ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ರಚನೆ: ಕೆಲವರಿಗೆ ಸಂಕಟ– ಯಾರಿಗೆ ಸಿಗಲಿದೆ ಅದೃಷ್ಟ

ವಾರದ ಬಳಿಕ ಮಂತ್ರಿಮಂಡಲ ವಿಸ್ತರಣೆಗೆ ಬಿಜೆಪಿ ಸಿದ್ಧತೆ
Last Updated 28 ಜುಲೈ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನರ್‌ರಚನೆಗೆ ಅನುಸರಿಸಿದ ಮಾದರಿಯನ್ನೇ ರಾಜ್ಯದಲ್ಲಿನ ಹೊಸ ಸಂಪುಟ ರಚನೆಗೂ ಅನುಸರಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿರುವುದು ಯುವ ಶಾಸಕರ ಉಮೇದನ್ನು ಹೆಚ್ಚಿಸಿದ್ದರೆ, ಹಿಂದೆ ಸಚಿವರಾಗಿದ್ದ ಹಲವರಲ್ಲಿ ಅವಕಾಶ ಕಳೆದುಕೊಳ್ಳುವ ಆತಂಕ ಆವರಿಸಿದೆ.

ಹೊಸ ಮಾನದಂಡಗಳ ಆಧಾರದಲ್ಲಿ ಸಂಪುಟ ಸೇರಲೇಬೇಕು ಎಂದು ಮತ್ತೆ ಕೆಲವರು ಹಟಕ್ಕೆ ಬಿದ್ದಿದ್ದಾರೆ.

ಪಕ್ಷದ ವರಿಷ್ಠರ ಸೂಚನೆಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಬ್ಬರೇ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಮುಖ್ಯಮಂತ್ರಿಯವರು ಚರ್ಚಿಸಿದ ಬಳಿಕವೇ ಸಂಪುಟ ವಿಸ್ತರಣೆಯ ನಿರ್ಧಾರ ಪ್ರಕಟವಾಗಲಿದೆ. ಒಂದು ವಾರದೊಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.

ತಮ್ಮ ಸಂಪುಟವನ್ನು ಪುನರ್‌ ರಚಿಸಿರುವ ಮೋದಿ,ಕೆಲಸ ಮಾಡದ ಹಲವರು ಮತ್ತು ಕೆಲವು ಹಿರಿಯ ಸಚಿವರನ್ನು ಕೈಬಿಟ್ಟಿದ್ದಾರೆ. ಅದೇ ಮಾದರಿಯಲ್ಲಿ ಬೊಮ್ಮಾಯಿ ಅವರ ಸಂಪುಟದಲ್ಲೂ ಹೊಸಬರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಬಿಜೆಪಿ ವರಿಷ್ಠರೇ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಂಪುಟದಲ್ಲಿ ಸ್ಥಾನ ನೀಡುವಂತೆ ಕೂಗು ಹೆಚ್ಚಲಾರಂಭಿಸಿದೆ. ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಜಿ. ತಿಪ್ಪಾರೆಡ್ಡಿ, ಕೆ.ಜಿ. ಬೋಪಯ್ಯ ಸೇರಿದಂತೆ ಹಲವರು ಬಹಿರಂಗವಾಗಿಯೇ ತಮ್ಮ ಬೇಡಿಕೆ ಮಂಡಿಸಿದ್ದಾರೆ. ಹಲವು ಶಾಸಕರು ಮಂತ್ರಿ ಗಿರಿಗಾಗಿ ದೆಹಲಿ ಯಾತ್ರೆ ನಡೆಸಲು ಸಜ್ಜಾಗುತ್ತಿದ್ದಾರೆ.

ಹಿರಿಯರು ಹೊರಕ್ಕೆ?: ಹಲವು ವರ್ಷಗಳಿಂದ ಸಚಿವರಾಗಿ ಕೆಲಸ ಮಾಡಿರುವವರು ಮತ್ತು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಮಕಾಲೀನರಾಗಿರುವ ನಾಯಕರನ್ನು ಹೊಸ ಸಂಪುಟದಿಂದ ಹೊರಗಿಡುವುದು ಬಹುತೇಕ ಖಚಿತವಾಗಿದೆ.

ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹಿರಿಯ ನಾಯಕ ಜಗದೀಶ ಶೆಟ್ಟರ್‌ ಘೋಷಿಸಿರುವುದರ ಹಿಂದೆಯೂ ಇದೇ ಲೆಕ್ಕಾಚಾರ ಇದ್ದಂತಿದೆ. ಕೆ.ಎಸ್‌. ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಲೇಬೇಕು ಎಂದು ಹಿಂದುಳಿದ ಸಮುದಾಯಗಳ ಮಠಾಧೀಶರು ಆಗ್ರಹಿಸಿದ್ದಾರೆ.

ಕೆಲವು ಹಿರಿತಲೆಗಳನ್ನು ಸಂಪುಟದಿಂದ ಹೊರಗಿಟ್ಟು, ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಬಹುದು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿಬರುತ್ತಿವೆ.

ಲೆಕ್ಕಾಚಾರದಲ್ಲಿ ಮುಳುಗಿದ ವರಿಷ್ಠರು: ಸಂಪುಟ ವಿಸ್ತರಣೆಯ ಲೆಕ್ಕಾಚಾರವನ್ನು ಬಿಜೆಪಿ ನಾಯಕರು ಈಗಾಗಲೇ ಆರಂಭಿಸಿದ್ದಾರೆ. ಪ್ರಾದೇಶಿಕತೆ, ಸಾಮಾಜಿಕ ನ್ಯಾಯ, ಹಳಬರು ಮತ್ತು ಹೊಸಬರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತ್ಯಜಿಸಿ ಬಂದು ಬಿಜೆಪಿ ಸರ್ಕಾರ ರಚನೆಗೆ ನೆರವಾದ ಶಾಸಕರು ಸೇರಿದಂತೆ ಎಲ್ಲ ಆಯಾಮಗಳಲ್ಲೂ ಅಳೆದು, ತೂಗಿ ನೂತನ ಸಚಿವರನ್ನು ಆಯ್ಕೆಮಾಡುವ ಕಸರತ್ತಿಗೆ ಬಿಜೆಪಿ ವರಿಷ್ಠರು ಕೈ ಹಾಕಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್ಚಿನವರನ್ನು ಹೊಸ ಸಂಪುಟದಿಂದ ಹೊರಗಿಡುವ ಸಾಧ್ಯತೆ ಇದೆ. ಉಳಿದಂತೆ 2023ರ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಬಲ್ಲ ಹೊಸ ಮುಖಗಳಿಗಾಗಿ ಶೋಧ ಆರಂಭವಾಗಿದೆ. ಶುದ್ಧ ಹಸ್ತರು ಮತ್ತು ಕಠಿಣ ಪರಿಶ್ರಮಿಗಳಿಗೆ ಈ ಬಾರಿ ಆದ್ಯತೆ ಸಿಗಲಿದೆ. ಹಿಂದಿನ ಸಂಪುಟದಲ್ಲಿ ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚು ಪ್ರಾತಿನಿಧ್ಯ ಇತ್ತು. ಬೊಮ್ಮಾಯಿ ಅವರ ಸಂಪುಟದಲ್ಲಿ ಈ ಎರಡೂ ಪ್ರದೇಶಗಳ ಪ್ರಾತಿನಿಧ್ಯ ಕುಸಿಯುವ ಸಾಧ್ಯತೆ ಇದೆ.

ಕಾಂಗ್ರೆಸ್‌, ಜೆಡಿಎಸ್‌ನಿಂದ ಬಂದಿರುವ ವಲಸಿಗರಲ್ಲಿ 11 ಮಂದಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದು, ಪ್ರಮುಖ ಖಾತೆಗಳನ್ನೇ ಹೊಂದಿದ್ದರು. ವಲಸಿಗರಲ್ಲಿ ಕಡಿಮೆ ಜನರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಮತ್ತು ಪ್ರಮುಖ ಖಾತೆಗಳನ್ನು ಪಕ್ಷದ ಮೂಲ ಶಾಸಕರಿಗೇ ನೀಡಬೇಕು ಎಂಬ ಬೇಡಿಕೆ ಕೆಲವು ದಿನಗಳಿಂದಲೂ ಇದೆ. ಅದನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯ ಕುರಿತು ವರಿಷ್ಠರ ಹಂತದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿವೆ ಎನ್ನುತ್ತಾರೆ ಕೆಲವು ಶಾಸಕರು.

ಹೀಗಾದಲ್ಲಿ ಅನೇಕ ಹೊಸಮುಖಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಹಿಂದಿನ ಸಂಪುಟದಲ್ಲಿ ಸರಿಯಾದ ಪ್ರಾತಿನಿಧ್ಯ ದೊರಕಿರಲಿಲ್ಲ. ಅಂತಹ ಎಲ್ಲ ಜಿಲ್ಲೆಗಳಿಗೂ ಈ ಬಾರಿ ಸಂಪುಟದಲ್ಲಿ ಹೆಚ್ಚು ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇದೆ. ಸಾಮಾಜಿಕ ನ್ಯಾಯವನ್ನು ಪಾಲಿಸಿಕೊಂಡೇ ಹೊಸ ಮುಖಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ಕೈಹಾಕಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಗುಂಪು ಬಿಡದ ವಲಸಿಗರು

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ‘ವಲಸಿಗ’ ಶಾಸಕರು, ನಾಯಕತ್ವ ಬದಲಾವಣೆ ಆಗುತ್ತಿದ್ದಂತೆಯೇ ಮತ್ತೆ ಒಂದು ಗುಂಪಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಭವನದಲ್ಲಿ ಬುಧವಾರ ಪ್ರಮಾಣವಚನ ಸಮಾರಂಭದಲ್ಲೂ ಈ ಶಾಸಕರು ಒಟ್ಟಾಗಿಯೇ ಇದ್ದರು. ಬೈರತಿ ಬಸವರಾಜ, ಡಾ. ಕೆ. ಸುಧಾಕರ ಸೇರಿದಂತೆ ಕೆಲವರು ಮಂಗಳವಾರ ರಾತ್ರಿಯಿಂದಲೂ ಮುಖ್ಯಮಂತ್ರಿ ಬೊಮ್ಮಾಯಿ ಸುತ್ತವೇ ತಿರುಗುತ್ತಿದ್ದಾರೆ.

‘ಹಿಂದುತ್ವ’ಕ್ಕೆ ಮಣೆ ಸಾಧ್ಯತೆ

ಹೊಸ ಸಂಪುಟದಲ್ಲಿ ಹಿಂದುತ್ವ ಪರ ಶಾಸಕರಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ ಇದೆ. ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌, ಮುಖ್ಯಮಂತ್ರಿ ಹುದ್ದೆಗಾಗಿ ಪ್ರಯತ್ನ ನಡೆಸಿದ್ದ ಅರವಿಂದ ಬೆಲ್ಲದ ಸೇರಿದಂತೆ ಸಂಘ ಪರಿವಾರದ ಕಟ್ಟಾಳುಗಳಲ್ಲಿ ಕೆಲವರು ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆಯುವ ಸಂಭವವಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ವರಿಷ್ಠರ ಜತೆ ಚರ್ಚಿಸಿ ಸಂಪುಟ ವಿಸ್ತರಣೆ’

‘ಪಕ್ಷದ ವರಿಷ್ಠರ ಜತೆ ಚರ್ಚಿಸಿ, ಒಮ್ಮತದ ನಿರ್ಣಯ ಕೈಗೊಂಡು ಸಂಪುಟ ವಿಸ್ತರಣೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.‘ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನಿಗದಿಯಾದ ಬಳಿಕ ದೆಹಲಿಗೆ ಹೋಗಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿ ಚರ್ಚಿಸುವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

***

ಪಕ್ಷದ ವರಿಷ್ಠರ ಜತೆ ಚರ್ಚಿಸಿ, ವಾರದಲ್ಲೇ ಸಂಪುಟ ವಿಸ್ತರಿಸಲಾಗುವುದು. ಪ್ರಾದೇಶಿಕತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಪರಿಗಣಿಸಿ ಸಚಿವರನ್ನು ಆಯ್ಕೆ ಮಾಡಲಾಗುವುದು.

-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

***

ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದವರು ಭಯಪಡಬೇಕಿಲ್ಲ. ವಲಸಿಗರು, ಮೂಲದಿಂದ ಪಕ್ಷದವರು ಎಂಬ ಆಧಾರದಲ್ಲಿ ಸಚಿವರ ಆಯ್ಕೆ ನಡೆಯುವುದಿಲ್ಲ. ಬೊಮ್ಮಾಯಿ ಅವರೂ ಹೊರಗಿನಿಂದ ಬಂದವರಲ್ಲವೆ?

- ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT