ಮಂಗಳವಾರ, ಜುಲೈ 5, 2022
27 °C
ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ

ಬಿಜೆಪಿ ಪ್ರಮುಖರ ಸಭೆ: ಮಸ್ಕಿಯಲ್ಲಿ ‘ಕಮಲ’ ಹಿಡಿದಿರುವ ಪಾಟೀಲರಿಗೆ ಟಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ತ್ಯಜಿಸಿ ಬಂದಿರುವ ಪ್ರತಾಪ್‌ಗೌಡ ಪಾಟೀಲ ಅವರಿಗೇ ಮಸ್ಕಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡಲು ಬಿಜೆಪಿ ಪ್ರಮುಖರ ಸಭೆ ತೀರ್ಮಾನಿಸಿದ್ದು, ಅವರ ಹೆಸರನ್ನು ಮಾತ್ರ ಹೈಕಮಾಂಡ್‌ಗೆ ಶಿಫಾರಸು ಮಾಡಲಿದೆ.

ಆದರೆ, ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ಸಂಭವನೀಯ ಹೆಸರುಗಳನ್ನು ಕಳುಹಿಸಿಕೊಡುವ ಹೊಣೆಯನ್ನು ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ವಹಿಸಲಾಗಿದೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ ಬಿಜೆಪಿ ಪ್ರಮುಖರ ಸಭೆಯಲ್ಲಿ ಏ. 17ರಂದು ನಡೆಯಲಿರುವ ಈ ಮೂರೂ ಕ್ಷೇತ್ರಗಳ ಉಪ ಚುನಾವಣೆ, ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಪ್ರತಾಪ್ ಗೌಡ ಪಾಟೀಲರಿಗೆ ಟಿಕೆಟ್ ನೀಡಬೇಕು. ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಸ್ತಾಪಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ. ಆದರೆ ಬೆಳಗಾವಿ ಮತ್ತು ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಸ್ಥಳೀಯ ನಾಯಕರ ಜೊತೆ ಮತ್ತೊಮ್ಮೆ ಚರ್ಚಿಸಿದ ಬಳಿಕ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ಪಕ್ಷದ ಮೂಲಗಳು ಹೇಳಿವೆ.

ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಬೆಳಗಾವಿ ಲೋಕ ಸಭೆ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಿದ್ದೇವೆ’ ಎಂದರು.

‘ಮಸ್ಕಿ ಕ್ಷೇತ್ರದ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ನ್ಯಾಯ ಕೊಡಬೇಕಾಗಿದೆ. ಎರಡು ವರ್ಷದ ಅವರ ಅಜ್ಞಾನವಾಸಕ್ಕೆ ಮುಕ್ತಿ ಕೊಡಬೇಕಿದೆ’ ಎನ್ನುವ ಮೂಲಕ ಪ್ರತಾಪ್‌ಗೌಡ ಪಾಟೀಲ ಅವರ ಹೆಸರನ್ನು ಮಾತ್ರ ಮಸ್ಕಿಯಿಂದ ಕಳುಹಿಸಿಕೊಡಲಾಗುವುದು ಎಂದು ಪರೋಕ್ಷವಾಗಿ ಹೇಳಿದರು.

‘ಸ್ಥಳೀಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆಯಾ ಕ್ಷೇತ್ರಗಳಲ್ಲಿರುವ ಪ್ರಮುಖರ ಜೊತೆಗೆ ಸಮಾಲೋಚಿಸಿ, ಬಳಿಕ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಕಳುಹಿಸಿ ಕೊಡುವ ಅಧಿಕಾರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ವಹಿಸಲಾಗಿದೆ’ ಎಂದರು.

‘ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಗೆ ಕ್ಷೇತ್ರಗಳ ಮೀಸಲಾತಿ ಕುರಿತು ಚರ್ಚೆ ನಡೆಸಲಾಗಿದೆ. ರಾಜ್ಯ ರಾಜಕಾರಣದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಏಪ್ರಿಲ್ 6ಕ್ಕೆ ಪಕ್ಷ ಸ್ಥಾಪನೆಯಾಗಿ 41 ವರ್ಷ ಆಗಲಿದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ಸಂಘಟನಾತ್ಮಕ ಕಾರ್ಯಕ್ರಮವನ್ನು ಯಾವ ರೀತಿ ಆಯೋಜಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ’ ಎಂದರು.

‘ಪ್ರಮುಖರ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿ.ಡಿ ವಿಚಾರದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,ಸಭೆಯಲ್ಲಿ ಅದರ ಬಗ್ಗೆ ಚರ್ಚೆಯೂ ಆಗಿಲ್ಲ’ ಎಂದ ಸಿ.ಟಿ. ರವಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ. ಅರುಣಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಲ್ಹಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ ಶೆಟ್ಟರ್ ಸಭೆಯಲ್ಲಿದ್ದರು. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ನಿತರರಾಗಿರುವ ಸಚಿವ ಅರವಿಂದ ಲಿಂಬಾವಳಿ, ಗ್ರಾಮ ವಾಸ್ತವ್ಯಕ್ಕೆ ತೆರಳಿರುವ ಕಂದಾಯ ಸಚಿವ ಆರ್‌. ಅಶೋಕ್, ಕೆ.ಎಸ್. ಈಶ್ವರಪ್ಪ, ಸಿ.ಎಂ. ಉದಾಸಿ ಗೈರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು