ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ತಿನ ಕಲಾಪ ನುಂಗಿದ ‘ಅವಿಶ್ವಾಸ ನಿರ್ಣಯ’

ಬಿಜೆಪಿ– ಕಾಂಗ್ರೆಸ್‌ ಮಧ್ಯೆ ಮಾತಿನ ಚಕಮಕಿ: ಜೆಡಿಎಸ್‌ ಮೌನ
Last Updated 9 ಡಿಸೆಂಬರ್ 2020, 22:07 IST
ಅಕ್ಷರ ಗಾತ್ರ

ಬೆಂಗಳೂರು: ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ವಿರುದ್ಧ ನೀಡಲಾಗಿರುವ ಅವಿಶ್ವಾಸ ನಿರ್ಣಯದ ನೋಟಿಸ್‌ ಮೇಲಿನ ಚರ್ಚೆಗೆ ಬಿಜೆಪಿ ಸದಸ್ಯರ ಪಟ್ಟು ಹಾಗೂ ಕಾಂಗ್ರೆಸ್‌ ಸದಸ್ಯರ ವಿರೋಧದಿಂದಾಗಿ ಮಧ್ಯಾಹ್ನದವರೆಗೂ ವಿಧಾನಪರಿಷತ್ತಿನ ಕಲಾಪ ಬುಧವಾರ ನಡೆಯಲಿಲ್ಲ.

ಬಿಜೆಪಿ ಬೇಡಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸಭಾಪತಿ ಪೀಠದ ಎದುರು ಧರಣಿಗೆ ಮುಂದಾದರು. ಇದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಬಳಿಕ ನಡೆದ ಕಲಾಪ‌ ಸಲಹಾ ಸಮಿತಿ ಸಭೆಯ ನಿರ್ಧಾರದಂತೆ ಬಿಜೆಪಿ ಸದಸ್ಯರು ತಮ್ಮ ಬೇಡಿಕೆಯಿಂದ ಹಿಂದೆ ಸರಿದರು. ಮಧ್ಯಾಹ್ನ 3.55ಕ್ಕೆ ಮತ್ತೆ ಕಲಾಪ‌ ಆರಂಭವಾಯಿತು. ಕಾಂಗ್ರೆಸ್ ಸದಸ್ಯರು ಧರಣಿ ಕೈಬಿಟ್ಟು ತಮ್ಮ ಸ್ಥಾನಗಳಿಗೆ ವಾಪಸಾದರು.

ಬೆಳಿಗ್ಗೆಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಆಯನೂರು ಮಂಜುನಾಥ್, ‍‘ನಾವು 11 ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್‌ ನೀಡಿದ್ದೇವೆ. ಬುಧವಾರಕ್ಕೆ 14 ದಿನ ಆಗಿದೆ. ಕಲಾಪ ಪಟ್ಟಿಯಲ್ಲಿ ಸೇರಿಸಿ, ಚರ್ಚೆಗೆ ಅವಕಾಶ ನೀಡಬೇಕು’ ಎಂದು
ಸಭಾಪತಿ ಬಳಿ ಮನವಿ ಮಾಡಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಕಾಂಗ್ರೆಸ್ಸಿನ ನಾರಾಯಣ
ಸ್ವಾಮಿ, ಹರಿಪ್ರಸಾದ್, ‘ಪರಿಷತ್‌ ಕಾರ್ಯಕಲಾಪಗಳ ನಿಯಮಾವಳಿ ಪ್ರಕಾರ 14 ದಿನಗಳ ತರುವಾಯ ನೋಟಿಸ್‌ ಕೈಗೆತ್ತಿಕೊಳ್ಳಬೇಕು ಎಂದಿದೆ. ಬಿಜೆಪಿ ನೋಟಿಸ್ ನೀಡಿರುವ ದಿನ ಲೆಕ್ಕ ಹಾಕಿದರೆ 14 ದಿನ ಬುಧವಾರ ಸಂಜೆಗೆ ಮುಗಿಯಲಿದೆ. ಗುರುವಾರ ಬೇಕಿದ್ದರೆ ಈ ವಿಷಯ ಪ್ರಸ್ತಾಪಿಸಬಹುದು’ ಎಂದರು.

ಸಭಾಪತಿಯವರು, ‘ನಿಯಮ 165 (2) ಪ್ರಕಾರ ಅವಿಶ್ವಾಸ ನಿರ್ಣಯವನ್ನು ಕಲಾಪ ನಡೆಯುವ 14 ದಿನಗಳ ತರುವಾಯ ಅಥವಾ ಸಭಾಪತಿಗೆ ಯುಕ್ತವಾದ ದಿನ ಕಲಾಪ ಪಟ್ಟಿಯಲ್ಲಿ ಸೇರಿಸಲು ಅವಕಾಶ ಇದೆ. ನೋಟಿಸ್‍ನಲ್ಲಿ ನನಗೆ ಕೆಲವು ಅನುಮಾನಗಳಿವೆ. ಆ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ. ನಂತರ ಚರ್ಚೆಗೆ ಸಮಯ ನಿಗದಿ ಮಾಡುತ್ತೇನೆ’ ಎಂದರು.

ಪಟ್ಟು ಸಡಿಲಿಸದ ಆಯನೂರು ಮಂಜುನಾಥ್, ‘ನ. 25ರಂದು ನೋಟಿಸ್‌ ನೀಡಿದ್ದೇವೆ. 14 ದಿನ ಮುಗಿ
ದಿದೆ’ ಎಂದು ವಾದಿಸಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡು ಕಡೆಯ ಸದಸ್ಯರು ಪರಿಷತ್‍ ಕಾರ್ಯಕಲಾಪದ ನಿಯಮಗಳನ್ನು ಉಲ್ಲೇಖಿಸಿ ತಮ್ಮದೇ ವಾದ ಮಂಡಿಸಿದರು. ಒಂದು ಹಂತದಲ್ಲಿ ಸದಸ್ಯರ ಮಾತುಗಳು ಕಡತಕ್ಕೆ ಹೋಗುವುದಿಲ್ಲ ಎಂದು ಸಭಾಪತಿ ರೂಲಿಂಗ್ ನೀಡಿದರು. ಈ ವೇಳೆ ಜೆಡಿಎಸ್ ಸದಸ್ಯರು ಮೌನಕ್ಕೆ ಶರಣಾಗಿದ್ದರು.

ಮಧ್ಯಪ್ರವೇಶಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ‘ನಿಯಮದ ಪ್ರಕಾರ ಅವಿಶ್ವಾಸ ನಿರ್ಣಯದ ಚರ್ಚೆಗೆ ಸಮಯ ನಿಗದಿ ಮಾಡಬೇಕಿದೆ’ ಎಂದು ಪ್ರತಿಪಾದಿಸಿದರು. ಆಗ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಭಾಪತಿ, ‘ಕಾನೂನು ತಜ್ಞರ ಸಲಹೆ ಪಡೆಯದ ಹೊರತು ಚರ್ಚೆಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಯಾವುದೇ ಒತ್ತಡ ತಂದರು ಪ್ರಯೋಜನ ಇಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯ’ ಎಂದರು. ಆಡಳಿತ– ವಿರೋಧ ಪಕ್ಷದ ಸದಸ್ಯರ ಗದ್ದಲ ಮುಂದುವರಿದಾಗ ಸಭಾಪತಿ ಕಲಾಪ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT