ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಕಾಂಗ್ರೆಸ್‌ನ ಬದ್ಧತೆ ಪ್ರಶ್ನಿಸಿದ ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ವಿರುದ್ಧ ಟ್ವಿಟರ್‌ನಲ್ಲಿ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ಹಲವು ಪ್ರಶ್ನೆಗಳನ್ನುಮುಂದಿಡುವ ಮೂಲಕ, ಸ್ತ್ರೀ ಸಬಲೀಕರಣ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ವಿಚಾರವಾಗಿ ಕಾಂಗ್ರೆಸ್‌ನ ಬದ್ದತೆಯನ್ನು ಪ್ರಶ್ನಿಸಿದೆ.

#ನಕಲಿಗಾಂಧಿಸ್ಟ್ಯಾಂಪ್ ಟ್ಯಾಗ್‌ ಬಳಸಿಸರಣಿ ಟ್ವೀಟ್‌ ಮಾಡಿರುವ 'ಬಿಜೆಪಿ ಕರ್ನಾಟಕ', 'ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವುದನ್ನೇ ಟೀಕಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಅಂಗಪಕ್ಷಗಳು ಬಯಲಿನಲ್ಲಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿವೆ.ಒಬ್ಬ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ನಿಮಗೇಕೆ ಸಹಿಸಲಾಗುತ್ತಿಲ್ಲ?' ಎಂದು ಕೇಳಿದೆ.

'ದೇಶದ ಅತ್ಯುನ್ನತ ಪದವಿಗೆ ಏರುತ್ತಿರುವ ಮೊದಲ ಬುಡಕಟ್ಟು ಮಹಿಳೆಯಾಗಿ ದ್ರೌಪದಿ ಮುರ್ಮು ಅವರು ಗುರುತಿಸಿಕೊಳ್ಳಲಿದ್ದಾರೆ.ಬಿಜೆಪಿ ವಿರುದ್ಧ ಯೋಜಿತ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಎಡಪಂಥೀಯ ಬುದ್ಧಿಜೀವಿಗಳಿಗೆ ಈಗ ಅಸ್ತಿತ್ವದ ಚಿಂತೆ ಮೂಡುತ್ತಿದೆಯೇ? ಎಂದು ಪ್ರಶ್ನಿಸಿದೆ.

''ಮೆ ಲಡ್ಕಿ ಹೂ, ಲಡ್ ಸಕ್ತಿ ಹೂ'(ನಾನು ಹೆಣ್ಣು, ನಾನು ಹೋರಾಡಬಲ್ಲೆ) ಎಂದು ಮಹಿಳೆಯರ ಪರವಾಗಿ ಹೂಂಕರಿಸಿದ್ದ ಕಾಂಗ್ರೆಸ್‌ ಪಕ್ಷ, ಮಹಿಳೆಯರಿಗೆ ಆದ್ಯತೆಯನ್ನೇ ನೀಡಲಿಲ್ಲ.ಬಿಜೆಪಿ ಮಹಿಳಾ ಸಬಲೀಕರಣಕ್ಕೆ ಬದ್ದವಾಗಿದೆ. ಆ ಕಾರಣದಿಂದಲೇ ವನವಾಸಿ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿದ್ದೇವೆ.ಈ ಬದ್ಧತೆ ವಿಪಕ್ಷಗಳಲ್ಲಿ ಸಾಧ್ಯವೇ?' ಎಂದು ಮತ್ತೊಂದು ಪ್ರಶ್ನೆ ಹಾಕಿದೆ.

'ಅಬ್ದುಲ್ ಕಲಾಂ, ರಾಮನಾಥ್ ಕೊವಿಂದ್ ಹಾಗೂ ದ್ರೌಪದಿ ಮುರ್ಮು ಎಲ್ಲರೂ ಎನ್‌ಡಿಎ ಆಯ್ಕೆ. ಇಂತಹ ಮಹನೀಯರ ಬಗ್ಗೆ ಯೋಚಿಸಲೂ ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಿಲ್ಲ.ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಮುರ್ಮು ಅವರ ಆಯ್ಕೆಯನ್ನೂ ಕಾಂಗ್ರೆಸ್ ರಬ್ಬರ್ ಸ್ಟ್ಯಾಂಪ್ ಎಂದಿರುವುದು ಅಕ್ಷಮ್ಯ.ಕಾಂಗ್ರೆಸ್ 'ನಕಲಿ ಗಾಂಧಿ ಸ್ಟ್ಯಾಂಪ್' ಅಲ್ಲವೇ? ಎಂದೂ ಕುಟುಕಿದೆ.

ಮುಂದುವರಿದು,ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಿದ್ದಾಗ ಮೂರು ಬಾರಿ ರಾಷ್ಟ್ರಪತಿ ಚುನಾವಣೆ ನಡೆಸುವ ಅವಕಾಶ ಲಭಿಸಿದೆ ಎಂದಿರುವ ಬಿಜೆಪಿ,ಮುಸ್ಲಿಂ ಸಮುದಾಯದಅಬ್ದುಲ್ ಕಲಾಂ,ದಲಿತ ಸಮುದಾಯದರಾಮನಾಥ್ ಕೋವಿಂದ್‌ ಹಾಗೂಬುಡಕಟ್ಟು ಮಹಿಳೆದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದ್ದೇವೆ.ಈ ಆಯ್ಕೆಗಳು ಕಾಂಗ್ರೆಸ್ ಪಕ್ಷಕ್ಕೆ ಏಕೆ ಕಹಿಯಾಗುತ್ತಿದೆ? ಎಂದು ತಿವಿದಿದೆ.

'ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿಸುವ ವ್ಯಕ್ತಿಗಳು ರಬ್ಬರ್‌ ಸ್ಟ್ಯಾಂಪ್ ಎಂದು ಕಾಂಗ್ರೆಸ್ ಒರಟು ವಾದ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟ್ಯಾಂಪ್ ಅಲ್ಲದೆ ಮತ್ತೇನು?' ಎಂದು ಕೇಳಿದೆ.

'ದೇಶದ ಮೇಲೆ ಇಂದಿರಾ ತುರ್ತು ಪರಿಸ್ಥಿತಿ ಹೇರಿದಾಗ ಆಗಿನ ರಾಷ್ಟ್ರಪತಿಗಳು ವರ್ತಿಸಿದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ.ಯಾರು ಯಾರನ್ನು ರಬ್ಬರ್‌ ಸ್ಟ್ಯಾಂಪ್‌ ಮಾಡಿಕೊಂಡಿದ್ದರು ಎಂಬುದನ್ನು ಈ ಘಟನೆಯೊಂದರಿಂದಲೇ ತಿಳಿಯಬಹುದು.ಅಂದು ರಾಷ್ಟ್ರಪತಿಯನ್ನು ಹೇಗೆ ನಡೆಸಿಕೊಳ್ಳಲಾಯ್ತು ಎಂಬುದನ್ನು ನೆನಪಿಸಬೇಕೇ?' ಎಂದೂ ಚಾಟಿ ಬೀಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT