ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ಘೇಂಡಾಮೃಗ ಚರ್ಮದ್ದು: ಸಿದ್ದರಾಮಯ್ಯ ವಾಗ್ದಾಳಿ

Last Updated 11 ಡಿಸೆಂಬರ್ 2020, 15:32 IST
ಅಕ್ಷರ ಗಾತ್ರ

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ‘ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಎಮ್ಮೆ ಚರ್ಮದ್ದಲ್ಲ, ಘೇಂಡಾಮೃಗ ಚರ್ಮದ್ದು. ರೈತರ ಮತ್ತು ಸಾಮಾನ್ಯ ಜನರ ಕಷ್ಟ–ಸುಖ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಅನ್ನದಾತರ ಬಗ್ಗೆ ಈ ರೀತಿ ನಿರ್ಲಕ್ಷ್ಯ ತೋರಬಾರದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಶಿಕಾರಿಪುರ ತಾಲ್ಲೂಕಿನ ಏತ ನೀರಾವರಿ ಯೋಜನೆ ಉದ್ದೇಶಕ್ಕಾಗಿ ರಟ್ಟೀಹಳ್ಳಿ ತಾಲ್ಲೂಕಿನ ರೈತರ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ‘ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಇದೇ ಜಿಲ್ಲೆಯವರಾದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರೈತರ ಅಹವಾಲು ಆಲಿಸಲು ಬಂದಿಲ್ಲ ಎಂದರೆ ಅಷ್ಟರಮಟ್ಟಿಗೆ ಅವರು ನಿರ್ಲಿಪ್ತ ಆಗಿದ್ದಾರೆ. ಕೃಷಿ ಕೆಲಸ ಮಾಡದೇ ಇರೋರು ಪದೇ ಪದೇ ‘ನಾನು ರೈತನ ಮಗಾ’ ಅಂತ ಹೇಳಿಕೊಳ್ಳುತ್ತಿದ್ದಾರೆ. ಈಗ ಅದನ್ನು ಬಿ.ಸಿ.ಪಾಟೀಲ ಶುರು ಮಾಡಿಕೊಂಡಿದ್ದಾನೆ. ಪೊಲೀಸ್‌ ಆಗಿದ್ದ ಗಿರಾಕಿ ಈಗ ಹಸಿರು ಶಾಲು ಹಾಕಿಕೊಂಡು ತಿರುಗುತ್ತಾ ಇದ್ದಾನೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪನವರೇ ತಾವು ರೈತನ ಮಗ ಅಂತ ಹೇಳುತ್ತೀರಾ. ಆದರೂ ರೈತರ ಸಮಸ್ಯೆ ಏನು ಎಂದು ಕೇಳಿಲ್ಲ. ನಾನು ಎಷ್ಟು ಅಂತ ಪತ್ರ ಬರೆಯಲಿ. ನೀವು ಉತ್ತರವನ್ನೇ ಕೊಡಲ್ಲ. ಜನರ ಕಷ್ಟಕ್ಕೆ ಸ್ಪಂದಿಸದ ನೀವು ಅಧಿಕಾರದಲ್ಲಿ ಇರುವುದಕ್ಕೆ ನಾಲಾಯಕ್‌. ಐದು ಕೆ.ಜಿ. ಅಕ್ಕಿಯನ್ನು ಏಕೆ ಕೊಟ್ಟೆ. ನಿಮ್ಮಪ್ಪನ ಮನೆಯಿಂದ ಕೊಡ್ತಿಯಾ?. ನಾನು ಕೂಡ ನಮ್ಮಪ್ಪನ ಮನೆಯಿಂದ ಕೊಟ್ಟಿರಲಿಲ್ಲ. ಜನರ ತೆರಿಗೆ ಹಣದಿಂದ ಕೊಟ್ಟಿದ್ದು’ ಎಂದು ಸಿ.ಎಂ. ಅವರನ್ನು ಜರಿದರು.

‘ಜನರಿಗೆ ಅನುಮಾನ ಬರೋಕೆ ಶುರು ಆಗಿದೆ. ಶಿಕಾರಿಪುರ ನೀರಾವರಿ ಯೋಜನೆ ಅವಶ್ಯವೇ? ಅಥವಾ ಇಲ್ಲವೇ? ಎಂಬ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಅಗತ್ಯ ಇಲ್ಲದಿದ್ದರೂ ಯಾಕೆ ಸರ್ಕಾರದವರು ಹಠಕ್ಕೆ ಬಿದ್ದಿದ್ದಾರೆ. ತುಂಗಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ. ಅನ್ನದಾತರು ಕಷ್ಟದಲ್ಲಿದ್ದಾರೆ ಎಂದು ಮುಖ್ಯಮಂತ್ರಿಗೆ ಹೇಳ್ತಿನಿ. ರೈತರಿಗೆ ನ್ಯಾಯ ಒದಗಿಸಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT