ಇದೇ 13ರ ಮಧ್ಯಾಹ್ನ ಸಂಪುಟ ವಿಸ್ತರಣೆ, 7 ಶಾಸಕರಿಗೆ ಸಚಿವ ಸ್ಥಾನ: ಸಿಎಂ ಯಡಿಯೂರಪ್ಪ

ಬೆಂಗಳೂರು/ನವದೆಹಲಿ: ಬಹಳ ಸಮಯದಿಂದ ನನೆಗುದಿಯಲ್ಲಿದ್ದ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಅಂತಿಮವಾಗಿ ಒಪ್ಪಿಗೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಇದೇ 13 ರಂದು ನಡೆಯಲಿದ್ದು, ಅದಕ್ಕೂ ಮುನ್ನ ಒಬ್ಬರು ಸಚಿವರನ್ನು ಕೈಬಿಡಲು ನಿರ್ಧರಿಸಲಾಗಿದೆ.
ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ಭಾನುವಾರ ಬೆಳಿಗ್ಗೆ ದೆಹಲಿಗೆ ತೆರಳಿದ ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸುಮಾರು ಒಂದು ತಾಸು ಮಾತುಕತೆ ನಡೆಸಿದರು. ಉಸ್ತುವಾರಿ ಅರುಣ್ ಸಿಂಗ್ ಅವರೂ ಇದ್ದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಕುರಿತು ಶೀಘ್ರದಲ್ಲೇ 'ಗುಡ್ ನ್ಯೂಸ್': ಸಿಎಂ ಯಡಿಯೂರಪ್ಪ
‘ನಾಯಕತ್ವ ಬದಲಾವಣೆ ಸೇರಿ ಎಲ್ಲ ರೀತಿಯ ಊಹಾಪೋಹಗಳಿಗೆ ವರಿಷ್ಠರು ತೆರೆ ಎಳೆದಿದ್ದು, ಸಚಿವ ಸಂಪುಟ ವಿಸ್ತರಣೆಗೆ ಮಾತ್ರ ಹಸಿರು ನಿಶಾನೆ ನೀಡಿದರು. ಎಲ್ಲ ಹಿರಿಯ ಸಚಿವರನ್ನು ಸಂಪುಟದಲ್ಲಿ ಮುಂದುವರಿಸಲು ಸೂಚಿಸಿದರು’ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
‘ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಇದೇ 13 ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. 14 ರಂದು ಸಂಕ್ರಾಂತಿ ಇರುವ ಕಾರಣ 13 ರ ಮಧ್ಯಾಹ್ನವೇ ಪ್ರಮಾಣ ವಚನ ನಡೆಯಲಿದೆ’ ಎಂದು ಯಡಿಯೂರಪ್ಪ ರಾತ್ರಿ ಬೆಂಗಳೂರಿನಲ್ಲಿ ತಿಳಿಸಿದರು. ಆದರೆ, ದೆಹಲಿ ಮೂಲಗಳ ಪ್ರಕಾರ, ಇದೇ 18 ಅಥವಾ 19 ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಅಮಿತ್ ಶಾ ಅವರ ರಾಜ್ಯ ಪ್ರವಾಸದ ಬಳಿಕ ನಡೆಯಲಿದೆ.
ಪಕ್ಷಕ್ಕೆ ವಲಸೆ ಬಂದವರಲ್ಲಿ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್ ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ. ಮುನಿರತ್ನ ಅವರದು ಖಚಿತವಾಗಿಲ್ಲ. ಉಳಿದಂತೆ ಉಮೇಶ ಕತ್ತಿ, ಸಿ.ಪಿ.ಯೋಗೀಶ್ವರ್, ರಾಜೂಗೌಡ, ಅರವಿಂದ ಲಿಂಬಾವಳಿ ಸೇರಿ ಹಲವು ಶಾಸಕರ ಹೆಸರು ಮುಂಚೂಣಿಯಲ್ಲಿವೆ. ಪಟ್ಟಿಯಲ್ಲಿ ಇರುವ ಕೆಲವರ ಹೆಸರು ಕೈಬಿಡಬಹುದು. ಅಂತಿಮವಾಗಿ ಸೋಮವಾರ ಸಂಜೆ ಸ್ಪಷ್ಟ ಚಿತ್ರಣ ಸಿಗಲಿದೆ.
ಇದನ್ನೂ ಓದಿ: ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ ಸಿಎಂ ಯಡಿಯೂರಪ್ಪ
ಮಾತುಕತೆಯ ವೇಳೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಗೋಹತ್ಯೆ ನಿಷೇಧ ಮಸೂದೆ ಸೇರಿದಂತೆ ಇತ್ತೀಚೆಗೆ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದ ಮಸೂದೆಗಳ ಕುರಿತು ಯಡಿಯೂರಪ್ಪ ಅವರು ಅಮಿತ್ ಶಾ ಅವರಿಗೆ ಮಾಹಿತಿ ನೀಡಿದರು. ‘ಮಾತುಕತೆ ಚೆನ್ನಾಗಿ ನಡೆಯಿತು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ ಬಗ್ಗೆ ಶಾ ಹರ್ಷ ವ್ಯಕ್ತಪಡಿಸಿದರು’ ಎಂದು ಮೂಲಗಳು ಹೇಳಿವೆ.
ವಿಸ್ತರಣೆ ಶೇ 100 ಖಚಿತ: ವರಿಷ್ಠರ ಜತೆ ಸುದೀರ್ಘ ಮಾತುಕತೆಯ ಬಳಿಕ ಹರ್ಷಚಿತ್ತರಾಗಿದ್ದ ಯಡಿಯೂರಪ್ಪ ಅವರು ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಯಿತು. ಮಾತುಕತೆ ಸಕಾರಾತ್ಮಕ, ಫಲಪ್ರದ ಮತ್ತು ತೃಪ್ತಿದಾಯಕವಾಗಿತ್ತು’ ಎಂದರು.
‘ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಹೆಸರುಗಳನ್ನು ಕಳುಹಿಸಲು ಸೂಚಿಸಿದ್ದಾರೆ. ಮೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕು ಎಂದು ವರಿಷ್ಠರು ತಿಳಿಸಿದ್ದಾರೆ’ ಎಂದು ಹೇಳಿದರು.
ಜತೆಗಿದ್ದ ವಿಜಯೇಂದ್ರ:ಯಡಿಯೂರಪ್ಪ ಜತೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರೂ ಇದ್ದರು. ಅಮಿತ್ ಶಾ ಅವರ ಒಪ್ಪಿಗೆಯ ಮೇರೆಗೇ ವಿಜಯೇಂದ್ರ ಅವರನ್ನು ಕರೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.
ನಾಗೇಶ್ ಸ್ಥಾನಕ್ಕೆ ಕುತ್ತು?
ಒಬ್ಬ ಸಚಿವರನ್ನು ಬಿಡುವುದು ಖಚಿತ ಆಗಿರುವುದರಿಂದ; ಸ್ಥಾನ ಕಳೆದುಕೊಳ್ಳುವ ಸಚಿವರು ಯಾರು ಎಂಬ ಊಹಾಪೋಹ ರಾತ್ರಿ ವೇಳೆ ಹರಿದಾಡಿತು. ಒಂದು ಮೂಲಗಳ ಪ್ರಕಾರ, ಅಬಕಾರಿ ಸಚಿವ ಎಚ್.ನಾಗೇಶ್ ಅವರ ಕಾರ್ಯವೈಖರಿ ಬಗ್ಗೆ ವರಿಷ್ಠರು ಅಸಮಾಧಾನಗೊಂಡಿದ್ದು, ಹೀಗಾಗಿ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.