ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಹೇಳಿಕೆ ವಿವಾದ: ಮಾತಿಗೆ ಈಗಲೂ ಬದ್ಧ ಎಂದ ಸತೀಶ, ಬಿಜೆಪಿ ಪ್ರತಿಭಟನೆ ಇಂದು

Last Updated 8 ನವೆಂಬರ್ 2022, 19:58 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂ ಪದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆ ವಾದ–ವಿವಾದದ ಹುಯಿಲೆಬ್ಬಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಮುಖಂಡರು ಏಕಧ್ವನಿಯಲ್ಲಿ ಈ ಹೇಳಿಕೆಯನ್ನು ಟೀಕಿಸಿದ್ದರೆ, ಅದೇ ಮಾದರಿಯ ನಿಲುವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಾಳಿದ್ದಾರೆ. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಜಾರಕಿಹೊಳಿ ಬೆನ್ನಿಗೆ ನಿಂತಿದ್ದಾರೆ. ಜಾರಕಿಹೊಳಿ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕರು ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜಾರಕಿಹೊಳಿ ಹೇಳಿಕೆ ಖಂಡಿಸಿ ಬುಧವಾರ(ನ.9) ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.

‘ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’
ಬೆಳಗಾವಿ: ‘ನಾನು ಯಾರ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ಹಿಂದೂ ಪದದ ಬಗ್ಗೆ ನಾನು ಹೇಳಿದ್ದರಲ್ಲಿ ತಪ್ಪಿದೆ ಎಂದು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಯಾರೇ ಬಹಿರಂಗ ಚರ್ಚೆಗೆ ಬಂದರೂ ನಾನು ಸಿದ್ಧ. ಬೇಕಿದ್ದರೆ ರಾಜ್ಯ ಸರ್ಕಾರವೇ ಒಂದು ಸಮಿತಿ ರಚನೆ ಮಾಡಿ, ತನಿಖೆ ನಡೆಸಲಿ’ ಎಂದು ಸತೀಶ ಜಾರಕಿಹೊಳಿ ಸವಾಲು ಹಾಕಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚರ್ಚೆಯಿಂದ ಕಾಂಗ್ರೆಸ್ಸಿನಲ್ಲಿ ನಾನು ಏಕಾಂಗಿ ಆಗುವ ಪ್ರಶ್ನೆಯೇ ಇಲ್ಲ. ನನ್ನದೇ ಆದ ಪಡೆ ಇದೆ. ನಾನು ಹೇಗೆ ವೈರಲ್‌ ಮಾಡುತ್ತೇನೆ ನೋಡಿ’ ಎಂದೂ ಅವರು ಹೇಳಿದರು.

‘ಹಿಂದೂ ಎಂಬ ಪದವು ಪರ್ಷಿಯನ್‌ ಮೂಲದ್ದು ಎಂಬ ಮಾತಿಗೆ ನಾನು ಈಗಲೂ ಬದ್ಧ. 1963ರಲ್ಲಿ ಒಂದು ಶಬ್ದಕೋಶ ಹೊರತರಲಾಗಿದೆ. ಅದರಲ್ಲಿ ಹಿಂದೂ ಪದಕ್ಕೆ ಅಶ್ಲೀಲ ಅರ್ಥಗಳನ್ನು ನೀಡಲಾಗಿದೆ ಎಂದು ನಾನು ಹೇಳಿದ್ದೇನೆ’ ಎಂದರು.

‘ನಾನೇನು ಈ ಪದದ ಅರ್ಥ ಕಂಡುಹಿಡಿದಿಲ್ಲ. ಹಿಂದೆ ಹಲವರು ಬರೆದಿದ್ದನ್ನೇ ಉಚ್ಚರಿಸಿದ್ದೇನೆ’ ಎಂದು ಹೇಳಿದರು.

‘ಶಬ್ದಕೋಶ ಯಾವುದು, ಯಾರು ಬರೆದಿದ್ದು?’ ಎಂಬ ಪ್ರಶ್ನೆಗೆ ‘ನೀವೇ ಹುಡುಕಿ ನೋಡಿ, ಸಿಗುತ್ತದೆ’ ಎಂದರು.

‘ಹಿಂದೂ ಪದದ ಬಗ್ಗೆ ಸಾಕಷ್ಟು ವರ್ಷಗಳಿಂದ ಚರ್ಚೆ ಇದೆ. ಅದನ್ನು ಸಂಬಂಧಿಸಿದವರೇ ಮುಂದೆ ಬಂದು ಸರಿ–ತಪ್ಪನ್ನು ಹೇಳಬೇಕಿತ್ತು. ಅವರಿಗೆ ಸಂಬಂಧಿಸಿದ್ದನ್ನು ನಾನು ಹೇಳಿದ್ದೇನೆ. ಇದಕ್ಕೆ ಅವರು ಕೃತಜ್ಞತೆ ಸಲ್ಲಿಸಬೇಕಿತ್ತು. ಆದರೆ, ಅನಗತ್ಯ ವಿವಾದ ಮಾಡುತ್ತಿದ್ದಾರೆ’ ಎಂದೂ ಹೇಳಿದರು.

‘ಅರ್ಧಂಬರ್ಧ ಓದಿಕೊಂಡು ಮಾತಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಯಡಿಯೂರಪ್ಪ ಹೇಳಿದ್ದಾರಂತೆ. ನನ್ನ ಬಳಿ ಪೂರ್ಣ ದಾಖಲೆಗಳಿವೆ, ಪೂರ್ಣ ಓದಿಕೊಂಡೇ ಮಾತನಾಡಿದ್ದೇನೆ’ ಎಂದರು.

‘ನಡೆದ ಸಂಗತಿಯ ಬಗ್ಗೆ ಪಕ್ಷದ ಮುಖಂಡರು ವಿಚಾರಿಸಿದ್ದಾರೆ. ಪಕ್ಷದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರೂ ಕೇಳಿದರು. ನನ್ನ ನಿಲುವನ್ನು ಅವರಿಗೂ ಸ್ಪಷ್ಟಪಡಿಸಿದ್ದೇನೆ. ಇದು ನನ್ನ ವೈಯಕ್ತಿಕ ಕಾರ್ಯಕ್ರಮದಲ್ಲಿ ನಡೆದ ಚರ್ಚೆ, ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಹಾಗಾಗಿ, ಪಕ್ಷಕ್ಕೆ–ಚುನಾವಣೆಗೆ ಇದು ಸಂಬಂಧವಿಲ್ಲ’ ಎಂದರು.

‘ನೀವು ಯಾವ ಧರ್ಮದವರು?’ ಎಂಬ ಪ್ರಶ್ನೆಗೆ, ‘ನಾನು ಭಾರತೀಯ’ ಎಂದರು.

‘ಸತೀಶಗೆ ಸ್ಪಷ್ಟೀಕರಣ ಕೇಳುವೆ’
ಸತೀಶ ಜಾರಕಿಹೊಳಿ ಹೇಳಿಕೆ ವೈಯಕ್ತಿಕವಾದುದು. ಅದನ್ನು ಪಕ್ಷ ತಳ್ಳಿ ಹಾಕುತ್ತದೆ. ಈ ಬಗ್ಗೆ ಅವರಿಂದ ಸ್ಪಷ್ಟೀಕರಣ ಪಡೆಯಲಾಗುವುದು. ಸತೀಶ ಅವರ ಹೇಳಿಕೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ನಾನೂ ಹಿಂದೂ ಧರ್ಮದವನು. ನಮಗೆ ನಮ್ಮದೇ ಆದ ಇತಿಹಾಸವಿದೆ. ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವುದು ಖಂಡನೀಯ.
-ಡಿ.ಕೆ. ಶಿವಕುಮಾರ್,ಕೆಪಿಸಿಸಿ ಅಧ್ಯಕ್ಷ

*
ಹಿಂದೂ ಪದದ ಕುರಿತು ಸತೀಶ ಜಾರಕಿಹೊಳಿ ಹೇಳಿಕೆ ಕುರಿತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನೀಡಿರುವ ಹೇಳಿಕೆಯೇ ನನ್ನ ನಿಲುವು ಕೂಡ ಆಗಿದೆ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಸತೀಶ ಜಾರಕಿಹೊಳಿ ಅವರು ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳಿಂದ ರಾಜಕೀಯ ಆರಂಭಿಸಿದವರು. ಹಿಂದೂ ಪದದ ಹೇಳಿಕೆ ಅವರ ವೈಯಕ್ತಿಕ. ಮಾನವ ಬಂಧುತ್ವ ವೇದಿಕೆಯ ಮೂಲಕ ಮೌಢ್ಯಾಚರಣೆ ವಿರುದ್ಧ ಜಾಗೃತಿ ನಡೆಸುತ್ತಿದ್ದಾರೆ. ವೈಚಾರಿಕ ವಿಷಯಗಳನ್ನು ಅವರು ಜನರಿಗೆ ತಲುಪಿಸುತ್ತಿದ್ದಾರೆ. ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವೇ ಇಲ್ಲ ಎಂದು ಸಾವರ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ.ಹಿಂದೂ ಧರ್ಮ ಬಿಜೆಪಿಯ ಗುತ್ತಿಗೆಯಲ್ಲ.
-ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

*
ಹಿಂದೂಗಳ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿರುವ ಜಾರಕಿಹೊಳಿ ಜನರ ಕ್ಷಮೆ ಕೇಳಬೇಕು. ಹಿಂದೂಗಳ ವಿರುದ್ಧ ಮಾತನಾಡುವುದು ಸಾಧನೆಯಲ್ಲ; ಅಕ್ಷ್ಯಮ್ಯ ಅಪರಾಧ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

*
ಹಿಂದುತ್ವದ ವಿರುದ್ಧ ಜಾರಕಿಹೊಳಿ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ‘ಸ್ವಾಭಿಮಾನಿ ಹಿಂದೂ ಅಭಿಯಾನ ಆರಂಭಿಸಲಾಗುವುದು. ಈ ವಿಚಾರವನ್ನು ಜನರ ಬಳಿಗೆ ಕೊಂಡೊಯ್ದು ಪ್ರತಿಭಟನೆ ನಡೆಸುತ್ತೇವೆ.
-ವಿ.ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT