ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಚುನಾವಣಾ ಕಹಳೆ| ಧಮ್ಮಿದ್ದರೆ ಕೇಸರಿ ದಿಗ್ವಿಜಯ ಯಾತ್ರೆ ತಡೆಯಲಿ: ಬೊಮ್ಮಾಯಿ

ಧಮ್ಮಿದ್ದರೆ ಕೇಸರಿ ದಿಗ್ವಿಜಯ ಯಾತ್ರೆ ತಡೆಯಲಿ– ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು
Last Updated 10 ಸೆಪ್ಟೆಂಬರ್ 2022, 19:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಲಿಷ್ಠ ನೆಲೆಯಿಲ್ಲದ ಪ್ರದೇಶದಲ್ಲಿ ‘ಜನಸ್ಪಂದನ’ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದ ಬಿಜೆಪಿ ನಾಯಕರು, 2023ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಶನಿವಾರ ಇಲ್ಲಿ ಅಧಿಕೃತವಾಗಿಚಾಲನೆ ಕೊಟ್ಟರು. 150 ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರ ಹಿಡಿಯುವ ಶಪಥವನ್ನೂ ಮಾಡಿದ ಅವರು, ತಮ್ಮ ಪಕ್ಷ ಆರಂಭಿಸಿರುವ ‘ದಿಗ್ವಿಜಯ ಯಾತ್ರೆ’ಗೆ ತಾಕತ್ತಿದ್ದರೆ ತಡೆಯೊಡ್ಡುವಂತೆ ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿರುವ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿರುವುದರ ಪ್ರಯುಕ್ತ ಸಮಾವೇಶ ಆಯೋಜಿಸಲಾಗಿತ್ತು. ‘ಇಲ್ಲಿಂದಲೇ 2023ರ ಚುನಾವಣಾ ಪ್ರಚಾರ ಆರಂಭವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಘೋಷಿಸಿದರು.

ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮೂವರೂ, ‘ಕಾಂಗ್ರೆಸ್‌ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ಆರಂಭಿಸಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸಿ ಮತ್ತೆ ವಿಧಾನಸೌಧದ ಮೂರನೇ ಮಹಡಿ ಏರಿಯೇ ತೀರುತ್ತೇವೆ’ ಎಂದು ಉದ್ಘೋಷಿಸಿದರು.

‘ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ವಿಧಾನಸಭೆಯಲ್ಲೇ ಪ್ರತಿಜ್ಞೆ ಮಾಡಿದ್ದೇನೆ. ಇನ್ನೂ ನಾಲ್ಕೈದು ಕಡೆ ಇಂತಹ ಸಮಾವೇಶ ನಡೆಸುತ್ತೇವೆ. 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

ಧಮ್ಮಿದ್ದರೆ ತಡೆಯಲಿ: ‘ರಾಜ್ಯದಲ್ಲಿ ಅಧಿಕಾರ ಹಿಡಿಯಲು ದುಷ್ಟ ಕೂಟ ನಾಟಕ ಆರಂಭಿಸಿದೆ. 2023ರ ಮೇ ತಿಂಗಳಲ್ಲಿ ಈ ದುಷ್ಟ ನಾಟಕಕ್ಕೆ ಅಂತ್ಯ ಹಾಡಬೇಕು. ಅದಕ್ಕೆ ಇಲ್ಲಿಂದಲೇ ಸಂಕಲ್ಪ ಮಾಡೋಣ. ದೊಡ್ಡಬಳ್ಳಾಪುರದಲ್ಲಿ ಆರಂಭವಾದ ಜನಸ್ಪಂದನ ಸಮಾವೇಶ ರಾಜ್ಯದ ಹಳ್ಳಿ ಹಳ್ಳಿಗಳನ್ನೂ ತಲುಪಲಿದೆ. 2023ರ ಚುನಾವಣೆಯಲ್ಲಿ ಗೆಲುವಿನೊಂದಿಗೆ ಈ ಯಾತ್ರೆ ಮುಕ್ತಾಯವಾಗಲಿದೆ. ಕಾಂಗ್ರೆಸ್‌ನವರಿಗೆಧಮ್ಮಿದ್ದರೆ, ತಾಕತ್ತಿದ್ದರೆ ನಮ್ಮ ದಿಗ್ವಿಜಯ ಯಾತ್ರೆಯನ್ನು ತಡೆಯಲಿ ನೋಡೋಣ’ ಎಂದು ಬೊಮ್ಮಾಯಿ ಸವಾಲು ಹಾಕಿದರು.

‘ಜಾತಿ, ಧರ್ಮಗಳನ್ನು ಒಡೆದು ಚುನಾವಣೆ ಗೆಲ್ಲುವ ಪ್ರಯತ್ನ ನಿಲ್ಲಿಸಿ. ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವನ್ನು ಎಲ್ಲೆಲ್ಲಿ ಇಟ್ಟಿದ್ದೀರಿಎಂಬುದೂ ಗೊತ್ತಿದೆ. ಶೀಘ್ರದಲ್ಲಿ ನಿಮ್ಮ ಬಂಡವಾಳ ಬಯಲಾಗುತ್ತದೆ. 2018ರಲ್ಲಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕಾಂಗ್ರೆಸ್‌ನ ಅಧಿಕಾರ ಲಾಲಸೆಯಿಂದ ಅವಕಾಶ ಕೈತಪ್ಪಿತ್ತು. ಮುಂದಿನ ಚುನಾವಣೆಯಲ್ಲಿ ಡಬ್ಬಲ್‌ ಎಂಜಿನ್‌ ಸರ್ಕಾರವನ್ನು ಜನ ಮತ್ತೆ ಬೆಂಬಲಿಸುತ್ತಾರೆ. ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತೇವೆ’ ಎಂದು ಹೇಳಿದರು.

‘ದೊಡ್ಡಬಳ್ಳಾಪುರದಲ್ಲಿ ಕೇಸರಿ ಸುನಾಮಿ ಎದ್ದಿದೆ. ಅದು ಇಡೀ ರಾಜ್ಯವನ್ನು ವ್ಯಾಪಿಸಿಕೊಂಡಿದೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ದಿಗ್ವಿಜಯ ಆರಂಭವಾಗಿದೆ. 150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ಖಚಿತ’ ಎಂದು ನಳಿನ್‌ ಕುಮಾರ್‌ ಕಟೀಲ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT