ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕುಟುಂಬದವರೇ ಹಾವು, ಚೇಳು: ಯತ್ನಾಳ 

Last Updated 15 ಫೆಬ್ರುವರಿ 2021, 20:31 IST
ಅಕ್ಷರ ಗಾತ್ರ

ವಿಜಯಪುರ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನೆಯವರೇ ಹಾವು, ಚೇಳಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತ, ಮುಖ್ಯಮಂತ್ರಿಗಳು ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಸಿ.ಎಂ ಹೆಸರು ಕೆಡಿಸುತ್ತಿರುವವರು ಅವರ ಕುಟುಂಬದವರೇ ಹೊರತು ಹೊರಗಿನವರಲ್ಲ’ ಎಂದು ಟೀಕಿಸಿದರು.

‘ವಿಜಯೇಂದ್ರನ ಕೈಕಾಲು ಒತ್ತುವವರಿಗೆ, ರಾತ್ರಿ ವ್ಯವಸ್ಥೆ ಮಾಡುವ ಚೇಲಾಗಳಿಗೆ ನಿಗಮ, ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

‘ಪಾಪ, ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರಿಗೆ ಏನೂ ತಿಳಿಯತ್ತಿಲ್ಲ. ವಿಜಯೇಂದ್ರ ಮತ್ತು ಕುಟುಂಬದವರು ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಕುಳಿತುವರ್ಗಾವಣೆ ದಂಧೆ, ವಸೂಲಿ ಕೆಲಸ ಮಾಡಿ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ’ ಎಂದರು.

ಯಡಿಯೂರಪ್ಪ ಕುಟುಂಬ ಇತ್ತೀಚೆಗೆ ಮಾರಿಷಸ್‌ಗೆ ವಿಶೇಷ ವಿಮಾನ ತೆಗೆದುಕೊಂಡು ಹೋಗಿದ್ದು ಏಕೆ? ಅಲ್ಲಿ ಇವರದೇನು ಹಣದ ವ್ಯವಹಾರ ನಡೆಯುತ್ತಿದೆ? ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಾಗಿದೆ ಎಂದು ಆಗ್ರಹಿಸಿದರು.

‘ತಮಗೆ ಬೇಡವಾದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರ ಬಳಿ ನಕಲಿ ಫೇಸ್‌ಬುಕ್‌ ಅಕೌಂಟ್‌, ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇದೆ’ ಎಂದು ದೂರಿದರು.

ಮರಳಿ ಭದ್ರತೆ: ಶಾಸಕ ಯತ್ನಾಳ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ತಿಂಗಳ ಹಿಂದೆ ಹಿಂಪಡೆದಿದ್ದಸರ್ಕಾರ, ಇದೀಗ ಮರಳಿ ಭದ್ರತೆಯನ್ನುಕಲ್ಪಿಸಿದೆ.

‘ನನಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸರು ಭದ್ರತೆಯನ್ನು ನೀಡಿದ್ದರು. ಆದರೆ, ದುರುದ್ದೇಶದಿಂದ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಆದರೆ, ವಾಸ್ತವದ ಅರಿವಿರುವುದರಿಂದ ಪೊಲೀಸರು ಯಾರ ಮಾತನ್ನು ಕೇಳದೇ ಮರಳಿ ಭದ್ರತೆ ಕಲ್ಪಿಸಿದ್ದಾರೆ’ ಎಂದು ಯತ್ನಾಳ ಹೇಳಿದರು.

‘ಟೀಕೆಯ ಪರಿಣಾಮ ಯತ್ನಾಳಗೆ ಮುಂದೆ ಗೊತ್ತಾಗಲಿದೆ’
ರಾಯಚೂರು:
‘ಶಾಸಕ ಬಸನಗೌಡ ಪಾಟೀಲ ಯತ್ನಾಳ‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸರ್ಕಾರದ ವಿರುದ್ಧ ಹೀಗೆಯೇ ಮಾತನಾಡುತ್ತಿದ್ದರೆ ಅದರ ಪರಿಣಾಮ ಏನು ಎಂಬುದು ಅವರಿಗೆಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ’ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ಶಾಸಕರಿಗೂ ಸರ್ಕಾರದ ಬಗ್ಗೆ ಬೇಸರ ಆಗಿಲ್ಲ. ಒಂದು ವೇಳೆ ಬೇಸರ ಆಗಿದ್ದರೆ, ಶಾಸಕರೇ ಹೇಳಿಕೊಳ್ಳುತ್ತಿದ್ದರು’ ಎಂದರು.

ರಾಜೀನಾಮೆ ನೀಡಿ ರಾಜ್ಯದ ಮಾನ ಉಳಿಸಿ– ಸುರ್ಜೇವಾಲಾ
ಬೆಂಗಳೂರು:
‘ಪ್ರತಿದಿನ ನಿಮ್ಮ ಸರ್ಕಾರದ ವಿರುದ್ದ ಹಲವು ಆರೋಪಗಳು ಕೇಳಿಬರುತ್ತಲೇ ಇವೆ. ನಿಮಗೆ ರಾಜ್ಯದ ಹಿತಾಸಕ್ತಿಯ ಕುರಿತು ಕಾಳಜಿ ಇದ್ದರೆ, ದಯಮಾಡಿ ರಾಜೀನಾಮೆ ನೀಡಿ, ರಾಜ್ಯದ ಮಾನ ಉಳಿಸಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಒತ್ತಾಯಿಸಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಇದೀಗ ನಿಮ್ಮದೇ ಪಕ್ಷದ ಶಾಸಕ (ಬಸನಗೌಡ ಪಾಟೀಲ ಯತ್ನಾಳ್‌) ಐಎಎಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ನೂರಾರು ಕೋಟಿಯ ಹೋಲ್ ಸೇಲ್ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಿದ್ದೂ ನೀವು ಆ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT