ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳಿಂದ ಸಂಪತ್ತು ಸೃಷ್ಟಿಗೆ ಹೊಸ ಮಂಡಳಿ

ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಸೂದೆಗೆ ಒಪ್ಪಿಗೆ
Last Updated 17 ಸೆಪ್ಟೆಂಬರ್ 2021, 15:48 IST
ಅಕ್ಷರ ಗಾತ್ರ

ಬೆಂಗಳೂರು: ಜೈಲುಗಳಲ್ಲಿ ಕೈದಿಗಳ ಮಾನವ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿವಿಧ ಉತ್ಪನ್ನಗಳ ತಯಾರಿಕೆ ಹೆಚ್ಚಿಸುವುದು ಮತ್ತು ಆ ಮೂಲಕ ಕೈದಿಗಳ ಗಳಿಕೆ ಪ್ರಮಾಣ ಹೆಚ್ಚಿಸುವ ಉದ್ದೇಶದ 'ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ' ಸ್ಥಾಪನೆಯ ಮಸೂದೆಗೆ ವಿಧಾನಸಭೆ ಶುಕ್ರವಾರ ಒಪ್ಪಿಗೆ ನೀಡಿತು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ ಮಸೂದೆಯ ಮೇಲೆ ವಿವಿಧ ಪಕ್ಷಗಳ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು.

ಸಚಿವ ಜ್ಞಾನೇಂದ್ರ ಮಸೂದೆಯ ಉದ್ದೇಶವನ್ನು ವಿವರಿಸಿ, ಕೈದಿಗಳ ಮಾನವ ಶಕ್ತಿ ಸಂಪನ್ಮೂಲ ವ್ಯರ್ಥವಾಗಬಾರದು. ಅವರು ಮನಸ್ಸು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಮನಪರಿವರ್ತನೆಗೂ ಕಾರಣವಾಗುವ ಸ್ಥಿತಿ ಸೃಷ್ಟಿಸಬೇಕು. ಇದರಿಂದ ಹೊಸ ಜೀವನ ಆರಂಭಿಸಲು ಅವರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

'ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿ ಅಲ್ಲಿನ ಬಂದೀಖಾನೆಗಳಲ್ಲಿ ವರ್ಷಕ್ಕೆ ಸುಮಾರು ₹600 ಕೋಟಿಯಷ್ಟು ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಇದರಿಂದ ಕೈದಿಗಳು ಹೆಚ್ಚು ಸಂಪಾದನೆ ಮಾಡುತ್ತಾರೆ. ಅವರು ಶಿಕ್ಷೆ ಮುಗಿಸಿ ಹೊರಗೆ ಹೋಗುವಾಗ, ಹಣವನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ನಮ್ಮ ರಾಜ್ಯದಲ್ಲಿ ಜಮೀನು ಇದೆ, ಉಪಕರಣಗಳು ಇವೆ. ಇವೆಲ್ಲವನ್ನೂ ಸುವ್ಯವಸ್ಥಿತ ರೀತಿಯಲ್ಲಿ ನಡೆಸಲು ಮಂಡಳಿ ಅಗತ್ಯವಿದೆ' ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಯು.ಟಿ.ಖಾದರ್‌ ಮಾತನಾಡಿ, ಜೈಲಿನ ಒಳಗಿನ ವ್ಯವಸ್ಥೆ ಸರಿಪಡಿಸಬೇಕಾಗಿದೆ. ಅಪರಾಧ ಕೃತ್ಯ ಎಸಗುವವರಿಗೆ ಜೈಲಿನ ಬಗ್ಗೆ ಭಯವೇ ಇಲ್ಲವಾಗಿದೆ. ಜೈಲಿನ ಒಳಗೆ ಬೇಕಾಗಿದ್ದೆಲ್ಲ ಸಿಗುತ್ತದೆ ಎಂಬ ಕಾರಣದಿಂದ ಜೈಲಿಗೆ ಹೋಗುವುದು ಆಕರ್ಷಣೀಯ ಎನಿಸಿದೆ. ಕಳ್ಳನಿಗೆ ಹೊಡೆದರೆ ಮಾನವ ಹಕ್ಕುಗಳ ಕಾರ್ಯಕರ್ತರು ಗಲಾಟೆ ಮಾಡುತ್ತಾರೆ. ಸಣ್ಣ ಅಪರಾಧ ಮಾಡಿ ಜೈಲಿಗೆ ಹೋದವನು ಹೊರ ಬರುವಾಗ ದೊಡ್ಡ ಕ್ರಿಮಿನಲ್ ಆಗಿ ಬರುತ್ತಾನೆ ಎಂದು ಹೇಳಿದರು.

'ಜೈಲಿನಲ್ಲಿ ಹಿಂದುಗಳು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಬ್ಯಾರಕ್‌ಗಳಿವೆ. ಪ್ರತ್ಯೇಕ ಇರಿಸುವ ಅಗತ್ಯವಿಲ್ಲ. ಒಟ್ಟಿಗೆ ಬಿಡಿ ಏನೂ ಆಗಲ್ಲ. ಹೊಡೆದಾಡಿಕೊಳ್ಳುವುದಿದ್ದರೆ, ಒಳಗೇ ಹೊಡೆದಾಡಿಕೊಳ್ಳಲಿ ಬಿಡಿ. ಹೊರಗೆ ನೆಮ್ಮದಿ ಇರುತ್ತದೆ' ಎಂದರು.

ಜೆಡಿಎಸ್‌ನ ಕೆ.ಅನ್ನದಾನಿ ಮಾತನಾಡಿ, 'ಜೈಲಿನಲ್ಲಿ ಡ್ರಗ್ಸ್‌, ಮದ್ಯ, ಇಸ್ಪೀಟ್‌ ಸೇರಿದಂತೆ ಎಲ್ಲವೂ ಸಿಗುತ್ತದೆ. ಫೋನ್‌ ಕೂಡ ಸಿಗುತ್ತದೆ. ಜೈಲಿಗೆ ಹೋಗಿದ್ದ ಸಣ್ಣ ಅಪರಾಧ ಮಾಡಿದ ವ್ಯಕ್ತಿಯೊಬ್ಬ ಅಲ್ಲಿಂದಲೇ ನನಗೆ ಫೋನ್‌ ಮೂಲಕ ಕರೆ ಮಾಡಿದ್ದ. ಇದನ್ನು ಕಂಡು ಅಚ್ಚರಿಯಾಯಿತು' ಎಂದರು. ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌, ರಾಮಲಿಂಗಾರೆಡ್ಡಿ, ತನ್ವೀರ್‌ ಸೇಠ್, ಬಿಜೆಪಿಯ ಕೆ.ಜೆ.ಬೋಪಯ್ಯ, ಸತೀಶ್‌ ರೆಡ್ಡಿ ಮಾತನಾಡಿದರು.

ಮಂಡಳಿಗೆ ಗೃಹ ಸಚಿವರೇ ಅಧ್ಯಕ್ಷರು:

ಬಂದೀಖಾನೆ ಮಂಡಳಿಗೆ ಗೃಹ ಸಚಿವರೇ ಅಧ್ಯಕ್ಷರಾಗಿರುತ್ತಾರೆ. ಬಂದೀಖಾನೆಗಳಲ್ಲಿ ಕೈದಿಗಳ ಕೌಶಲಾಭಿವೃದ್ಧಿ, ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಅಲ್ಲದೆ, ಕೈದಿಗಳ ಜೀವನ ಸ್ಥಿತಿಯನ್ನು ಪರಿಶೀಲಿಸಿ, ಸುಧಾರಿಸಲು ಮಾರ್ಗಸೂಚಿಗಳನ್ನು ರೂಪಿಸಲಿದೆ ಎಂದು ಸಚಿವ ಜ್ಞಾನೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT