ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ| ಸಿದ್ದರಾಮಯ್ಯ ಪಶ್ಚಾತ್ತಾಪ ಮತಕ್ಕಾಗಿ: ಬಿಜೆಪಿ ಟೀಕೆ

Last Updated 20 ಆಗಸ್ಟ್ 2022, 7:49 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಯ ಸಾಲಿನಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಸಿದ್ದರಾಮಯ್ಯ ಅವರುಪಶ್ಚಾತ್ತಾಪದ ಮಾತುಗಳನ್ನಾಡುತ್ತಿರುವುದು ಪ್ರಾಯಶ್ಚಿತ್ತಕ್ಕಲ್ಲ, ಮತ ಗಳಿಕೆಗೆ. ಸಿದ್ದರಾಮಯ್ಯ ಅವರ ಅವಕಾಶವಾದಿ ರಾಜಕಾರಣವನ್ನು ಕರ್ನಾಟಕ ಎಂದಿಗೂ ಕ್ಷಮಿಸದು ಎಂದು ಬಿಜೆಪಿ ಶನಿವಾರ ಟೀಕಿಸಿದೆ.

ಮಳೆ ಹಾನಿ ವೀಕ್ಷಣೆಗಾಗಿ ಶುಕ್ರವಾರ ಚಿಕ್ಕಮಗಳೂರಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ರಂಭಾಪುರಿ ಮಠಕ್ಕೂ ಭೇಟಿ ನೀಡಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು.

‘ಲಿಂಗಾಯತ ಸ್ವತಂತ್ರ ಧರ್ಮದ ಮೂಲಕ ನಾನು ಧರ್ಮ ಒಡೆಯುವ ಪ್ರಯತ್ನ ಮಾಡಿರಲಿಲ್ಲ. ಕೆಲವರು ನನ್ನ ದಾರಿ ತಪ್ಪಿಸಿದ್ದರು. ಅದರಿಂದಾಗಿ ನನಗೆ ಖಂಡಿತವಾಗಿಯೂ ಪಶ್ಚಾತ್ತಾಪವಾಗಿದೆ. ಧರ್ಮದ ವಿಚಾರದಲ್ಲಿ ಯಾವತ್ತೂ ಆವೇಶ ಮಾಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾಗಿ ನಂತರ ಶ್ರೀಗಳು ಮಾಧ್ಯಮಗಳಿಗೆ ತಿಳಿಸಿದ್ದರು.

ಈ ಬಗ್ಗೆ ಶನಿವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

’ವೀರಶೈವ ಲಿಂಗಾಯತ ಧರ್ಮ ವಿಭಜನೆ ವಿಚಾರದಲ್ಲಿ ನನ್ನನ್ನು ದಾರಿ ತಪ್ಪಿಸಿದರು ಎಂದು ಧರ್ಮ ವಿಭಜಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ದಾರಿ ತಪ್ಪಿಸಿದವರು ನಿಮ್ಮ ಜೊತೆಯಲ್ಲೇ ಇದ್ದುಕೊಂಡು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರಿಂದ ರಾಜೀನಾಮೆ‌ ಪಡೆಯುತ್ತೀರಾ? ಎಂದು ಪ್ರಶ್ನೆ ಮಾಡಿದೆ.

‘ಧರ್ಮ ವಿಭಜನೆಗೆ ಕೈ ಹಾಕಿದ್ದು ತಪ್ಪು ಎಂದು ಈ ಹಿಂದೆ ಡಿ.ಕೆ ಶಿವಕುಮಾರ್‌ ಹೇಳಿದ್ದರು. ಈಗ ಅದೇ ಹಾದಿಯನ್ನು ಸಿದ್ದರಾಮಯ್ಯ ತುಳಿದಿದ್ದಾರೆ. ಚುನಾವಣೆಯ ಸಾಲಿನಲ್ಲಿ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿರುವುದು ಮತ ಗಳಿಕೆಯ ಭಾಗವೇ? ಸಿದ್ದರಾಮಯ್ಯ ಅವರ ಅವಕಾಶವಾದಿ ರಾಜಕಾರಣವನ್ನು ಕರ್ನಾಟಕ ಎಂದಿಗೂ ಕ್ಷಮಿಸದು’ ಎಂದು ಹೇಳಿದೆ.

‘ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಹಲವು ವರ್ಷಗಳಿಂದ ಅಪಮಾನ ಮಾಡುತ್ತಲೇ ಬಂದಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೆ ರಾಜಕೀಯವಾಗಿ ಅನ್ಯಾಯ ಮಾಡಿದ್ದ ಕಾಂಗ್ರೆಸ್, ಧರ್ಮದ ವಿಚಾರದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಭಾವನೆ ಕೆಣಕುತ್ತಿದೆ. ಬಸವಣ್ಣನ ಹಾದಿಯಲ್ಲಿ ನಡೆಯುತ್ತಿದ್ದೇವೆ ಎನ್ನುವವರು ಮಾಡುತ್ತಿರುವುದೇನು?’ ಎಂದು ಮತ್ತೊಂದು ಪ್ರಶ್ನೆ ಕೇಳಿದೆ.

‘ಧರ್ಮ ವಿಭಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರಪಶ್ಚಾತ್ತಾಪ ಪ್ರಾಯಶ್ಚಿತ್ತಕ್ಕಲ್ಲ. ಪ್ರಯೋಜನ ಪಡೆಯಲು ಮಾಡಿದ ಸಂಕಲ್ಪ. ಚುನಾವಣೆ ಸನಿಹದಲ್ಲಿರುವಾಗ ಧರ್ಮ ವಿಭಜನೆಯ ಸೂತ್ರದಾರ ಪಶ್ಚಾತ್ತಾಪ ಪಟ್ಟಿರುವುದರಲ್ಲಿ ರಾಜಕೀಯವಿದೆಯೇ ಹೊರತು ಯಾವುದೇ ವಿಷಾದವಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT