ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತಡಿಯಲ್ಲಿ ಪ್ರಧಾನಿ ಮೋದಿ ಮತ ದುಂದುಭಿ: ಕಾರ್ಯಕರ್ತರ ಹರ್ಷೋದ್ಗಾರ

ತಿಂಗಳಿಗೊಮ್ಮೆ ಬರುವೆ: ಮೋದಿ
Last Updated 2 ಸೆಪ್ಟೆಂಬರ್ 2022, 20:32 IST
ಅಕ್ಷರ ಗಾತ್ರ

ಮಂಗಳೂರು/ ಬೆಂಗಳೂರು: ವಿಧಾನಸಭಾ ಚುನಾವಣೆಗೆ ಏಳೆಂಟು ತಿಂಗಳಿರುವಾಗ ರಾಜ್ಯಕ್ಕೆ ಎರಡನೇ ಬಾರಿ ದಾಂಗುಡಿ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮತ ಪರ್ವಕ್ಕೆ ರಾಜ್ಯದ ಜನ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹುರಿಗೊಳಿಸಿ, ಬಿಜೆಪಿ ಪರ ಅಲೆ ಎಬ್ಬಿಸಲು ಮಂಗಳೂರಿನಲ್ಲಿ ಶುಕ್ರವಾರ ನಡೆದ ಬೃಹತ್‌ ಸಮಾವೇಶವನ್ನು ಬಳಸಿಕೊಂಡರು.

ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ಜೈಕಾರ, ‘ಹೋ’ ಎಂಬ ಮುಗಿಲುಮುಟ್ಟುವ ಘೋಷಣೆಗಳಿಂದ ಪುಳಕಿತರಾದ ಮೋದಿ ಅವರು, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ಸಾಧನೆಗಳ ಪಟ್ಟಿಯನ್ನೇ ಮುಂದಿಟ್ಟರು.₹3,800 ಕೋಟಿ ಮೊತ್ತದ 8 ಯೋಜನೆಗಳಿಗೆ ಚಾಲನೆ ನೀಡಿದ ಅವರು, ‘ಹಿಂದಿನ ಸರ್ಕಾರಗಳು ಮಾಡದಷ್ಟು ಅಭಿವೃದ್ಧಿ ಕಾರ್ಯವನ್ನು ಬಿಜೆಪಿ ಸರ್ಕಾರ ಕೇವಲ ಎಂಟು ವರ್ಷಗಳಲ್ಲಿ ಮಾಡಿದೆ’ ಎಂದು ಹೇಳುವುದನ್ನು ಮರೆಯಲಿಲ್ಲ.

ಆ ಬಳಿಕ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡ ಮೋದಿ ಅವರು, ‘ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ, ಪ್ರತಿ ತಿಂಗಳೂ ಕರ್ನಾಟಕಕ್ಕೆ ಬರುತ್ತೇನೆ’ ಎಂದು ಹೇಳಿ ವಿಶ್ವಾಸ ತುಂಬಿದರು.

‘ನಿಮ್ಮ ಅರಿವಿಗೆ ಬಂದಿದೆಯೊ ಇಲ್ಲವೋ, ಇವತ್ತಿಗೂ ಕರ್ನಾಟಕದ ಜನತೆಯ ನಾಡಿಮಿಡಿತ ಬಿಜೆಪಿ ಪರ
ವಾಗಿಯೇ ಇದೆ. ರಾಜಕೀಯ ಸಮಾವೇಶಗಳಿಗೆ ಅಪಾರ ಪ್ರಮಾಣದ ಜನ ಬರುವುದು ಸಹಜ. ಆದರೆ ಸರ್ಕಾರಿ
ಕಾರ್ಯಕ್ರಮಕ್ಕೆ ಭಾರಿ ಜನ ಸೇರಿರುವುದು ವಿಶೇಷ. ನೀವು ಕೆಲವು ಕಡೆಗಳಲ್ಲಿ ಅಲ್ಲಿನ ಪರಿಸ್ಥಿತಿ ಅರಿತುಕೊಂಡು ಕೆಲಸ ಮಾಡಿ. ತಿಂಗಳಿಗೊಮ್ಮೆ ಜಿಲ್ಲಾವಾರು ಅಥವಾ ವಿಭಾಗವಾರು ಸಮಾವೇಶವನ್ನು ಹಮ್ಮಿಕೊಳ್ಳಿ, ನಾನು ಭಾಗವಹಿಸಲು ಸಿದ್ಧನಿದ್ದೇನೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಮನೆ– ಮನೆಗೂ ತಲುಪುವಂತೆ ನೋಡಿಕೊಳ್ಳಿ’ ಎಂದು ಸೂಚನೆ ನೀಡಿದರು.

ಸುಮಾರು 20 ನಿಮಿಷಗಳ ಕಾಲ ಪ್ರಮುಖ ನಾಯಕರೊಂದಿಗೆ ಚಹಾ ಸೇವಿಸುತ್ತಾ ಮಾತುಕತೆ ನಡೆಸಿದರು. ಈ ವೇಳೆ, ರಾಜ್ಯಕ್ಕೆ ನಿರಂತರವಾಗಿ ಭೇಟಿ ನೀಡುವಂತೆ ಪಕ್ಷದ ನಾಯಕರು ಪ್ರಧಾನಿಗೆ ಮನವಿ ಮಾಡಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ಚುನಾವಣೆಗಾಗಿ ರೂಪಿಸಿದ ನೀಲನಕ್ಷೆಯನ್ನು ವಿವರಿಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಆಡಳಿತ ಮತ್ತು ಹಲವು ಕಾರ್ಯಕ್ರಮಗಳ ಬಗ್ಗೆ ಮೋದಿ ಅವರಿಗೆ ವಿವರ ನೀಡಿದರು.

‘ಚುನಾವಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಯಡಿಯೂರಪ್ಪ ಅವರ ಮಾರ್ಗದರ್ಶನ ಪಡೆಯಿರಿ. ಈ ಹಿಂದೆ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿ ಜನರ ವಿಶ್ವಾಸ ಮತ್ತು ಮನಸ್ಸು ಗೆದ್ದ ಕಾರಣವೇ ಬಿಜೆಪಿ ಆ ರಾಜ್ಯಗಳಲ್ಲಿ ಗೆಲ್ಲಲು ಸಾಧ್ಯವಾಯಿತು’ ಎಂದೂ ಮೋದಿ ಕಿವಿ ಮಾತು ಹೇಳಿದರು.

ಕಾರ್ಯಕರ್ತರ ಸಂಭ್ರಮ: ದಕ್ಷಿಣ ಕನ್ನಡದ ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಹತ್ಯೆಯ ಬಳಿಕ ಕರಾವಳಿ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ಮಡುಗಟ್ಟಿತ್ತು. ಆದರೆ, ಶುಕ್ರವಾರದ ಸಮಾವೇಶ, ಮೋದಿ ಅವರ ಪ್ರೇರಣಾದಾಯಕ ಮಾತುಗಳು ಪಕ್ಷದ ಕಾರ್ಯಕರ್ತರ ಆಕ್ರೋಶ ತಿಳಿಗೊಳಿಸುವಲ್ಲಿ ಯಶಸ್ವಿಯಾದಂತಿತ್ತು. ಕಾರ್ಯಕರ್ತರು, ಮೋದಿ ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿದಂತಿತ್ತು.

ಕೇರಳದಲ್ಲಿ ಗುರುವಾರ ಮಾತನಾಡಿದ್ದ ಮೋದಿ, ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ, ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು. ಆದರೆ, ಮಂಗಳೂರಿನ ಕಾರ್ಯಕ್ರಮದಲ್ಲಿ 27 ನಿಮಿಷಗಳ ತಮ್ಮ ಭಾಷಣವನ್ನು ಕೇಂದ್ರ–ರಾಜ್ಯ ಸರ್ಕಾರಗಳ ಸಾಧನೆಗಳನ್ನು ವಿವರಿಸಲು ಮೀಸಲಾಗಿಟ್ಟರು. ‘ಡಬಲ್‌ ಎಂಜಿನ್‌ ಸರ್ಕಾರಗಳು ರಾಜ್ಯ– ಕೇಂದ್ರದ ಅಭಿವೃದ್ಧಿಯ ಗತಿಯನ್ನೇ ಬದಲಿಸಿವೆ’ ಎಂದು ಹೇಳಿ ಯೋಜನೆಗಳ ಪಟ್ಟಿ ಮಾಡಿದರು.

‘ರಾಜ್ಯದಲ್ಲೂ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಪರ ಸರ್ಕಾರದ ಅಗತ್ಯ ಇದೆ’ ಎಂದು ಟ್ವೀಟ್‌ ಮಾಡಿದ್ದ ಉದ್ಯಮಿ ಟಿ.ವಿ. ಮೋಹನ್‌ದಾಸ್‌ ಪೈ ಅವರಿಗೆ ಪ್ರತ್ಯುತ್ತರ ಎಂಬಂತೆ, ‘ಕರ್ನಾಟಕದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ, ಅವರಲ್ಲಿಯೂ ಬಹುಪಾಲು ಕರಾವಳಿ ಭಾಗದವರೇ ಆಗಿದ್ದಾರೆ’ ಎಂದರು. ಕರಾವಳಿಯ ಸ್ವಾತಂತ್ರ್ಯ ಹೋರಾಟಗಾರ್ತಿಯರಾದ ಉಳ್ಳಾಲದ ವೀರರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾದೇವಿ ಅವರನ್ನು ಮೋದಿ ಸ್ಮರಿಸಿದರು.

ಬಿಎಸ್‌ವೈಗೆ ಮೋದಿ ಗೌರವ
ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಜತೆ ಪಾಲ್ಗೊಳ್ಳಲು ಸ್ವತಃ ಪ್ರಧಾನಿ ಮೋದಿಯವರೇ ವೇದಿಕೆಗೆ ಆಹ್ವಾನಿಸಿದರು. ಅಲ್ಲದೇ, ವೇದಿಕೆಯಲ್ಲಿ ರಾಜ್ಯಪಾಲರ ಪಕ್ಕದಲ್ಲಿಯೇ ಅವರಿಗೆ ಆಸನ ಕಲ್ಪಿಸಲಾಯಿತು.

ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಹೆಸರು ಇರಲಿಲ್ಲ. ಚುನಾವಣೆಗೆ ಅವರ ಬಲವನ್ನು ಬಳಸಿಕೊಳ್ಳಲು ಮುಂದಾಗಿರುವ ಮೋದಿ, ಅವರಿಗೆ ಆದ್ಯತೆ ಕೊಟ್ಟರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆಯದೇ ಇದ್ದುದಕ್ಕೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು ಎಂದೂ ಹೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರನ್ನು ಸಮಾಧಾನಪಡಿಸುವ ಕೆಲಸವನ್ನು ಪ್ರಧಾನಿ ಮಾಡಿದರು.

ಪ್ರಸ್ತಾಪವಾಗದ ತುಳು
‘ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಪ್ರಧಾನಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ತುಳು ಸಂಘಟನೆಯವರು ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದರು. ಈ ಬಗ್ಗೆ ಪ್ರಧಾನಿ ಯಾವುದೇ ಉಲ್ಲೇಖ ಮಾಡಲಿಲ್ಲ. ಈ ಹಿಂದೆ ಕರಾವಳಿಗೆ ಭೇಟಿ ನೀಡಿದಾಗ ಮೋದಿ ತುಳು ಭಾಷೆಯಲ್ಲೇ ಒಂದೆರಡು ವಾಕ್ಯಗಳನ್ನು ಉದ್ಧರಿಸುವ ಮೂಲಕ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದ್ದರು. ಆದರೆ ಈ ಸಲ ಆ ಪ್ರಯತ್ನವನ್ನೂ ಮಾಡಲಿಲ್ಲ.

ನಿರೀಕ್ಷೆಗೂ ಮೀರಿ ಜನಸಾಗರ
ಸಮಾವೇಶಕ್ಕೆ ಫಲಾನುಭವಿಗಳನ್ನು ಸರ್ಕಾರವೇ ಕರೆತಂದರೆ, ಪಕ್ಷದ ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಸೇರಿದ್ದರು. ಸಭಾಂಗಣ ಭರ್ತಿಯಾಗಿದ್ದರಿಂದ ಕಾರ್ಯಕರ್ತರನ್ನು ಪೊಲೀಸರು ಪ್ರವೇಶ ದ್ವಾರದಲ್ಲಿಯೇ ತಡೆಯಲು ಹರಸಾಹಸ ಪಟ್ಟರು. ಕಾರ್ಯಕರ್ತರ ಉತ್ಸಾಹ ಎಷ್ಟಿತ್ತೆಂದರೆ, ಕೇಂದ್ರ ಬಂದರು ಸಚಿವ ಸರ್ವಾನಂದ ಸೋನೊವಾಲ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಲು ಆರಂಭಿಸುತ್ತಿದ್ದಂತೆಯೇ, ‘ಮೋದಿ... ಮೋದಿ...’ ಎಂದು ಘೋಷಣೆ ಹಾಕಲಾರಂಭಿಸಿದರು. ಮೋದಿ ಅವರೇ ಕೈ ಸನ್ನೆಯ ಮೂಲಕ ಕಾರ್ಯಕರ್ತರನ್ನು ಸುಮ್ಮನಾಗಿಸಿದರು. ಮೋದಿ ಮತ್ತು ಯಡಿಯೂರಪ್ಪ ಅವರ ಹೆಸರು
ಪ್ರಸ್ತಾಪವಾದಾಗಲ್ಲೆಲ್ಲ ಕಾರ್ಯಕರ್ತರು ‘ಹೋ ..’ ಎಂದು ಹರ್ಷೋದ್ಗಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT