ಶುಕ್ರವಾರ, ಜನವರಿ 22, 2021
21 °C

ಮಾತಾಡಿದ್ದೆಲ್ಲ ವಿವಾದ ಮಾಡಿದ್ರು, ನನ್ನ ರಕ್ಷಣೆಗೆ ಜನರೇ ಬರಬೇಕು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

siddaramaiah

ಬೆಂಗಳೂರು: ಗೋಮಾಂಸ ಕುರಿತ ಹೇಳಿಕೆ, ಹನುಮ ಜಯಂತಿ ದಿನ ಮಾಂಸ ತಿಂದ ವಿಚಾರ ಸೇರಿದಂತೆ ನಾನು ಮಾತಾಡಿದ್ದೆಲ್ಲವನ್ನೂ ವಿವಾದ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ನಾನು ಹಳ್ಳಿಯಿಂದ ಬಂದವನು, ಮಾತು ಸ್ವಲ್ಪ ಒರಟು, ಹಳ್ಳಿಭಾಷೆಯಲ್ಲಿ ಮಾತಾಡ್ತೇನೆ. ಇತ್ತೀಚೆಗೆ ನಾನು ಮಾತಾಡಿದ್ದೆಲ್ಲವನ್ನೂ ವಿವಾದ ಮಾಡುವುದು ಚಾಳಿಯಾಗಿಬಿಟ್ಟಿದೆ. ನಾ ಒಬ್ನೇ ಸಿಕ್ಕವನು ಟೀಕೆ ಮಾಡೋಕೆ, ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆಯೇ ಬೀಳುವವರು, ನನ್ನ ರಕ್ಷಣೆಗೆ ಜನರೇ ಬರಬೇಕು ಎಂದು ವಿಡಿಯೊ ಟ್ವೀಟ್ ಮಾಡಿದ್ದಾರೆ.

ಗೋಮಾಂಸ ತಿನ್ನುವ ವಿಚಾರದಲ್ಲಾದ ವಿವಾದದ ಬಗ್ಗೆ ಪ್ರಸ್ತಾಪಿಸಿರುವ ಅವರು, ದನದ ಮಾಂಸ ತಿನ್ಬೇಕೆಂದರೆ ತಿನ್ತೀನಿ, ನೀ ಯಾವನಯ್ಯಾ ಕೇಳೋಕೆ ಎಂದು ಕೇಳಿದ್ದು ನಿಜ. ನಾನು ಈ ವರೆಗೆ ದನದ ಮಾಂಸ ತಿಂದಿಲ್ಲ, ತಿನ್ನುವುದೂ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆಯ ಹಿಂದಿನ ಬಿಜೆಪಿಯ ಆತ್ಮವಂಚಕ ನಡವಳಿಕೆಯನ್ನು ಪ್ರಶ್ನಿಸಲು ಆ ರೀತಿ ಹೇಳಿದ್ದೆ. ಇದರಲ್ಲೇನಿದೆ ವಿವಾದ? ಎಂದು ಪ್ರಶ್ನಿಸಿದ್ದಾರೆ.

 

ಇತ್ತ, ಹನುಮ ಜಯಂತಿ ದಿನ ಕೋಳಿ ಮಾಂಸ ತಿಂದ ವಿಚಾರಕ್ಕೆ ಆದ ವಿವಾದವನ್ನೂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ತಸ್ತಾಪಿಸಿದ್ದಾರೆ. ಓಟು ಹಾಕಲು ಊರಿಗೆ ಹೋಗಿದ್ದಾಗ ಕಾರ್ಯಕರ್ತರ ಮನೆಗೆ ಊಟಕ್ಕೆ ಹೋಗಿದ್ದೆ. ಅಲ್ಲಿ ಕೋಳಿ ಮಾಡಿದ್ದರು. ನಮ್ಮೂರ ಯುವಕನೊಬ್ಬ ಇಂದು ಹನುಮಜಯಂತಿ ಮಾಂಸ ತಿನ್ನೋದಿಲ್ಲ ಎಂದು ಹೇಳಿದಾಗ, ಹನುಮ ಜಯಂತಿ ದಿನ ಕೆಲವು ಕಡೆ ಮರಿ ಹೊಡೆಯುತ್ತಾರೆ, ಮಾಂಸ ತಿಂದರೆ ತಪ್ಪೇನು ಎಂದು ಕೇಳಿದ್ದೆ. ಅದನ್ನೂ ಕೂಡಾ ವಿವಾದ ಮಾಡಿಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು