ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನದಿಂದ ಈಶ್ವರಪ್ಪ ವಜಾಕ್ಕೆ ಆಗ್ರಹ

ಕೊಲೆ ಪ್ರಕರಣ ದಾಖಲಿಸಿ, ಬಂಧಿಸಲು ಕಾಂಗ್ರೆಸ್ ಒತ್ತಾಯ
Last Updated 12 ಏಪ್ರಿಲ್ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ನೇರವಾಗಿ ಆರೋಪಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಈಶ್ವರಪ್ಪ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು. ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊಲೆ ಆರೋಪ ಎದುರಿಸುತ್ತಿರುವ ಈಶ್ವರಪ್ಪ ಸಚಿವ ಸಂಪುಟದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಕಾಶ ನೀಡಬಾರದು’ ಎಂದರು.

‘ಆದರೆ, ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿಲ್ಲ. ಈ ಬಗ್ಗೆ ನಾವು ಧ್ವನಿ ಎತ್ತುತ್ತೇವೆ. ಈಶ್ವರಪ್ಪ ಹೇಳಿಕೆಗೆ ನಾವು ಮಹತ್ವ ನೀಡುವುದಿಲ್ಲ. ಅವರೊಬ್ಬ ಕೊಲೆ ಆರೋಪ ಹೊತ್ತಿರುವ ವ್ಯಕ್ತಿ. ಅವರು ಎಷ್ಟು ದೊಡ್ಡ ಭ್ರಷ್ಟ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ’ ಎಂದರು.

‘ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಾಟೀಲ ಆತ್ಮಹತ್ಯೆಯು ಭ್ರಷ್ಟಾಚಾರ ಪ್ರಕರಣ. ಈಶ್ವರಪ್ಪ ಅವರಿಗೆ ಸಂತೋಷ್ ಪಾಟೀಲ ಈಗಾಗಲೇ ಕಮಿಷನ್ ನೀಡಿದ್ದಾರೆ. ಬಾಕಿ ಬಿಲ್‌ ಬಿಡುಗಡೆ ಮಾಡಲು ಸಚಿವರು ಹೆಚ್ಚಿನ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಆ ಹಣ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದರು. ‘ಆತ್ಮಹತ್ಯೆಗೆ ಶರಣಾಗುವ ಮುನ್ನ ಆತ ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಆರೋಪ ಮಾಡಿರುವುದರಿಂದ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಸ್ವಂತ ಕಾರ್ಯಕರ್ತನನ್ನೇ ಬಿಡದೆ ಬಿಜೆಪಿಯಿಂದ ಭ್ರಷ್ಟಾಚಾರ’

ಬೆಂಗಳೂರು: ‘ಕರ್ನಾಟಕದ ಬಿಜೆಪಿ ಸರ್ಕಾರ, ತನ್ನ ಕಾರ್ಯಕರ್ತನನ್ನು ಬಿಡದಿರುವ ಮಟ್ಟಿಗೆ ಭ್ರಷ್ಟಾಚಾರ ಮಾಡುತ್ತಿದೆ. ಸಂತೋಷ್ ಪಾಟೀಲ ಮಾಡಿರುವ ಆರೋಪ ಇದಕ್ಕೆ ಸಾಕ್ಷಿ’ ಎಂದುರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.

‘ಶೇ 40 ಕಮಿಷನ್ ಆರೋಪ ಸಚಿವ ಈಶ್ವರಪ್ಪ ವಿರುದ್ಧ ಮಾತ್ರ ಕೇಳಿಬಂದಿಲ್ಲ. ಇಡೀ ರಾಜ್ಯ ಸರ್ಕಾರದ ವಿರುದ್ಧವೇ ಕೇಳಿ ಬಂದಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಅಡಿಯಿಂದ ಮುಡಿಯವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಆರೋಪಿಸಿದರು.

‘ಈ ಭ್ರಷ್ಟ ಸರ್ಕಾರ ತನ್ನ ಕಾರ್ಯಕರ್ತರನ್ನೇ ಬಿಟ್ಟಿಲ್ಲ ಎಂದಾದರೆ ಜನಸಾಮಾನ್ಯರನ್ನು ಯಾವ ಮಟ್ಟಿಗೆ ಲೂಟಿ ಮಾಡುತ್ತಿರಬಹುದು. ಸರ್ಕಾರ ವಿರುದ್ಧ ಶೇ 40 ಕಮಿಷನ್ ಆರೋಪ ಕೇಳಿಬಂದಾಗ ಬೊಮ್ಮಾಯಿ ಮೌನಕ್ಕೆ ಶರಣಾದರು. ಕ್ರಮ ಕೈಗೊಳ್ಳಲು ಅಮಿತ್ ಶಾ ನಿರಾಕರಿಸಿದರು. ಪ್ರಧಾನಿಯಂತೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅದರ ಪರಿಣಾಮ ಅಂತಿಮವಾಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿದ್ದು, ಇದೊಂದು ಭ್ರಷ್ಟಾಚಾರ, ಕೊಲೆ ಪ್ರಕರಣ’ ಎಂದರು.

ಮುಖ್ಯಮಂತ್ರಿ ಯಾರನ್ನೂ ರಕ್ಷಿಸಬಾರದು– ಡಿಕೆಶಿ

ಬೆಂಗಳೂರು: ‘‌ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಯಾರ ರಕ್ಷಣೆಯನ್ನೂ ಮಾಡಬಾರದು. ಕೇವಲ ಮೌಖಿಕವಾಗಿ ತನಿಖೆ ಮಾಡುತ್ತೇವೆ, ಸತ್ಯಾಂಶ ತಿಳಿಯುತ್ತೇವೆ ಎಂದು ಕಾಲಹರಣ ಮಾಡಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ಇದು ಕೇವಲ ಆತ್ಮಹತ್ಯೆಯಲ್ಲ. ಕೊಲೆ ಪ್ರಕರಣ. ತನ್ನ ಸಾವಿಗೆ ಕಾರಣ ಯಾರು ಎಂಬುದನ್ನು ಸಂತೋಷ್ ಪಾಟೀಲ ಮರಣಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಕಾನೂನು ಯಾವ ರೀತಿ ಜಾರಿಗೆ ತರಲಾಗುತ್ತದೆ ಎಂಬುದಷ್ಟೇ ಈಗ ಉಳಿದಿರುವ ವಿಚಾರ’ ಎಂದರು.

‘ಈ ಹಿಂದೆ ಕೆಲವು ಸಚಿವರ ವಿರುದ್ಧದ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿ ‘ಬಿ’ ರಿಪೋರ್ಟ್ ಹಾಕಿ ರಕ್ಷಣೆ ಮಾಡಿದೆ. ಈ ಪ್ರಕರಣದಲ್ಲಿ ಆ ರೀತಿ ಮಾಡಬಾರದು. ಇಂಥ ಪ್ರಕರಣಗಳಲ್ಲಿ ಹಿಂದೆ ಅನೇಕ ಸಚಿವರುಗಳ ರಾಜೀನಾಮೆ ಪಡೆಯಲಾಗಿದೆ. ಆರೋಪ ಹೊತ್ತಿರುವ ಸಚಿವನ ವಿರುದ್ದ ಪ್ರಕರಣ ದಾಖಲಿಸಿ, ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT