ಭಾನುವಾರ, ಅಕ್ಟೋಬರ್ 24, 2021
21 °C

ಅಸತ್ಯ, ಹಿಂಸೆಯ ಹಾದಿಯಲ್ಲಿ ಬಿಜೆಪಿಗೆ ನಂಬಿಕೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಾತ್ಮ ಗಾಂಧಿ ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿದ್ದರೆ, ಅಸತ್ಯ ಮತ್ತು ಹಿಂಸೆಯ ಹಾದಿಯಲ್ಲಿ  ಬಿಜೆಪಿ ನಂಬಿಕೆ ಇಟ್ಟಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಮತ್ತು ನಡೆ ಎರಡೂ ತದ್ವಿರುದ್ಧ. ಅವರು ಏನು ಹೇಳುತ್ತಾರೊ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರೆ. ಮೋದಿ ಅವರು ಯಾವುದನ್ನು ಉಳಿಸುತ್ತೇನೆ ಎನ್ನುತ್ತಾರೋ ಅದನ್ನು ನಾಶ ಮಾಡಲು ಹೊರಟಿದ್ದಾರೆ ಎಂದರ್ಥ’ ಎಂದರು.

‘ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಬಿಜೆಪಿಯವರು ದೇಶಭಕ್ತ ಎಂದು ಕರೆಯುತ್ತಾರೆ. ಇಂಥ ಪಕ್ಷ ಅಧಿಕಾರದಲ್ಲಿ ಇದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಉಳಿಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಇಂದು ಪ್ರಜಾತಂತ್ರ ವ್ಯವಸ್ಥೆ ಉಳಿದಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಸುಳ್ಳು ಆಪಾದನೆಯಡಿ ಜೈಲಿಗೆ ಅಟ್ಟಲಾಗುತ್ತಿದೆ’ ಎಂದರು.

‘10 ತಿಂಗಳುಗಳಿಂದ ರೈತರು ದೇಶದಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತುಕತೆಯ ಬದಲು, ಕ್ರೌರ್ಯ ಮತ್ತು ಬಲಪ್ರಯೋಗದ ಮೂಲಕ ಅವರ ಹೋರಾಟವನ್ನು ಅಂತ್ಯಗೊಳಿಸಲು ಹೊರಟಿದೆ’ ಎಂದು ವಾಗ್ದಾಳಿ ನಡೆಸಿದರು.

‘ಲಾಲ್ ಬಹದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಎಂಬ ಕರೆ ನೀಡಿದರು. ರೈಲು ದುರಂತ ಸಂಭವಿಸಿದಾಗ ಘಟನೆಯ ನೈತಿಕ ಹೊಣೆ ಹೊತ್ತು  ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಲಾಲ್ ಬಹದ್ದೂರ್ ಶಾಸ್ತ್ರಿ. ಈಗಿನ ರಾಜಕಾರಣದಲ್ಲಿ ನೈತಿಕತೆ ಕಣ್ಮರೆಯಾಗಿದೆ’ ಎಂದರು.

‘ಶಾಸ್ತ್ರಿ ಅವರು ಪ್ರಧಾನಿಯಾದ ಮೇಲೆ ಅವರ ಮಗ ಕೆಲಸ ಮಾಡುತ್ತಿದ್ದ ಕಂಪನಿ ಮುಂಬಡ್ತಿ ನೀಡಿತು ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಹೇಳಿ, ಕೆಲಸ ಬಿಡುವಂತೆ ಮಾಡಿದ್ದರು. ಇಂಥ ಪ್ರಾಮಾಣಿಕತೆ ಈಗಿನ ರಾಜಕಾರಣಗಳಲ್ಲಿ ಕಾಣಲು ಸಾಧ್ಯವೇ’ ಎಂದೂ ಪ್ರಶ್ನಿಸಿದರು.

ಕಾಂಗ್ರೆಸ್ಸಿಗ ಎನ್ನುವುದೇ ಹೆಮ್ಮೆ: ‘ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದರು.

‘ನಮಗೆ ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ನಾವು ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಳ್ಳುವುದೇ ಹೆಮ್ಮೆ. ಕಾಂಗ್ರೆಸ್ ಸದಸ್ಯತ್ವವೇ ನಮಗೆ ಪವಿತ್ರ ಸ್ಥಾನ. ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಕಚೇರಿ ನಿರ್ಮಿಸಲಾಗಿದ್ದು, ಕಾಂಗ್ರೆಸ್ ಸಂಸ್ಥಾಪನಾ ದಿನದಂದು (ಡಿ. 28) ಅದಕ್ಕೆ ಗಾಂಧಿ ಭವನ ಎಂದು ಹೆಸರಿಡಲು ಚಿಂತನೆ ನಡೆದಿದೆ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸ್ಮರಣಾರ್ಥ ಈ ತಿಂಗಳು ಗಾಂಧೀಜಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ಎಲ್ಲ ನಾಯಕರು 6,000 ಪಂಚಾಯಿತಿ, 1,800 ವಾರ್ಡ್‌ಗಳಲ್ಲಿ ಒಂದೊಂದು ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ನಮ್ಮ ಪಕ್ಷದ ಇತಿಹಾಸ ಹಾಗೂ ಹೋರಾಟದ ಹಾದಿ ಸ್ಮರಿಸಲಾಗುತ್ತದೆ. ಗ್ರಾಮ ಸ್ವರಾಜ್ಯ ಗಾಂಧಿ ಅವರ ಕನಸು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು.

‘ಈ ತಿಂಗಳ ಒಳಗಾಗಿ ಕೆಪಿಸಿಸಿ ಸಮಿತಿ ಪುನಾರಚನೆಯಾಗಲಿದೆ. ಕೆಪಿಸಿಸಿ ಸಮಿತಿ ಜತೆಗೆ ಮತ್ತೊಂದು ಸಮಿತಿ ರೂಪಿಸಲು ರಾಷ್ಟ್ರ ನಾಯಕರು ತೀರ್ಮಾನಿಸಿದ್ದು, ಕಾಂಗ್ರೆಸ್ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ಈ ಸಮಿತಿಯನ್ನು ರೂಪಿಸಲಾಗುತ್ತಿದೆ’ ಎಂದರು.

‘ಸದ್ಯದಲ್ಲೇ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅದರಲ್ಲಿ ಮಾತ್ರವಲ್ಲ, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ನೀವೆಲ್ಲರೂ ಪಕ್ಷ ಸಂಘಟನೆಗೆ ಒತ್ತು ಕೊಡಿ, ಸಮಯ ಕೊಡಿ ಸಾಕು. ನಿಮ್ಮನ್ನು ಪಕ್ಷ ಗುರುತಿಸಲಿದೆ. ನಿಮ್ಮ ಬೂತ್ ಜವಾಬ್ದಾರಿ ನೀವೇ ವಹಿಸಿಕೊಳ್ಳಿ, ನೀವು ನಾಯಕರಾಗಿ ಬೆಳೆಯುತ್ತೀರಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು

ಪಕ್ಷದ ಮುಖಂಡರಾದ ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು