ಗುರುವಾರ , ಡಿಸೆಂಬರ್ 8, 2022
18 °C
ಜನ ಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಪರಿಶಿಷ್ಟರನ್ನು ಬಾವಿಯೊಳಗಿಟ್ಟಿದ್ದ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ/ಜಗಳೂರು: ‘ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡಿದ್ದ ಕಾಂಗ್ರೆಸ್‌, ಆ ಸಮುದಾಯದವರನ್ನು ನಿರಂತರವಾಗಿ ಬಾವಿಯೊಳಗೇ ಇಡುವ ಕೆಲಸ ಮಾಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಜಗಳೂರು ಮತ್ತು ಹರಿಹರದಲ್ಲಿ ಬುಧವಾರ ನಡೆದ ಬಿಜೆಪಿಯ ‘ಜನ ಸಂಕಲ್ಪ ಯಾತ್ರೆ’ಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕಾಂಗ್ರೆಸ್‌ನವರು ತಾವೊಬ್ಬರೇ ಎಸ್‌ಸಿ, ಎಸ್‌ಟಿ ಸಮುದಾಯದ ರಕ್ಷಣೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಎಂದು ಎಸ್‌ಸಿ, ಎಸ್‌ಟಿ ಸಮುದಾಯ 50 ವರ್ಷಗಳಿಂದ ಹೋರಾಟ ನಡೆಸಿದ್ದರೂ ಸ್ಪಂದಿಸಿರಲಿಲ್ಲ. ಕಾಂಗ್ರೆಸ್‌ನವರಿಗೆ ಈ ಸಮುದಾಯದವರು ವಿದ್ಯಾವಂತರಾಗಿ ಉದ್ಯೋಗ ಪಡೆಯುವುದು ಬೇಕಾಗಿರಲಿಲ್ಲ. ಅವರು ಜಾಗೃತರಾದರೆ ತಮಗೆ ವೋಟ್‌ ಹಾಕುವುದಿಲ್ಲ ಎಂಬುದು ಕಾಂಗ್ರೆಸ್‌ನವರಿಗೆ ತಿಳಿದಿದ್ದರಿಂದ ಅವರನ್ನು ಬಾವಿಯೊಳಗೇ ಇಟ್ಟಿದ್ದರು’ ಎಂದು ದೂರಿದರು.

‘ಐದು ವರ್ಷಕ್ಕೆ ಒಮ್ಮೆ ಚುನಾವಣೆ ಬಂದಾಗ ಎಸ್‌ಸಿ, ಎಸ್‌ಟಿ ಸಮುದಾಯದ ಜನರಿಗೆ ಹಗ್ಗ ಕೊಟ್ಟು ಬಾವಿಯಿಂದ ಮೇಲಕ್ಕೆ ಕರೆತಂದು ವೋಟ್‌ ಹಾಕಿಸಿಕೊಂಡು ಮತ್ತೆ ಬಾವಿಯೊಳಗೇ ಬಿಡುವ ಕೆಲಸವನ್ನು ಕಾಂಗ್ರೆಸ್‌ ನಿರಂತರವಾಗಿ ಮಾಡಿದೆ. ಈ ಸಮುದಾಯದಲ್ಲಿ ಬದಲಾವಣೆ ಆಗಬೇಕು ಎಂದು ನಮ್ಮ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ಆದರೆ, ಅದಕ್ಕೂ ಕಾಂಗ್ರೆಸ್‌ ಅಪಸ್ವರ ಎತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಹಿಂದ ಪರ ಎಂದು ಹೇಳಿಕೊಂಡಿದ್ದು ಬಿಟ್ಟರೆ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಏನೂ ಮಾಡಿಲ್ಲ. ದಲಿತರ ಪರ ಎಂದು ಹೇಳುತ್ತಲೇ ಅವರ ಹಕ್ಕು, ಅಧಿಕಾರ, ಸೌಲಭ್ಯಗಳನ್ನು ಮೊಟಕುಗೊಳಿಸಿರುವ ನಿಮಗೆ ಮಾತನಾಡುವ ನೈತಿಕ ಹಕ್ಕಿಲ್ಲ. ನೀವು ಜನರನ್ನು ಭ್ರಮನಿರಸನಕ್ಕೆ ಈಡು ಮಾಡಿದ್ದೀರಿ. ಇನ್ನೆಂದೂ ನಿಮಗೆ ಅಧಿಕಾರ ಕೊಡಬಾರದು ಎಂದು ಜನ ತೀರ್ಮಾನಿಸಿದ್ದಾರೆ’ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು