಡಗಳನ್ನು ರಚಿಸಬೇಕು. ಮಾರ್ಗದಲ್ಲಿ ಕಸ, ಬಾಟಲಿಗಳು ಇರದಂತೆ ಶುಚಿಗೊಳಿಸಬೇಕು’ ಎಂದು ಹೇಳಿದರು.

ಎಐಸಿಸಿ ಮುಖಂಡ ಮಯೂರ್ ಜಯಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಭಾರತ್‌ ಜೋಡೋ ಯಾತ್ರೆಯ ರಾಜ್ಯ ಉಸ್ತುವಾರಿ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಉಪಾಧ್ಯಕ್ಷರಾದ ಎಚ್‌.ಆಂಜನೇಯ, ಬಿ.ಎನ್. ಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್‌, ತಿಪ್ಪೇಸ್ವಾಮಿ, ಎ.ವಿ.ಉಮಾಪತಿ, ಯೋಗೇಶ್ ಬಾಬು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್, ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಿತಾ ರಘು, ಹಾಲೇಶ್‌ ಇದ್ದರು.

ಪಾದಯಾತ್ರೆ ಜೆ.ಜಿ.ಹಳ್ಳಿ ಮೂಲಕ ಪ್ರವೇಶಿಸಿ ಹಿರಿಯೂರು, ಚಳ್ಳಕೆರೆ ತಾಲ್ಲೂಕಿನ ಮೂಲಕ ಸಾಗಲಿದೆ. ರಾಹುಲ್ ಗಾಂಧಿ ನಮ್ಮ ಜೊತೆ ಇರುತ್ತಾರೆ. ಶಿಸ್ತು ಬದ್ದವಾಗಿ ಯಾತ್ರೆ ನಡೆಸೋಣ.

– ಟಿ.ರಘುಮೂರ್ತಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT