ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ: 9 ರಾಜ್ಯಗಳಲ್ಲೂ ಗೆಲುವಿಗೆ ಬಿಜೆಪಿ ಕಾರ್ಯತಂತ್ರ

Last Updated 16 ಜನವರಿ 2023, 21:26 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಈ ವರ್ಷ ನಡೆಯಲಿರುವ 9 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮಹತ್ವವನ್ನು ಒತ್ತಿ ಹೇಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ‘ಯಾವುದೇ ರಾಜ್ಯದಲ್ಲಿ ಪಕ್ಷ ಸೋಲದಂತೆ ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ನವದೆಹಲಿಯಲ್ಲಿ ಸೋಮವಾರ ಆರಂಭವಾದ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಮೂರನೇ ಸಲ ಅಧಿಕಾರದ ಚುಕ್ಕಾಣಿ ಹಿಡಿಯಲು ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಪಕ್ಷವು ಹಲವು ಕಸರತ್ತುಗಳನ್ನು ನಡೆಸುತ್ತಿದೆ. ಕಾರ್ಯಕಾರಿಣಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯಲ್ಲಿ ರೋಡ್‌ ಷೋ ನಡೆಸಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹುರುಪು ತುಂಬಿದರು.

ಕಾರ್ಯಕಾರಿಣಿಯಲ್ಲಿ ನಡ್ಡಾ ಮಾಡಿರುವ ಭಾಷಣದ ಬಗ್ಗೆ ಪಕ್ಷದ ಮುಖಂಡ ರವಿಶಂಕರ್ ಪ್ರಸಾದ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಆಗಿರುವ ಪ್ರಗತಿಯನ್ನು ನಡ್ಡಾ ಶ್ಲಾಘಿಸಿದರು ಎಂದು ರವಿಶಂಕರ್ ಪ್ರಸಾದ್‌ ತಿಳಿಸಿದರು.

‘ದುರ್ಬಲ ಮತಗಟ್ಟೆಗಳನ್ನು ಗುರುತಿಸಿ ಬಲವರ್ಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಸೂಚಿಸಿದ್ದರು. ಈಗಾಗಲೇ 70 ಸಾವಿರ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಂತಹ ಬೂತ್‌ ಗಳ ಸಂಖ್ಯೆ 1.30 ಲಕ್ಷ ಇದೆ. ಸಂಘಟನೆ ಬಲಪಡಿಸಿ ಅವುಗಳನ್ನು ಗೆಲ್ಲಲು ಕಾರ್ಯತಂತ್ರ ಹೆಣೆಯುವ ಬಗ್ಗೆಯೂ ಅಧ್ಯಕ್ಷರು ಸಲಹೆಗಳನ್ನು ನೀಡಿದರು’ ಎಂದರು.

ಇತ್ತೀಚಿನ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಅಸಾಧಾರಣ ಹಾಗೂ ಐತಿಹಾಸಿಕ ಎಂದು ಬಣ್ಣಿಸಿದ ನಡ್ಡಾ, ಪಕ್ಷವು 182 ಸ್ಥಾನಗಳ ಪೈಕಿ 156 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ ಎಂದರು.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಸೋಲಿನಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ಅಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಡೆದ ಮತಗಳ ಅಂತರ ಶೇ 1ಕ್ಕಿಂತಲೂ ಕಡಿಮೆ ಇದೆ ಎಂದರು.

‘ಭಾರತವು ವಿಶ್ವದ ಐದನೇಅತೀ ದೊಡ್ಡ ಆರ್ಥಿಕತೆ ಆಗಿದೆ. ಮೊಬೈಲ್‌ ಫೋನ್‌ಗಳ ಎರಡನೇ ಅತೀ ದೊಡ್ಡ ತಯಾರಕ ಹಾಗೂ ಆಟೋ ವಲಯದಲ್ಲಿ ಮೂರನೇ ದೊಡ್ಡ ತಯಾರಕ ಆಗಿದೆ. ಈ ಮೊದಲು ದಿನಕ್ಕೆ 12 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿತ್ತು. ಈಗ ಅದು 37 ಕಿ.ಮೀ.ಗೆ ಏರಿದೆ’ ಎಂದು ಅವರು ಹೇಳಿದರು.

ಉಚಿತ ಧಾನ್ಯ ವಿತರಣೆ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT