ಶುಕ್ರವಾರ, ಅಕ್ಟೋಬರ್ 22, 2021
21 °C
ಸಂಭವನೀಯ ಅಭ್ಯರ್ಥಿ ಆಯ್ಕೆಗೆ ಪ್ರಮುಖರ ಸಭೆ

ಹಾನಗಲ್‌, ಸಿಂದಗಿ ಉಪ ಚುನಾವಣೆ: ಬಿಜೆಪಿಯಿಂದ ತಲಾ 3 ಹೆಸರು ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದಿಂದ ತಲಾ ಮೂವರು ಸಂಭವನೀಯ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ನಿರ್ಧರಿಸಿದೆ.

ಈ ಪೈಕಿ, ಸಿಂದಗಿ ಕ್ಷೇತ್ರಕ್ಕೆ ರಮೇಶ ಭೂಸನೂರ ಮತ್ತು ಹಾನಗಲ್‌ ಕ್ಷೇತ್ರಕ್ಕೆ ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಹೆಸರು ಮುಂಚೂಣಿಯಲ್ಲಿವೆ.

ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಉಪಸ್ಥಿತಿಯಲ್ಲಿ ಭಾನುವಾರ ಪ್ರಮುಖರ ಸಮಿತಿ ಸಭೆ ನಡೆಯಿತು. ಎರಡೂ ಕ್ಷೇತ್ರಗಳಿಗೆ ತಲಾ ಮೂವರ ಹೆಸರನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂಬ ಮಾಹಿತಿ ಲಭಿಸಿದೆ.

ಸಿಂದಗಿ ಕ್ಷೇತ್ರಕ್ಕೆ ಹಿಂದಿನ ಚುನಾವಣೆಯ ಪರಾಜಿತ ಅಭ್ಯರ್ಥಿ ರಮೇಶ ಭೂಸನೂರ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರ ಸಂಬಂಧಿ ಸಂಗನಗೌಡ ಪಾಟೀಲ ಮತ್ತು ಬಿಜೆಪಿ ಮುಖಂಡ ಸಿದ್ದು ಬಿರಾದಾರ ಹೆಸರು ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಇನ್ನೂ ಕೆಲವು ಆಕಾಂಕ್ಷಿಗಳ ಹೆಸರುಗಳು ಸಭೆಯಲ್ಲಿ ಚರ್ಚೆಗೆ ಬಂದಿದ್ದವು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಾನಗಲ್‌ ಕ್ಷೇತ್ರಕ್ಕೆ ರೇವತಿ ಉದಾಸಿ, ಪಕ್ಷದ ಮುಖಂಡ ಕಲ್ಯಾಣ ಕುಮಾರ್‌ ಶೆಟ್ಟರ್‌ ಮತ್ತು ವಿಧಾನ ಪರಿಷತ್‌ ಮಾಜಿ ಸದಸ್ಯ ಶಿವರಾಜ ಸಜ್ಜನ ಅವರ ಹೆಸರುಗಳನ್ನು ಶಿಫಾರಸು ಮಾಡಲು ಪ್ರಮುಖರ ಸಮಿತಿ ನಿರ್ಧರಿಸಿದೆ. ಹಾನಗಲ್‌ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳಿದ್ದು, ಶಿವಕುಮಾರ ಉದಾಸಿ ಹೆಸರೂ ಚರ್ಚೆಗೆ ಬಂದಿತ್ತು. ಆದರೆ, ಹಾಲಿ ಸಂಸದರಾಗಿರುವ ಕಾರಣದಿಂದ ಅವರ ಬದಲು ಪತ್ನಿಯ ಹೆಸರನ್ನು ಶಿಫಾರಸು ಮಾಡುವ ನಿರ್ಣಯಕ್ಕೆ ಬರಲಾಯಿತು ಎಂದು ಗೊತ್ತಾಗಿದೆ.

ಬಿಜೆಪಿ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಸೊಪ್ಪಿನ, ಆರೆಸ್ಸೆಸ್‌ ಮುಖಂಡ ರಾಜಶೇಖರ್‌ ಗೌಡ ಕಾಟೆಗೌಡರ್‌ ಹೆಸರುಗಳೂ ಪರಿಶೀಲನೆಗೆ ಬಂದಿದ್ದವು. ಆದರೆ, ಎರಡೂ ಕ್ಷೇತ್ರಕ್ಕೆ ತಲಾ ಮೂವರ ಹೆಸರನ್ನಷ್ಟೇ ಶಿಫಾರಸು ಮಾಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ... ಸಿದ್ದರಾಮಯ್ಯಗೆ ಇನ್ನೊಬ್ಬರು ಮಲಗುವ ಕೋಣೆ ಇಣುಕಿ ನೋಡುವ ಚಟವಿದೆ: ಸಿ.ಟಿ.ರವಿ

ಮನವೊಲಿಕೆ ಹೊಣೆ ಕಟೀಲ್‌ಗೆ: ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸುವ ಮತ್ತು ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಉಳಿದವರ ಮನವೊಲಿಕೆಯ ಜವಾಬ್ದಾರಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ನೀಡಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಎರಡೂ ಕ್ಷೇತ್ರಗಳಿಗೆ ಹಲವರ ಹೆಸರುಗಳು ಪ್ರಸ್ತಾಪವಾಗಿವೆ. ಅವುಗಳಲ್ಲಿ ಮೂರ್ನಾಲ್ಕು ಹೆಸರುಗಳನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ನೀಡಲಾಗಿದೆ’ ಎಂದರು.

‘ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಆದ್ಯತೆ. ಅದಕ್ಕೆ ಪೂರಕವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗೆಲುವಿಗಾಗಿ ಸಂಘಟಿತ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಆರ್‌. ಅಶೋಕ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ, ಸಂಸದ ಡಿ.ವಿ. ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಸಭೆಯಲ್ಲಿದ್ದರು.

ಚುನಾವಣಾ ಉಸ್ತುವಾರಿಗಳ ನೇಮಕ
ಬೆಂಗಳೂರು:
ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಳನ್ನಾಗಿ ಸಚಿವರು, ಶಾಸಕರು ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ತಲಾ 12 ಮಂದಿಯನ್ನು ನೇಮಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆದೇಶ ಹೊರಡಿಸಿದ್ದಾರೆ.

ಸಿಂದಗಿ ಕ್ಷೇತ್ರಕ್ಕೆ ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ, ಎ.ಎಸ್‌. ಪಾಟೀಲ ನಡಹಳ್ಳಿ, ಪಿ. ರಾಜೀವ್‌, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ ಮತ್ತು ಬಾಬುರಾವ್‌ ಚಿಂಚನಸೂರ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ಹಾನಗಲ್‌ ಕ್ಷೇತ್ರಕ್ಕೆ ಸಚಿವರಾದ ಮುರುಗೇಶ ನಿರಾಣಿ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ, ಶಿವರಾಂ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಶಾಸಕರಾದ ರಾಜುಗೌಡ, ನೆಹರು ಓಲೇಕಾರ್‌, ಎಂ. ಚಂದ್ರಪ್ಪ, ಮಾಜಿ ಸಂಸದ ವಿರೂಪಾಕ್ಷಪ್ಪ ಬಳ್ಳಾರಿ, ಪಕ್ಷದ ಸ್ಥಳೀಯ ಮುಖಂಡ ಅರುಣ್‌ ಕುಮಾರ್‌ ಗುತ್ತೂರು ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು