ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಮನೆಗೆ ಚಡ್ಡಿ ಹೊತ್ತು ತಂದವರು ಪೊಲೀಸ್‌ ವಶಕ್ಕೆ

Last Updated 7 ಜೂನ್ 2022, 15:19 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌ಎಸ್‌ಎಸ್‌ ಚಡ್ಡಿ ಸುಡುವ ಆಂದೋಲನಕ್ಕೆ ಕರೆ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಗೆ ಪಕ್ಷದ ಕಾರ್ಯಕರ್ತರಿಂದ ಸಂಗ್ರಹಿಸಿದ್ದ ಚಡ್ಡಿಗಳನ್ನು ತಲುಪಿಸಲು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಮೆರವಣಿಗೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಸಿದ್ದರಾಮಯ್ಯ ಹೇಳಿಕೆಯನ್ನು ವಿರೋಧಿಸಿ ಅವರಿಗೆ ಕಳುಹಿಸಲು ಚಡ್ಡಿಗಳನ್ನು ಸಂಗ್ರಹಿಸುವಂತೆ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ನಾರಾಯಣ ಸ್ವಾಮಿ, ಮೋರ್ಚಾ ಸದಸ್ಯರಿಗೆ ಕರೆ ನೀಡಿದ್ದರು. ಸಂಗ್ರಹಿಸಿದ್ದ ಚಡ್ಡಿಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ತುಂಬಿ ತಲೆಮೇಲೆ ಹೊತ್ತು ಕುಮಾರಕೃಪಾ ರಸ್ತೆಯ ಮಾರ್ಗವಾಗಿ ಸಿದ್ದರಾಮಯ್ಯ ಅವರ ಅಧಿಕೃತ ನಿವೇಶನದತ್ತ ಬರುತ್ತಿದ್ದ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದರು. ಎಲ್ಲರನ್ನೂ ವಾಹನದಲ್ಲಿ ಕರೆದೊಯ್ದು, ಕೆಲಕಾಲದ ಬಳಿಕ ಬಿಡುಗಡೆ ಮಾಡಿದರು.

‘ಚಡ್ಡಿ ತೊಡುವವರು ಮತ್ತು ಚಡ್ಡಿ ತಯಾರಿಸುವವರನ್ನು ಸಿದ್ದರಾಮಯ್ಯ ಅವಮಾನಿಸಿದ್ದರು. ಅದನ್ನು ಪ್ರತಿಭಟಿಸಿ ಸಾಂಕೇತಿಕವಾಗಿ ಅವರಿಗೆ ಚಡ್ಡಿಗಳನ್ನು ತಲುಪಿಸಲು ಪ್ರಯತ್ನಿಸಿದ್ದೆವು. ಕಾಂಗ್ರೆಸ್‌ ಎಲ್ಲವನ್ನೂ ಕಳೆದುಕೊಂಡಿದೆ. ಈಗ ಆ ಪಕ್ಷದವರು ಚಡ್ಡಿ ಸುಡುವ ಮೂಲಕ ಮತ್ತಷ್ಟು ಬೆತ್ತಲಾಗುತ್ತಿದ್ದಾರೆ’ ಎಂದು ನಾರಾಯಣ ಸ್ವಾಮಿ ಹೇಳಿದರು.

‘ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಚಡ್ಡಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸುತ್ತಿಲ್ಲ. ಆರ್‌ಎಸ್‌ಎಸ್‌ ಕಾರ್ಯಕರ್ತರು ಚಡ್ಡಿಯ ಬದಲಿಗೆ ಪ್ಯಾಂಟ್‌ ಧರಿಸಲು ಆರಂಭಿಸಿ ಹಲವು ವರ್ಷಗಳಾಗಿವೆ. ಚಡ್ಡಿ ಧರಿಸುವವರು ಹಿಂದೆ ಸೇನೆಯಲ್ಲಿ, ಪೊಲೀಸ್‌ ಇಲಾಖೆಯಲ್ಲಿ ಇದ್ದರು. ರೈತರೂ ಚಡ್ಡಿ ಧರಿಸುತ್ತಾರೆ. ಈ ವಿಷಯವನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT